ಚಿಕ್ಕಮಗಳೂರು,ಅ.15-ಕೌಟುಂಬಿಕ ಕಲಹದಿಂದ ಪತ್ನಿಯನ್ನು ಕತ್ತು ಸೀಳಿ ಕೊಲೆ ಮಾಡಿರುವ ಪ್ರಕರಣದಲ್ಲಿ ಆಕೆಯ ಪತಿ ಮತ್ತು ಮಾವನನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿಕ್ರಮ್ಅಮಟೆ ತಿಳಿಸಿದರು. ಆರೋಪಿ ಪತಿ ನವೀನ್ ಹಾಗೂ ಮಾವ ಮಂಜೇಗೌಡ ಬಂಧಿತರು . ಅತ್ತೆ ಕುಸುಮ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ತಿಳಿಸಿದರು.
ಆಲ್ದೂರು ಸಮೀಪದ ಹೊಸಳ್ಳಿ ಗ್ರಾಮದ ನೇತ್ರಾವತಿ ಸಕಲೇಶಪುರದ ನವೀನ್ನನ್ನು ಐದು ತಿಂಗಳ ಹಿಂದೆ ಧರ್ಮಸ್ಥಳದಲ್ಲಿ ಮದುವೆಯಾಗಿದ್ದರು. ಕೌಟುಂಬಿಕ ಕಲಹದ ಹಿನ್ನೆಲೆಯಿಂದಾಗಿ ನವೀನ್ ಸಕಲೇಶಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಇಬ್ಬರನ್ನು ಸಖಿ ಕೇಂದ್ರಕ್ಕೆ ಕರೆಸಿ ಕೌನ್ಸಿಲಿಂಗ್ ಕೂಡ ನಡೆಸಲಾಗಿತ್ತು. ಆದರೆ, ಇಬ್ಬರ ನಡುವೆ ಹೊಂದಾಣಿಕೆ ಬಾರದ ಹಿನ್ನಲೆಯಿಂದಾಗಿ ನೇತ್ರಾವತಿ ಕಳೆದ ಮೂರು ತಿಂಗಳಿಂದ ಆಲ್ದೂರು ಸಮೀಪದ ಹೊಸಳ್ಳಿ ಗ್ರಾಮದಲ್ಲಿನ ತವರು ಮನೆ ಸೇರಿದ್ದರು.
ಅ.12ರ ಸಂಜೆ 6.30ರ ಸುಮಾರಿನಲ್ಲಿ ನೇತ್ರಾವತಿ ಅವರ ಮನೆಗೆ ಹೋಗಿದ್ದ ನವೀನ್ ಮನೆಗೆ ವಾಪಸ್ ಬರುವಂತೆ ಹೇಳಿದಾಗ ನೇತ್ರಾವತಿ ನಿರಾಕರಿಸಿದ್ದಾಳೆ. ಇದರಿಂದ ಕೋಪಗೊಂಡ ನವೀನ್ ಚಾಕುವಿನಿಂದ ಕತ್ತು ಸೀಳಿ ಸ್ಥಳದಿಂದ ಪರಾರಿಯಾಗಿದ್ದ. ಗಂಭೀರಗಾಯಗೊಂಡಿದ್ದ ನೇತ್ರಾವತಿಅವರನ್ನು ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಲಕಾರಿಯಾಗದೆ ಮೃತಪಟ್ಟಿದ್ದಾರೆ.
ನೇತ್ರಾವತಿ ಸಂಬಂಧಿಕರು ನೀಡಿದ ದೂರಿನನ್ವಯ ಕಾರ್ಯಪ್ರವೃತ್ತರಾದ ಆಲ್ದೂರು ಠಾಣೆಯ ಪೊಲೀಸರು ನೇತ್ರಾವತಿ ಅವರ ಪತಿ ಹಾಗೂ ಮಾವನನ್ನುಬಂಧಿಸಿದ್ದಾರೆ. ನೇತ್ರಾವತಿ ಅತ್ತೆ ಕುಸುಮ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.