ಬೆಂಗಳೂರು,ಜೂ.12- ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ನಗರ ಪೊಲೀಸ್ ಆಯುಕ್ತರಾದ ಬಿ.ದಯಾನಂದ ಅವರು ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ ಇಂದು ಬೆಳಗ್ಗೆ ಭೇಟಿ ನೀಡಿ ಪ್ರಕರಣದ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡರು.
ಈ ಪ್ರಕರಣದ ತನಿಖೆ ಯಾವ ರೀತಿ ನಡೆಯುತ್ತಿದೆ, ಏನೆಲ್ಲಾ ಮಾಹಿತಿಗಳನ್ನು ಆರೋಪಿಗಳಿಂದ ಪಡೆದುಕೊಳ್ಳಲಾಗಿದೆ, ಕೊಲೆಗೆ ಮೂಲ ಕಾರಣವೇನು? ಈ ಪ್ರಕರಣದಲ್ಲಿ ಇನ್ನು ಯಾರ್ಯಾರು ಭಾಗಿಯಾಗಿದ್ದಾರೆ, ಕೊಲೆ ನಂತರ ಮೃತದೇಹವನ್ನು ಸಾಗಿಸಲು ಯಾವ ವಾಹನಗಳನ್ನು ಬಳಸಲಾಗಿತ್ತು, ಆ ವಾಹನಗಳು ಯಾರಿಗೆ ಸೇರಿದ್ದು ಎಂಬಿತ್ಯಾದಿ ವಿವರಗಳನ್ನು ಸಂಗ್ರಹಿಸುವಂತೆ ಸೂಚನೆ ನೀಡಿದ್ದಾರೆ.
ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೇಕಾದಂತಹ ಸಾಕ್ಷ್ಯಾಧಾರಗಳನ್ನು ಬೇಗ ಸಂಗ್ರಹಿಸಬೇಕು ಎಂದು ಆಯುಕ್ತರು ಇದೇ ಸಂದರ್ಭದಲ್ಲಿ ತನಿಖಾಧಿಕಾರಿಗಳಿಗೆ ತಿಳಿಸಿದ್ದಾರೆ.ಇದೊಂದು ಗಂಭೀರ ಪ್ರಕರಣ. ಜಾಗರೂಕತೆಯಿಂದ ಬಹಳ ಎಚ್ಚರಿಕೆಯಲ್ಲಿ ತನಿಖೆ ನಡೆಸಬೇಕೆಂದು ತನಿಖಾಧಿಕಾರಿಗಳಿಗೆ ಸೂಚಿಸಿ ಕೆಲವೊಂದು ಮಾರ್ಗದರ್ಶನ ನೀಡಿದರು.
ಈ ಪ್ರಕರಣದಲ್ಲಿ ನಟಿ ಪವಿತ್ರಾ ಗೌಡ, ನಟ ದರ್ಶನ್ ಸೇರಿ 13 ಮಂದಿಯನ್ನು ಬಂಧಿಸಲಾಗಿದೆ. ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ಕೆಲವು ಆರೋಪಿಗಳನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಆಯುಕ್ತರು ಠಾಣೆಗೆ ಭೇಟಿ ನೀಡಿದ ಸಂದರ್ಭದಲ್ಲಿ ವಿಜಯನಗರ ಉಪವಿಭಾಗದ ಎಸಿಪಿ ಹಾಗೂ ಕಾಮಾಕ್ಷಿಪಾಳ್ಯ ಠಾಣೆ ಇನ್‌ಸ್ಪೆಕ್ಟರ್, ಸಬ್‌ಇನ್‌ಸ್ಪೆಕ್ಟರ್‌ಗಳು ಹಾಗೂ ಇನ್ನಿತರ ಸಿಬ್ಬಂದಿಗಳಿದ್ದರು.