Thursday, December 12, 2024
Homeರಾಷ್ಟ್ರೀಯ | Nationalಸುಪ್ರೀಂಕೋರ್ಟ್‌ನ 51ನೇ ಮುಖ್ಯ ನ್ಯಾಯಮೂರ್ತಿಯಾಗಿ ಸಂಜೀವ್ ಖನ್ನಾ ನೇಮಕ ಬಹುತೇಕ ಖಚಿತ

ಸುಪ್ರೀಂಕೋರ್ಟ್‌ನ 51ನೇ ಮುಖ್ಯ ನ್ಯಾಯಮೂರ್ತಿಯಾಗಿ ಸಂಜೀವ್ ಖನ್ನಾ ನೇಮಕ ಬಹುತೇಕ ಖಚಿತ

CJI Chandrachud proposes Justice Sanjiv Khanna as successor

ನವದೆಹಲಿ,ಅ.17– ಭಾರತದ ಸುಪ್ರೀಂಕೋರ್ಟ್‌ನ 51ನೇ ಮುಖ್ಯ ನ್ಯಾಯಮೂರ್ತಿಯಾಗಿ ಮುಂದಿನ ಏಳು ತಿಂಗಳ ಅವಧಿಗೆ ಹಾಲಿ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು ನೇಮಕವಾಗುವುದು ಖಚಿತವಾಗಿದೆ. 64 ವರ್ಷದ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು ಸುಪ್ರೀಂಕೋರ್ಟ್ನ ಎರಡನೇ ಅತ್ಯಂತ ಹಿರಿಯ ನ್ಯಾಯಮೂರ್ತಿಗಳಾಗಿದ್ದಾರೆ. ಹಾಲಿ ಮುಖ್ಯ ನ್ಯಾಯಮೂರ್ತಿ ಬಿ.ವೈ.ಚಂದ್ರೂಡ್ ಅವರು ಮುಂದಿನ ತಿಂಗಳು ನವೆಂಬರ್ 10ರಂದು ಸೇವೆಯಿಂದ ನಿವೃತ್ತಿಯಾಗಲಿದ್ದಾರೆ. ತೆರವಾಗಲಿರುವ ಮುಖ್ಯ ನ್ಯಾಯಮೂರ್ತಿ ಸ್ಥಾನಕ್ಕೆ ಸೇವಾ ಹಿರಿತನದ ಮೇಲೆ ಸಂಜೀವ್ ಖನ್ನಾ ಅವರು ನೇಮಕವಾಗುವುದು ಬಹುತೇಕ ಖಚಿತ.

ಭಾರತ ಸಂವಿಧಾನದ ಪ್ರಕಾರ ಮುಖ್ಯ ನ್ಯಾಯಾಧಿಶರು 65ನೇ ವಯಸ್ಸಿನಲ್ಲಿ ನಿವೃತ್ತರಾಗಲಿರುವುದರಿಂದ ಹೊಸ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು 2025ರ ಮೇ ತಿಂಗಳಲ್ಲಿ ನಿವೃತ್ತರಾಗಲಿದ್ದಾರೆ. ಸಂಜೀವ್ ಖನ್ನಾ ಅವರಿಗಿಂತ ಅನೇಕ ಹಿರಿಯರು, ಅನುಭವಿಗಳಿದ್ದರೂ ಅವರನ್ನು 2019ರಲ್ಲಿ ಸುಪ್ರೀಂ ಕೋರ್ಟ್ಗೆ ನೇಮಕ ಮಾಡಿರುವುದು ಅನೇಕ ವಿವಾದಗಳಿಗೆ ಕಾರಣವಾಗಿತ್ತು.

ಸುಪ್ರೀಂಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಹುದ್ದೆಗೆ ತಮ್ಮ ಉತ್ತರಾಧಿಕಾರಿಯಾಗಿ ಸಂಜಿವ್ ಖನ್ನಾ ಹೆಸರನ್ನು ಸಿಜೆಐ ಡಿ.ವೈ ಚಂದ್ರಚೂಡ್ ಶಿಫಾರಸು ಮಾಡಿದ್ದಾರೆ. ಸುಪ್ರೀಂಕೋರ್ಟ್ನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ ವಿಚಾರವಾಗಿ ಕೊಲಿಜಿಯಂನಲ್ಲಿ ಬಿಕ್ಕಟ್ಟು ಎದುರಾಗಿರುವ ನಡುವೆಯೇ, ಸಂಪ್ರದಾಯಡಾಂತೆ ಸಿಜೆಐ ಅವರು ತಮ್ಮ ನಂತರದ ಹಿರಿಯ ನ್ಯಾಯಮೂರ್ತಿಯ ಹೆಸರನ್ನು ಶಿಫಾರಸ್ಸು ಮಾಡಿ ನ್ಯಾಯಮೂರ್ತಿ ಖನ್ನಾ ಅವರು ಉತ್ತರಾಧಿಕಾರಿಯಾಗಬೇಕು ಎಂದು ಕೇಂದ್ರಕ್ಕೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

1960ರ ಮೇ14ರಂದು ದೆಹಲಿ ಹೈಕೋರ್ಟ್ನ ಮಾಜಿ ನ್ಯಾಯಮೂರ್ತಿಯಾದ ದೇವ್‌ರಾಜ್ ಖನ್ನಾ ಅವರ ಮಗನಾಗಿ ಜನಿಸಿದ ಸಂಜೀವ್ ಖನ್ನಾ ದೆಹಲಿಯ ಪ್ರತಿಷ್ಠಿತ ಮಾಡರ್ನ್ ಸ್ಕೂಲ್‌ನಲ್ಲಿ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು. 1980ರಲ್ಲಿ ದೆಹಲಿ ವಿಶ್ವವಿದ್ಯಾಲಯದಿಂದ ಪದವಿ ಮತ್ತು ಅನಂತರ ದೆಹಲಿ ವಿಶ್ವವಿದ್ಯಾಲಯದಿಂದ ಕಾನೂನು ಪದವಿಯನ್ನು ಪಡೆದರು.

ಸಂಜೀವ್ ಖನ್ನಾ ಅವರು 1983ರಲ್ಲಿ ದೆಹಲಿಯ ಬಾರ್ ಕೌನ್ಸಿಲ್‌ನಲ್ಲಿ ವಕೀಲರಾಗಿ ಸೇರಿಕೊಂಡು ವೃತ್ತಿ ಜೀವನವನ್ನು ಪ್ರಾರಂಭಿಸಿದರು. ಬಳಿಕ ದೆಹಲಿಯ ತೀಸ್ ಹಜಾರಿಯಲ್ಲಿರುವ ಜಿಲ್ಲಾ ನ್ಯಾಯಾಲಯಗಳಲ್ಲಿ ಸೇವೆ ಸಲ್ಲಿಸಿದರು. ಅನಂತರ ದೆಹಲಿ ಹೈಕೋರ್ಟ್ ಸೇರಿದರು. ಸಾಂವಿಧಾನಿಕ ಕಾನೂನು, ತೆರಿಗೆ, ಮಧ್ಯಸ್ಥಿಕೆ, ವಾಣಿಜ್ಯ ವಿಷಯಗಳಲ್ಲಿ ಪರಿಣತಿ ಪಡೆದ ಅವರು ಸುಮಾರು ಏಳು ವರ್ಷಗಳ ಕಾಲ ದೆಹಲಿ ಹೈಕೋರ್ಟ್ನಲ್ಲಿ ಆದಾಯ ತೆರಿಗೆ ಇಲಾಖೆಯ ಹಿರಿಯ ದರ್ಜೆಯ ವಕೀಲರಾಗಿದ್ದರು. ವಿವಿಧ ಅಪರಾಧ ಪ್ರಕರಣಗಳಲ್ಲಿ ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ದೆಹಲಿ ಸರ್ಕಾರವನ್ನು ಪ್ರತಿನಿಧಿಸಿದ್ದರು. 2004ರಲ್ಲಿ ದೆಹಲಿ ಹೈಕೋರ್ಟ್ನಲ್ಲಿ ದೆಹಲಿ ಸರ್ಕಾರದ ಸಲಹೆಗಾರರಾಗಿ (ಸಿವಿಲ್) ನೇಮಕಗೊಂಡರು.

2005ರ ಜೂನ್ 24ರಂದು ದೆಹಲಿ ಹೈಕೋರ್ಟ್ನ ಹೆಚ್ಚುವರಿ ನ್ಯಾಯಾಧಿಶರಾಗಿ ಆಯ್ಕೆಗೊಂಡ ಹಲವಾರು ಕ್ರಿಮಿನಲ್ ಮೊಕದ್ದಮೆಗಳಲ್ಲಿ ವಾದಿಸಿದ್ದಾರೆ. ಬಳಿಕ 2006ರ -ಫೆಬ್ರವರಿ 20ರಂದು ದೆಹಲಿ ಹೈಕೋರ್ಟ್ನ ಕಾಯಂ ನ್ಯಾಯಾಧಿಶರಾಗಿ ನೇಮಕಗೊಂಡರು. 2018ರ ಡಿಸೆಂಬರ್ 12ರಂದು ಆಗಿನ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರ ನೇತೃತ್ವದ ಐದು ಸದಸ್ಯರ ಸಮಿತಿ ಖನ್ನಾ ಅವರನ್ನು ಸುಪ್ರೀಂ ಕೋರ್ಟ್ಗೆ ನೇಮಕ ಮಾಡಲು ಶಿಫಾರಸು ಮಾಡಿತ್ತು.

2019ರ ಜನವರಿ 18ರಂದು ಭಾರತದ ಸುಪ್ರೀಂ ಕೋರ್ಟ್ನ ನ್ಯಾಯಾಧಿಶರಾಗಿ ನ್ಯಾಯಮೂರ್ತಿ ಖನ್ನಾ ಅವರನ್ನು ನೇಮಕ ಮಾಡಲಾಗಿದ್ದು, ಇವರು 2025ರ ಮೇ 13ರಂದು ನಿವೃತ್ತರಾಗಲಿದ್ದಾರೆ. ಕಳೆದ ಏಪ್ರಿಲ್‌ನಲ್ಲಿ ಖನ್ನಾ ಅವರು ವಿದ್ಯುನ್ಮಾನ ಮತಯಂತ್ರಗಳಾದ ಇವಿಎಂಗಳಲ್ಲಿ ವಿವಿಪ್ಯಾಟ್ ಮೂಲಕ ಚಲಾವಣೆಯಾದ ಮತಗಳ ಮರು ಪರಿಶೀಲನೆಗೆ ಕೋರಿ ಸಲ್ಲಿಸಿದ ಅರ್ಜಿಯನ್ನು ವಜಾಗೊಳಿಸಿದ್ದರು. ಅಲ್ಲದೇ ಚುನಾವಣಾ ಬಾಂಡ್‌ಗಳಿಗೆ ಸಾಂವಿಧಾನಿಕ ಸಿಂಧುತ್ವ ರದ್ದುಗೊಳಿಸಿದ ಸುಪ್ರೀಂಕೋರ್ಟ್ ಪೀಠದಲ್ಲಿ ಖನ್ನಾ ಅವರೂ ಇದ್ದರು.

ಸಂಜೀವ್ ಖನ್ನಾ ಅವರು ಹಲವಾರು ಪ್ರಮುಖ ತೀರ್ಪುಗಳನ್ನು ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇದರಲ್ಲಿ ಚುನಾವಣಾ ಬಾಂಡ್ ಕುರಿತಾದ ತೀರ್ಪು ನೀಡಿದ ಪೀಠದ ಭಾಗವಾಗಿದ್ದ ಅವರು ರಾಜಕೀಯ ನಿಧಿಯಲ್ಲಿ ಪಾರದರ್ಶಕತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು.
ಎಲೆಕ್ಟಾನಿಕ್ ವೋಟಿಂಗ್ ಮೆಷಿನ್‌ಗಳಲ್ಲಿ ಚಲಾವಣೆಯಾದ ಮತಗಳ ಮರು ಪರಿಶೀಲನೆಗೊಳಿಸುರ್ವಾ ಅರ್ಜಿ ವಜಾ, ವ್ಯಕ್ತಿ ಸ್ವಾತಂತ್ರ್ಯ , ಗೌಪ್ಯತೆ ಮತ್ತು ಮಾನವ ಹಕ್ಕುಗಳಿಗೆ ಸಂಬಂಧಿಸಿದ ಹಲವು ಪ್ರಕರಣಗಳಲ್ಲಿ ಇವರು ತೀರ್ಪು ನೀಡಿದ್ದಾರೆ.

ಪರಿಸರ ಸುಸ್ಥಿರತೆಯೊಂದಿಗೆ ಆರ್ಥಿಕ ಅಭಿವೃದ್ಧಿಯನ್ನು ಸಮತೋಲನಗೊಳಿಸುವ ಹಲವು ಮಹತ್ವದ ತೀರ್ಪು ನೀಡಿರುವ ಖನ್ನಾ, ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂದಿಯಾಗಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಲೋಕಸಭೆ ಚುನಾವಣೆಯಲ್ಲಿ ಪ್ರಚಾರ ನಡೆಸಲು ಮಧ್ಯಂತರ ಜಾಮೀನು ಮಂಜೂರು ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ದೀಪಂಕರ್ ದತ್ತಾ ಅವರಿದ್ದ ಸುಪ್ರೀಂಕೋರ್ಟ್ ಪೀಠವು ಕೇಜ್ರಿವಾಲ್‌ಗೆ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು.
ಇದಲ್ಲದೆ ಸಂವಿಧಾನದ ಆರ್ಟಿಕಲ್ 370 ರದ್ದು, ಮನೀಶ್ ಸಿಸೋಡಿಯಾ ಅವರಿಗೆ ಜಾಮೀನು ನಿರಾಕರಣೆ ಸೇರಿದಂತೆ ಹಲವು ಪ್ರಮುಖ ತೀರ್ಪು ನೀಡುವಲ್ಲಿ ಸುಪ್ರೀಂ ಕೋರ್ಟ್ ನ ಪೀಠದಲ್ಲಿ ಸಂಜೀವ್ ಖನ್ನಾ ಪ್ರಮುಖ ಪಾತ್ರವಹಿಸಿದ್ದರು.

RELATED ARTICLES

Latest News