ಶ್ರೀನಗರ, ನ. 9 (ಪಿಟಿಐ) ಉಗ್ರರು ಬಳಸುವ ಸಿಮ್ ಕಾರ್ಡ್ ದುರ್ಬಳಕೆ ಪ್ರಕರಣದ ಬೆನ್ನತ್ತಿದ್ದಾರೆ ಕಾಶ್ಮೀರ ಪೊಲೀಸರು. ಭಯೋತ್ಪಾದಕರು ಸಿಮ್ ಕಾರ್ಡ್ಗಳನ್ನು ದುರುಪಯೋಗಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಶ್ಮೀರದ ಮೂರು ಜಿಲ್ಲೆಗಳ ವಿವಿಧ ಸ್ಥಳಗಳಲ್ಲಿ ಇಂದು ಗುಪ್ತಚರ ವಿಭಾಗ (ಸಿಐಕೆ) ಶೋಧ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೇಶ ವಿರೋಧಿ ಶಕ್ತಿಗಳು ಸಿಮ್ ಕಾರ್ಡ್ಗಳನ್ನು ದುರುಪಯೋಗಪಡಿಸಿಕೊಂಡ ಪ್ರಕರಣದ ತನಿಖೆಯ ಭಾಗವಾಗಿ ಸಿಐಕೆ ಕುಲ್ಗಾಮ್, ಕುಂಜರ್ (ಬಾರಾಮುಲ್ಲಾ) ಮತ್ತು ಶೋಪಿಯಾನ್ನಲ್ಲಿ ಶೋಧ ನಡೆಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶೋಧನೆಯ ಸಮಯದಲ್ಲಿ ಸಿಐಕೆ ಅಧಿಕಾರಿಗಳು ಕೆಲವು ಸಿಮ್ ಕಾರ್ಡ್ಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಅವರು ಹೇಳಿದರು.
ಇಲ್ಲಿಯವರೆಗೆ ಯಾರನ್ನೂ ಬಂಧಿಸಲಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಸಿಐಕೆ ಜಮ್ಮು ಮತ್ತು ಕಾಶ್ಮೀರ ಪೊಲೀಸರ ಅಡಿಯಲ್ಲಿ ವಿಶೇಷ ಘಟಕವಾಗಿದೆ. ಸಿಮ್ ಕಾರ್ಡ್ ದುರ್ಬಳಕೆ ಮಾಡಿಕೊಂಡಿರುವ ಬಗ್ಗೆ ಸಮಗ್ರ ಮಾಹಿತಿ ಸಂಗ್ರಹಿಸಲಾಗಿದ್ದು, ಅದಷ್ಟು ಬೇಗ ದೇಶದ್ರೋಹಿಗಳಿಗೆ ನೆರವು ನೀಡಿದವರನ್ನು ಬಂಧಿಸಲಾಗುವುದು ಎಂದು ಪೊಲೀಸರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
