ಚಿಕ್ಕಮಗಳೂರು,ಅ.27- ಬೈಗೂರು ಗ್ರಾಮದ ನಿವೇದನ್‌ಗೆ ಸೇರಿದ ಜಮೀನಿನಲ್ಲಿ ಗ್ರಾಪಂ ಪಿಡಿಒ ಶರತ್ ಕುಮಾರ್ ಪಿಡಿ ಇವರ ಸೂಚನೆಯ ಮೇರೆಗೆ ಶಾಸನ ಸಂಶೋಧಕರಾದ ಮೇಕನಗ್ದೆ ಲಕ್ಷ್ಮಣಗೌಡರು 12ನೇ ಶತಮಾನಕ್ಕೆ ಸೇರಿದ ಹೊಯ್ಸಳರ ಕಾಲದ ವೀರಗಲ್ಲು ಶಾಸನವನ್ನು ಪತ್ತೆ ಹಚ್ಚಿದ್ದಾರೆ.
ಶಾಸನವು ನಾಲ್ಕು ಅಡಿ ಎತ್ತರವಿದ್ದು ಎರಡು ಅಡಿ ಅಗಲವಿದೆ. ಮೂರು ಹಂತಗಳಲ್ಲಿ ಆಕರ್ಷಕ ಶಿಲ್ಪಗಳ ಕೆತ್ತನೆಗಳಿದ್ದು ನಡುವಿನ ಎರಡು ಪಟ್ಟಿಗಳಲ್ಲಿ ಮತ್ತು ಆಚೀಚೆಯ ಎರಡು ಬದಿಗಳಲ್ಲಿ ಬರವಣಿಗೆ ಇದೆ.
ಒಟ್ಟು 8 ಸಾಲುಗಳಿರುವ ಈ ಶಾಸನದಲ್ಲಿ ಮೊದಲ ಹಂತದಲ್ಲಿರುವ ಕೆತ್ತನೆ ಹಾಗೂ ಒಂದಷ್ಟು ವಿವರಗಳು ಸವೆದು ಹೋಗಿವೆ. ಈ ಶಾಸನವು ಹೊಯ್ಸಳ ಆಳ್ವಿಕೆಯ ಕಾಲಕ್ಕೆ ಸಂಬಂಧಿಸಿದ ಕೆಲವು ಅಪರೂಪದ ಮಾಹಿತಿಗಳನ್ನು ತಿಳಿಸುತ್ತದೆ ಎಂದು ಶಾಸನವನ್ನು ಓದಿ ಪಠ್ಯ ತಯಾರಿಸಿರುವ ಮೈಸೂರಿನ ಶಾಸನ ತಜ್ಞರಾದ ಎಚ್. ಎಂ. ನಾಗರಾಜ್ ರಾವ್ ತಿಳಿಸಿದರು.
ಶಕ ವರ್ಷ 1043ರ ಶಾರ್ವರಿ ಸಂವತ್ಸರದಂದು ಅಂದರೆ 1220-21ನೇ ಇಸವಿಯಲ್ಲಿ ಹೊಯ್ಸಳ ದೊರೆ ಬಿಟ್ಟಿದೇವ ಮತ್ತು ಆತನ ಸಹೋದರ ಉದಯದಿತ್ಯ ಇವರು ಚೋಳಮಂಡಲವನ್ನು ಗೆದ್ದು ರಾಜ್ಯವಾಳ್ಳುತ್ತಿದ್ದು ದರ ಪ್ರಸ್ತಾಪವಿದೆ. ಉದಯದಿತ್ಯನು ಹಾಸನದ ಕೆಲವತ್ತಿಯ ಕೊಪ್ಪದಲ್ಲಿ ಮರಣ ಹೊಂದಿದಾಗ ಆತನೊಂದಿಗೆ ವೇಳೆಯಾಗಿ ಮರಣ ಹೊಂದಿದವರ ಬಗ್ಗೆ ಈಗಾಗಲೇ ಬೇರೆ ಶಾಸನಗಳಲ್ಲಿ ಉಲ್ಲೇಖವಿದೆ ಎಂದರು.
ಅದೇ ರೀತಿ ಉದಯಾದಿತ್ಯನ ಮಗಳು ಏಚಲ ದೇವಿಯವರು ನಿಧನವಾದಾಗ ಸಹ ಹಲವರು ವೇಳೆಯಾಗಿ ಮರಣ ಹೊಂದಿದ ಉಲ್ಲೇಖವೂ ಇತರ ಶಾಸನಗಳಲ್ಲಿ ಕಂಡು ಬರುತ್ತದೆ. ಅದೇ ರೀತಿ ಪ್ರಸ್ತುತ ಶಾಸನದಲ್ಲಿ ಏಚಲ ದೇವಿಯವರು ನಿಧನವಾದಾಗ ಚಿಕ್ಕ ಎಂಬ ವೀರನು ಮರಣ ಹೊಂದಿರುವ ಉಲ್ಲೇಖವಿದೆ. ಶಾಸನದ ನಡುವಿನ ಪಟ್ಟಿಯಲ್ಲಿ ಶಾಪಾಶಯ ವಾಕ್ಯಗಳಿವೆ. ಕೆಲವು ಅಕ್ಷರಗಳು ಸವೆದು ಹೋಗಿದ್ದು ಮಾಹಿತಿ ಅಸ್ಪಷ್ಟವಾಗಿದೆ. ಕಲ್ಲನ್ನು ಬೊಮಣ್ಣ ಎಂಬುವನು ಮಾಡಿಸಿದ ಉಲ್ಲೇಖವಿದೆ.
