ಬೆಂಗಳೂರು,ಮಾ.23- ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ಪ್ರಕರಣಗಳ ಇತ್ಯರ್ಥ ಮತ್ತು ನ್ಯಾಯಾಧೀಶರ ಹುದ್ದೆಗಳಲ್ಲಿ ಮಹಿಳಾ ಪ್ರಾತಿನಿಧ್ಯಕ್ಕೆ ಕರ್ನಾಟಕ ಮುಂಚೂಣಿಯಲ್ಲಿದೆ ಎಂದು ಸುಪ್ರೀಂಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಹೇಳಿದ್ದಾರೆ. ನಗರದ ಕೃಷಿ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ 21ನೇ ದ್ವೈವಾರ್ಷಿಕ ರಾಜ್ಯಮಟ್ಟದ ನ್ಯಾಯಾಂಗ ಅಧಿಕಾರಿಗಳ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕರ್ನಾಟಕದ ಜಿಲ್ಲಾ ನ್ಯಾಯಾಲಯಗಳಲ್ಲಿ 21.25 ಲಕ್ಷ ಪ್ರಕರಣಗಳು ದಾಖಲಾಗಿದ್ದವು. ಅವುಗಳಲ್ಲಿ 20.62 ಲಕ್ಷ ಪ್ರಕರಣಗಳು ಇತ್ಯರ್ಥಗೊಂಡಿವೆ. ಮೂರ್ನಾಲ್ಕು ಲಕ್ಷ ಪ್ರಕರಣಗಳು ಮಾತ್ರ ಬಾಕಿ ಉಳಿದಿವೆ. ಇದು ದೇಶಕ್ಕೆ ಮಾದರಿ ಎಂದರು.
ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ಮಹಿಳೆಯರ ಸಹಭಾಗಿತ್ವ ಶೇ.37 ರಷ್ಟಿದೆ. ಆದರೆ ಕರ್ನಾಟಕದ ನೇಮಕಾತಿ ಪ್ರಕ್ರಿಯೆಗಳಲ್ಲಿ 447 ಮಂದಿ ಜಿಲ್ಲಾ ಸಿವಿಲ್ ನ್ಯಾಯಾೀಧಿಶರ ಪೈಕಿ 200 ಮಂದಿ ಮಹಿಳೆಯರಿದ್ದಾರೆ. ಇದು ಶೇ.44 ರಷ್ಟು ಪಾಲು ಹೊಂದಿದೆ ಎಂದು ಹೇಳಿದರು. ಇದು ಯುವಸಮುದಾಯ ಕಾನೂನು ಸೇವೆಯನ್ನು ವೃತ್ತಿಯನ್ನಾಗಿ ಆಯ್ಕೆ ಮಾಡಿ ಕೊಳ್ಳಲು ಪ್ರೇರಣೆಯಾಗಿದೆ. ನ್ಯಾಯಾಂಗದಲ್ಲಿ ಮಹಿಳೆಯರ ಸಹಭಾಗಿತ್ವಕ್ಕೆ ಆದ್ಯತೆ ನೀಡುವ ಸಲುವಾಗಿ ಮತ್ತಷ್ಟು ಅಗತ್ಯ ಸೌಲಭ್ಯಗಳನ್ನು ಒದಗಿಸಲು ಬದ್ಧತೆ ಪ್ರದರ್ಶಿಸಲಾಗುತ್ತಿದೆ ಎಂದರು.
ಕರ್ನಾಟಕ ಸರ್ಕಾರ ನ್ಯಾಯಾಂಗದ ಸುಧಾರಣೆಗೆ ಸಾಕಷ್ಟು ಆರ್ಥಿಕ ನೆರವು ನೀಡುತ್ತಿದೆ. ಈ ಸೇವಾ ಕೇಂದ್ರಗಳು ಲ್ಯಾಪ್ಟಾಪ್ ಪೂರೈಕೆ ಸೇರಿದಂತೆ ಕೋಟ್ಯಂತರ ರೂಪಾಯಿಗಳನ್ನು ಖರ್ಚು ಮಾಡಲಾಗುತ್ತಿದೆ. ಜನರ ತೆರಿಗೆ ಆದಾಯದ ಬಳಕೆಗೆ ಅನುಗುಣವಾಗಿ ಗುಣಮಟ್ಟದ ಸೇವೆ ಒದಗಿಸಲು ನ್ಯಾಯಾಂಗ ಕೆಲಸ ಮಾಡಬೇಕು ಎಂದರು.
ಜಿಲ್ಲಾ ನ್ಯಾಯಾಲಯಗಳಲ್ಲಿರುವ ಒತ್ತಡ ನನಗೆ ಅರಿವಿದೆ. ಅದನ್ನು ನಿಭಾಯಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಮಾನವ ಸಂಪನ್ಮೂಲ, ಆಧುನಿಕತೆಯ ಅಳವಡಿಕೆ, ಇತರ ಉಪಕ್ರಮಗಳನ್ನು ಅಳವಡಿಸಿಕೊಳ್ಳಲಾಗಿದೆ. ದತ್ತಾಂಶ ಸಂಗ್ರಹದಲ್ಲಿ ಇಂದು ಸಾಕಷ್ಟು ಸುಧಾರಣೆಯಾಗಿದೆ. ನ್ಯಾಯಾಲಯ ತನ್ನ ಲಕ್ಷ್ಮಣರೇಖೆಯ ಇತಿಮಿತಿಯಲ್ಲಿ ಕೆಲಸ ನಿರ್ವಹಿಸುತ್ತಿದೆ ಎಂದು ಹೇಳಿದರು.
ತಮಗೆ ಬೆನ್ನುನೋವು ಹೆಚ್ಚಾದ ಹಿನ್ನೆಲೆಯಲ್ಲಿ ವೈದ್ಯರ ಸಲಹೆ ಮೇರೆಗೆ ನಾಲ್ಕೈದು ದಿನಗಳ ಹಿಂದೆ ಪ್ರಕರಣದ ವಿಚಾರಣೆಯ ವೇಳೆ ನಾನು ನನ್ನ ಮೊಣಕೈಗಳನ್ನು ವಿಶ್ರಾಂತಿಯ ಸ್ಥಿತಿಯಲ್ಲಿಟ್ಟು ಖುರ್ಚಿಯಲ್ಲಿ ಕುಳಿತುಕೊಂಡಿದ್ದೆ. ಅದಕ್ಕೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆಗಳು ನಡೆದಿದ್ದವು. ಮುಖ್ಯನ್ಯಾಯಮೂರ್ತಿಯವರು ಪ್ರಕರಣದ ವಿಚಾರಣೆಯಲ್ಲಿ ಅಹಮಿಕೆ ಪ್ರದರ್ಶಿಸುತ್ತಿದ್ದಾರೆ ಎಂಬ ಟೀಕೆಗಳು ಬಂದವು. ಸುಪ್ರೀಂಕೋರ್ಟ್ನ ಸ್ಥಿತಿಯೇ ಹೀಗಾದರೆ ಜಿಲ್ಲಾ ನ್ಯಾಯಾಲಯದ ಸ್ಥಿತಿ ನನಗೆ ಅರ್ಥವಾಗುತ್ತದೆ ಎಂದರು.
ಕರ್ನಾಟಕದೊಂದಿಗಿನ ತಮ್ಮ ಒಡನಾಟವನ್ನು ಸ್ಮರಿಸಿಕೊಂಡ ಚಂದ್ರಚೂಡ್ ಅವರು, ಬೆಂಗಳೂರು ಆಹ್ಲಾದಕರ ನಗರ. ನಾನು ಇಲ್ಲಿನ ಅಳಿಯ. ನನ್ನ ಅತ್ತೆ ಮತ್ತು ಅತ್ತಿಗೆ ನಿವೃತ್ತಿಯ ನಂತರ ಬೆಂಗಳೂರಿನಲ್ಲಿ ವಾಸವಿದ್ದಾರೆ. ಪದೇಪದೇ ಬೆಂಗಳೂರಿಗೆ ಭೇಟಿ ನೀಡುತ್ತಿರುತ್ತೇನೆ. ಬಾಲ್ಯದಲ್ಲಿ ಧಾರವಾಡದಲ್ಲಿ ರಜಾದಿನಗಳನ್ನು ಕಳೆದಿದ್ದೇನೆ ಎಂದರು.
ಜಿಲ್ಲಾ ನ್ಯಾಯಾಲಯಗಳು ಕಾನೂನು ವ್ಯವಸ್ಥೆಯ ಬೆನ್ನೆಲುಬು ಮತ್ತು ಮೂಲಾಧಾರ ಎಂಬುದನ್ನು ನಾನು ಬಲವಾಗಿ ನಂಬುತ್ತೇನೆ. ಜಿಲ್ಲಾ ನ್ಯಾಯಾೀಧಿಶರು ನ್ಯಾಯಾಂಗದ ಸಂಪರ್ಕದ ಮೊದಲ ಬಿಂದು. ನ್ಯಾಯಾಂಗದ ಅಧಿಕಾರಿಗಳು ನ್ಯಾಯ ವಿತರಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ ಎಂದು ಕನ್ನಡದಲ್ಲಿ ಹೇಳಿದರು.ಮುಖ್ಯ ನ್ಯಾಯಮೂರ್ತಿಯವರ ಕನ್ನಡ ಭಾಷೆಯ ಬಳಕೆಗೆ ಇಡೀ ಸಭಾಂಗಣ ಎದ್ದು ನಿಂತು ಚಪ್ಪಾಳೆ ತಟ್ಟಿ ಸ್ವಾಗತಿಸಿತು.
ಸುಪ್ರೀಂಕೋರ್ಟ್ನ ನ್ಯಾಯಮೂರ್ತಿ ಅರವಿಂದಕುಮಾರ್ ಮಾತನಾಡಿ, ಕರ್ನಾಟಕ ನ್ಯಾಯದಾನದಲ್ಲಿ ಮುಂಚೂಣಿಯಲ್ಲಿದೆ. 2020-21 ರಲ್ಲಿ ಶೇ.92 ರಷ್ಟು, 2022 ರಲ್ಲಿ ಶೇ.97 ರಷ್ಟು, 2023 ರಲ್ಲಿ ಶೇ.91.78 ರಷ್ಟು ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ. ನ್ಯಾಯಾಂಗದ ಅಧಿಕಾರಿಗಳು ದಕ್ಷತೆಯಿಂದ ಕೆಲಸ ಮಾಡುತ್ತಿದ್ದಾರೆ ಎಂದರು. ಈ ಮೊದಲು ಎಕ್ಸಿಕ್ಯೂಷನ್ ಪ್ರಕರಣಗಳಿಗೆ ಬಾಕಿ ಹಣ ಬಿಡುಗಡೆ ಮಾಡುವಂತೆ ಆಗಿನ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಲಾಗಿತ್ತು. ಕೋವಿಡ್ನ ಕಾರಣದಿಂದಾಗಿ ಹಣದ ಕೊರತೆಯಿದೆ ಎಂದು ಉತ್ತರ ನೀಡಿದ್ದರು.
ಭೂಸ್ವಾಧೀನ ವಿವಾದದಲ್ಲಿ 1.72 ಲಕ್ಷ ರೂ.ಗಳ ಪರಿಹಾರ ಪಾವತಿಸಬೇಕಾಗುತ್ತದೆ. 19 ವರ್ಷ ಪ್ರಕರಣದ ವಿಚಾರಣೆ ನಡೆದು ಪರಿಹಾರದ ಮೊತ್ತ 21 ಲಕ್ಷ ರೂ.ಗಳಿಗೆ ತಲುಪಿದೆ. ಈ ರೀತಿ 400 ಕೋಟಿ ರೂ.ಗಳ ಹಣ ಬಾಕಿ ಉಳಿದಿದೆ ಎಂದು ವಿವರಿಸಿದರು. ನ್ಯಾಯಾಂಗಾಧಿಕಾರಿಗಳು ಕಾಲಕಾಲಕ್ಕೆ ಸಮಾವೇಶಗಳನ್ನು ಮಾಡಿ ಕಾನೂನಿನ ತಿಳಿವಳಿಕೆಗಳನ್ನು ವಿನಿಮಯ ಮಾಡಿಕೊಳ್ಳಬೇಕೆಂದು ಸಲಹೆ ನೀಡಿದರು.
ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯ ಮಾತನಾಡಿ, ಲೋಕ ಅದಾಲತ್ನಲ್ಲಿ 29 ಲಕ್ಷ ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ. ಅವುಗಳಲ್ಲಿ 2 ಲಕ್ಷ ವಿಚಾರಣೆಗೆ ಬಾಕಿ ಇದ್ದ ಪ್ರಕರಣಗಳಾಗಿದ್ದರೆ, 26 ಲಕ್ಷ ತಗಾದೆ ಪೂರ್ವ ಪ್ರಕರಣಗಳಾಗಿವೆ. ನ್ಯಾಯಾೀಧಿಶರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಕುಟುಂಬಕ್ಕೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.