Monday, March 17, 2025
Homeರಾಜ್ಯತಂದೆಗೆ ಸಂಕಷ್ಟ ತಂದಿಟ್ಟ ರನ್ಯಾರಾವ್‌, ತನಿಖೆಗೆ ಸರ್ಕಾರ ಆದೇಶ

ತಂದೆಗೆ ಸಂಕಷ್ಟ ತಂದಿಟ್ಟ ರನ್ಯಾರಾವ್‌, ತನಿಖೆಗೆ ಸರ್ಕಾರ ಆದೇಶ

government orders investigation on Ranya Rao Father

ಬೆಂಗಳೂರು,ಮಾ.11-ರಾಜ್ಯ ರಾಜಕಾರಣದಲ್ಲಿ ಭಾರೀ ವಿವಾದ ಸೃಷ್ಟಿಸಿರುವ ಕನ್ನಡದ ಚಿತ್ರನಟಿ ರನ್ಯಾರಾವ್‌ ಚಿನ್ನ ಕಳ್ಳ ಸಾಗಾಣಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಪೊಲೀಸ್‌‍ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಹಾಗೂ ಡಿಜಿಪಿ ರಾಮಚಂದ್ರರಾವ್‌ಗೆ ಏಕಕಾಲದಲ್ಲಿ ಎರಡೆರಡು ಕಾನೂನಿನ ಸಂಕಷ್ಟಗಳು ಎದುರಾಗಿದೆ.

ಪ್ರಕರಣ ಸದ್ದು ಮಾಡುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ, ಚಿನ್ನ ಕಳ್ಳ ಸಾಗಾಣಿಕೆಯ ಪ್ರಮುಖ ರೂವಾರಿ ಹಾಗೂ ಪ್ರಸ್ತುತ ಡಿಆರ್‌ಐ ವಶದಲ್ಲಿರುವ ರನ್ಯಾರಾವ್‌ ಅವರ ಪ್ರಕರಣದಲ್ಲಿ ಹಾಲಿ ಡಿಜಿಪಿ ರಾಮಚಂದ್ರರಾವ್‌ ಅವರ ಪಾತ್ರದ ಕುರಿತು ತನಿಖೆಗೆ ಆದೇಶ ನೀಡಿದೆ.

ಇನ್ನೊಂದು ಮಹತ್ವದ ಬೆಳವಣಿಗೆಯಲ್ಲಿ ಪೊಲೀಸ್‌‍ ಸಿಬ್ಬಂದಿಗಳ ಕರ್ತವ್ಯಲೋಪ ಎಸಗಿರಬಹುದಾದ ಸಂಭಾವ್ಯದ ಕುರಿತು ಸರ್ಕಾರ ಸಿಐಡಿ ತನಿಖೆಗೆ ಆದೇಶ ಕೊಟ್ಟಿದೆ. ಈ ಎರಡು ಬೆಳವಣಿಗೆಗಳು ರಾಮಚಂದ್ರರಾವ್‌ ಅವರಿಗೆ ಭಾರೀ ಕಾನೂನಿನ ಸಂಕಷ್ಟವನ್ನು ತಂದೊಡ್ಡಿದೆ.

ಶಿಷ್ಟಾಚಾರ ಉಲ್ಲಂಘನೆ ತನಿಖೆ :
ದುಬೈನಿಂದ ಬೆಂಗಳೂರಿಗೆ ಬರುವ ವೇಳೆ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದಿದ್ದ ರನ್ಯಾರಾವ್‌ ಅವರಿಗೆ ನೀಡಿದ್ದ ಶಿಷ್ಟಾಚಾರ ನಿಯಮ ಉಲ್ಲಂಘನೆ ಕುರಿತು ರಾಜ್ಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವಗುಪ್ತ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿರುವ ರಾಜ್ಯ ಸರ್ಕಾರ ಒಂದು ವಾರದೊಳಗೆ ವರದಿ ನೀಡಬೇಕೆಂದು ಸೂಚನೆ ನೀಡಿದೆ.

ತನಿಖೆಗೆ ಅಗತ್ಯವಿರುವ ದಾಖಲೆಗಳು ಹಾಗೂ ಎಲ್ಲಾ ರೀತಿಯ ನೆರವುಗಳನ್ನು ತನಿಖಾಧಿಕಾರಿಗಳಿಗೆ ನೀಡಬೇಕೆಂದು ರಾಜ್ಯ ಪೊಲೀಸ್‌‍ ಮಹಾನಿರ್ದೇಶಕರು, ಕಾರ್ಯದರ್ಶಿಗಳು, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಅಧಿಕಾರಿಗಳಿಗೂ ಸೂಚನೆ ಕೊಡಲಾಗಿದೆ. ಆಡಳಿತ ಮತ್ತು ಸಿಬ್ಬಂದಿ ಸುಧಾರಣೆಯ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಾಗಪ್ಪ.ಎಸ್‌‍ ಪರೀಟ್‌ ಅಧಿಸೂಚನೆ ಹೊರಡಿಸಿದ್ದು, ಒಂದು ವಾರದೊಳಗೆ ತನಿಖಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕೆಂದು ಸೂಚನೆ ಕೊಟ್ಟಿದ್ದಾರೆ.

ರನ್ಯಾರಾವ್‌ ಚಿನ್ನದಗಟ್ಟಿಗಳನ್ನು ಅಕ್ರಮವಾಗಿ ದುಬೈನಿಂದ ಬೆಂಗಳೂರಿಗೆ ಸಾಗಣೆ ಮಾಡುತ್ತಿದ್ದ ಸಮಯದಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದಾರೆ.
ಪ್ರಕರಣದ ವಿಚಾರಣೆಯ ಸಮಯದಲ್ಲಿ ಬಂಧಿತ ರನ್ಯಾರಾವ್‌ ಅವರು ಶಿಷ್ಟಾಚಾರ ಸೌಲಭ್ಯಗಳನ್ನು ದುರ್ಬಳಕೆ ಮಾಡಿಕೊಂಡು, ಈ ಅಕ್ರಮವನ್ನು ಮಾಡಿರುವ ಬಗ್ಗೆ ವರದಿಯಾಗಿದೆ ಎಂದು ಉಲ್ಲೇಖಿಸಲಾಗಿದೆ.

ಅಲ್ಲದೇ ಉನ್ನತ ಅಧಿಕಾರಿಗಳಿಗೆ ವಿಮಾನ ನಿಲ್ದಾಣಗಳಲ್ಲಿ ನೀಡಲಾಗುವ ಶಿಷ್ಟಾಚಾರಗಳನ್ನು ಮಲತಂದೆ ಡಿಜಿಪಿ ರಾಮಚಂದ್ರರಾವ್‌ ಅವರ ಹೆಸರು ಬಳಸಿ, ಅವರಿಗೆ ನೀಡುವ ಶಿಷ್ಟಾಚಾರಗಳನ್ನು ದುರ್ಬಳಕೆ ಮಾಡಿಕೊಂಡು ವಿಮಾನನಿಲ್ದಾಣಗಳಲ್ಲಿ ತಪಾಸಣೆಗಳನ್ನು ತಪ್ಪಿಸಿಕೊಂಡು ಅಕ್ರಮ ಕೃತ್ಯಗಳನ್ನು ನಡೆಸಿರುವ ಬಗ್ಗೆ ವರದಿಯಾಗಿದೆ.

ಆದ್ದರಿಂದ ಶಿಷ್ಟಾಚಾರ ಸೌಲಭ್ಯಗಳ ಬಳಕೆಯನ್ನು ಪಡೆದುಕೊಳ್ಳಲು ಕಾರಣವಾದ ಸಂಗತಿಗಳು, ಸಂದರ್ಭಗಳು ಮತ್ತು ಈ ಪ್ರಕರಣದಲ್ಲಿ ರಾಮಚಂದ್ರ ರಾವ್‌ ಅವರ ಪಾತ್ರ ಕುರಿತು ತನಿಖೆ ನಡೆಸಿ ವರದಿ ನೀಡುವಂತೆ ಸೂಚನೆ ಕೊಡಲಾಗಿದೆ.

ಸಿಐಡಿ ತನಿಖೆಗೆ ಆದೇಶ:
ಪೊಲೀಸ್‌‍ ಸಿಬ್ಬಂದಿ ಪ್ರೋಟೋಕಾಲ್‌ ಉಲ್ಲಂಘನೆಯಲ್ಲಿ ಭಾಗಿಯಾಗಿರುವ ಬಗ್ಗೆ ಸಿಐಡಿ ತನಿಖೆ ನಡೆಸುವಂತೆ ಸಹ ಸರ್ಕಾರ ಆದೇಶ ನೀಡಿದೆ. ಈ ಬೆಳವಣಿಗೆಯಿಂದ ಇಬ್ಬರು ಪೊಲೀಸ್‌‍ ಕಾನ್‌ಸ್ಟೇಬಲ್‌ಗಳಿಗೆ ಸಂಕಷ್ಟ ಎದುರಾಗಿದೆ.

ಓರ್ವ ಶಿಷ್ಟಾಚಾರದ ಮುಖ್ಯಪೇದೆ, ಇನ್ನೊಬ್ಬ ಗುಪ್ತಚರ ಇಲಾಖೆ ಕಾನ್‌ಸ್ಟೇಬಲ್‌ ಆಗಿದ್ದರು. ರನ್ಯಾರಾವ್‌ ಏರ್‌ಪೋರ್ಟ್‌ಗೆ ಬಂದಾಗ ಪಾಳಿಯಲ್ಲಿ ಈ ಇಬ್ಬರೂ ಇದ್ದರು. ಪ್ರೋಟೋಕಾಲ್‌ ಕಾನ್‌ಸ್ಟೇಬಲ್‌ ಕರೆದ ಅಂತ ಗುಪ್ತಚರ ಇಲಾಖೆಯ ಅಧಿಕಾರಿಯೂ ರನ್ಯಾ ರಾವ್‌ ಭೇಟಿಗೆ ಹೋಗಿದ್ದರು. ಹೀಗಾಗಿ, ಇಬ್ಬರಿಗೂ ಕೂಡ ವಿಚಾರಣೆಯ ಬಿಸಿ ತಟ್ಟಿದೆ.

ರಾಮಚಂದ್ರರಾವ್‌ ಪ್ರಸ್ತುತ ಕರ್ನಾಟಕ ರಾಜ್ಯ ಪೊಲೀಸ್‌‍ ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.ರನ್ಯಾರಾವ್‌ ಅವರು ತಾವು ಐಪಿಎಸ್‌‍ ಅಧಿಕಾರಿಯ ಪುತ್ರಿ ಎಂದು ಹೇಳಿಕೊಂಡು ವಿಮಾನ ನಿಲ್ದಾಣಗಳಲ್ಲಿ ಶಿಷ್ಠಾಚಾರ ನಿಮಯ ಉಲ್ಲಂಘನೆ ಮಾಡಿ, ತಪಾಸಣೆಯಿಂದ ತಪ್ಪಿಸಿಕೊಳ್ಳುತ್ತಿದ್ದರು ಎಂದು ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಗೌರವ್‌ ಗುಪ್ತಾ ಸಮಿತಿ ರಚಿಸಿ ತನಿಖೆಗೆ ಆದೇಶ ನೀಡಲಾಗಿದೆ.

RELATED ARTICLES

Latest News