ಬೆಂಗಳೂರು,ಮಾ.11- ನಟಿ ರನ್ಯಾ ರಾವ್ ಚಿನ್ನ ಕಳ್ಳಸಾಗಾಣಿಕೆ ಪ್ರಕರಣದಲ್ಲಿ ಪೊಲೀಸ್ ಸಿಬ್ಬಂದಿಗಳು ಕರ್ತವ್ಯ ಲೋಪ ಎಸಗಿರಬಹುದಾದ ಸಂಭಾವ್ಯತೆ ಬಗ್ಗೆ ಸಿಐಡಿ ತನಿಖೆ ಕೈಗೊಂಡಿದೆ.
ದುಬೈನಿಂದ ನಗರಕ್ಕೆ ಅಕ್ರಮವಾಗಿ ಚಿನ್ನ ಸಾಗಾಣಿಕೆ ಮಾಡುತ್ತಿದ್ದ ಆರೋಪದ ಮೇರೆಗೆ ನಟಿ ರನ್ಯಾ ರಾವ್ ಅವರನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಡಿಆರ್‌ಐ ಅಧಿಕಾರಿಗಳು ಬಂಧಿಸಿದ್ದರು.
ರನ್ಯಾ ವಿದೇಶಗಳಿಗೆ ಹೋಗುವಾಗ ಮತ್ತು ವಾಪಸ್ ಬರುವ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿಗಳಿಂದ ಲೋಪಗಳು ಆಗಿರುವುದಾಗಿ ಮೇಲ್ನೋಟಕ್ಕೆ ಕಂಡು ಬಂದಿದೆ.
ಈ ಪ್ರಕಣದಲ್ಲಿ ಪೊಲೀಸ್ ಸಿಬ್ಬಂದಿಗಳ ಕರ್ತವ್ಯ ಲೋಪ ಎಸಗಿರಬಹುದಾದ ಸಂಭಾವ್ಯತೆ ಬಗ್ಗೆ ಸತ್ಯಾಸತ್ಯತೆ ತಿಳಿಯಲು ಸರ್ಕಾರ ಸಿಐಡಿ ತನಿಖೆಗೆ ವಹಿಸಿದೆ.
ಈ ಪ್ರಕರಣದ ವಿಚಾರಣೆಯನ್ನು ಶೀಘ್ರವಾಗಿ ಪೂರ್ಣಗೊಳಿಸಿ ಅದರ ವರದಿಯನ್ನು ಆದಷ್ಟು ಬೇಗ ಸರ್ಕಾರಕ್ಕೆ ಸಲ್ಲಿಸಬೇಕೆಂದು ಆದೇಶಿಸಲಾಗಿದೆ. ಸಿಐಡಿ ತನಿಖಾಧಿಕಾರಿಗಳಿಗೆ ವಿಚಾರಣೆ ನಡೆಸಲು ಸಂಬಂಧಪಟ್ಟ ಇಲಾಖೆಗಳು ಸಂಪೂರ್ಣ ಸಹಕಾರ ಮತ್ತು ಅವಶ್ಯಕ ದಾಖಲಾತಿಗಳನ್ನು ಸಹ ಒದಗಿಸಬೇಕೆಂದು ಸರ್ಕಾರ ತಿಳಿಸಿದೆ.
ರನ್ಯಾ ರಾವ್ ವಿಮಾನ ನಿಲ್ದಾಣಕ್ಕೆ ಬಂದಾಗ ಡಿಜಿಪಿ ಮಗಳೆಂದು ಆಕೆಯನ್ನು ಹೊರಗೆ ಕರೆತರಲು ಯತ್ನಿಸಿದ ವಿಮಾನ ನಿಲ್ದಾಣ ಪೊಲೀಸ್ ಠಾಣೆಯ ಹೆಡ್‌ಕಾನ್‌ಸ್ಟೇಬಲ್ ಹಾಗೂ ಅವರನ್ನು ಕಾರಿನಲ್ಲಿ ಕರೆದೊಯ್ಯಲು ಬಂದಿದ್ದ ಬೆಂಗಾವಲು ಪಡೆಯ ಸಿಬ್ಬಂದಿಯನ್ನು ವಶಕ್ಕೆ ಪಡೆದು ಡಿಆರ್‌ಐ ಅಧಿಕಾರಿಗಳು ವಿಚಾರಣೆ ನಡೆಸಿ ಕಳುಹಿಸಿದ್ದಾರೆ.
ಅಂದು ವಿಮಾನ ನಿಲ್ದಾಣಕ್ಕೆ ಬಂದಿಳಿದ ರನ್ಯಾ ರಾವ್ ಅವರನ್ನು ಡಿಆರ್‌ಐ ಅಧಿಕಾರಿಗಳು ತಪಾಸಣೆಗೆ ಒಳಪಡಿಸಿ 12 ಕೋಟಿ ಮೌಲ್ಯದ 14 ಕೆ.ಜಿ.ಚಿನ್ನದ ಗಟ್ಟಿಗಳನ್ನು ವಶಪಡಿಸಿಕೊಂಡಿದ್ದಾರೆ.