Saturday, July 27, 2024
Homeರಾಷ್ಟ್ರೀಯಇಂದು ಸಂಜೆ ಕಾಂಗ್ರೆಸ್‌‍ ಸಂಸದೀಯ ಸಭೆ, ವಿಪಕ್ಷ ನಾಯಕನಾಗಿ ರಾಹುಲ್‌ ಆಯ್ಕೆ ಸಾಧ್ಯತೆ

ಇಂದು ಸಂಜೆ ಕಾಂಗ್ರೆಸ್‌‍ ಸಂಸದೀಯ ಸಭೆ, ವಿಪಕ್ಷ ನಾಯಕನಾಗಿ ರಾಹುಲ್‌ ಆಯ್ಕೆ ಸಾಧ್ಯತೆ

ನವದೆಹಲಿ, ಜೂ.8- ಕಾಂಗ್ರೆಸ್‌‍ ಸಂಸದೀಯ ಪಕ್ಷದ ಸಭೆ ಇಂದು ಸಂಸತ್ತಿನ ಸೆಂಟ್ರಲ್‌ ಹಾಲ್‌ನಲ್ಲಿ ನಡೆಯಲಿದ್ದು, ರಾಹುಲ್‌ಗಾಂಧಿಯವರು ವಿರೋಧಪಕ್ಷದ ನಾಯಕನಾಗಿ ಆಯ್ಕೆಯಾಗುವ ಸಾಧ್ಯತೆಯಿದೆ.

ಲೋಕಸಭೆ ಮತ್ತು ರಾಜ್ಯಸಭೆ ಪಕ್ಷದ ಸಂಸದ ಸಭೆಯಲ್ಲಿ ಸೋನಿಯಾಗಾಂಧಿಯವರು ಕಾಂಗ್ರೆಸ್‌‍ ಸಂಸದೀಯ ಪಕ್ಷದ ಅಧ್ಯಕ್ಷರಾಗಿ ಮರು ಆಯ್ಕೆಯಾಗುವ ಸಾಧ್ಯತೆಯಿದೆ. ಇಂದು ಸಂಜೆ ನಡೆಯಲಿರುವ ಸಭೆಯಲ್ಲಿ ಈ ನಿರ್ಧಾರ ಹೊರಬೀಳಲಿದೆ.

ಕಾಂಗ್ರೆಸ್‌‍ ಪಕ್ಷ ಸಂಜೆ ಸಂಸದರ ಸಭೆ ಕರೆದಿದ್ದು, ಗೆಲುವಿನ ಸಂಭ್ರಮದ ಜೊತೆಗೆ ಸೋಲಿನ ಪರಾಮರ್ಶೆ ನಡೆಯಲಿದೆ. ಹಾಗೆಯೇ ಲೋಕಸಭೆಯಲ್ಲಿ ತಮ ನಾಯಕನ ಹೆಸರನ್ನು ನಿರ್ಧರಿಸಲಿದೆ.ಪಕ್ಷದ ನಾಯಕ ಸ್ಥಾನವನ್ನು ರಾಹುಲ್‌ಗಾಂಧಿ ವಹಿಸಿಕೊಳ್ಳಲಿದ್ದಾರೆ ಎಂದು ಪಕ್ಷದ ಮೂಲಗಳಿಂದ ತಿಳಿದುಬಂದಿದೆ.

ರಾಹುಲ್‌ಗಾಂಧಿಯವರು ಕೇರಳದ ವೈನಾಡು ಹಾಗೂ ಉತ್ತರಪ್ರದೇಶದ ರಾಯ್‌ಬರೇಲಿ ಲೋಕಸಭಾ ಕ್ಷೇತ್ರಗಳೆರಡರಲ್ಲೂ ಭರ್ಜರಿ ಜಯ ಗಳಿಸಿದ್ದಾರೆ.ರಾಹುಲ್‌ಗಾಂಧಿಯವರನ್ನು ಲೋಕಸಭೆಯಲ್ಲಿ ಪಕ್ಷದ ನಾಯಕರನ್ನಾಗಿ ಹೆಸರಿಸಲು ಅಥವಾ ಸೋನಿಯಾಗಾಂಧಿಯವರು ಬೇರೆ ನಾಯಕನನ್ನು ಆಯ್ಕೆ ಮಾಡಲು ನಿರ್ಧರಿಸಿದರೆ ಅದು ಅವರ ನಿರ್ಧಾರದ ಮೇಲೆ ಅವಲಂಬಿತವಾಗಿರುತ್ತದೆ ಎಂದು ಮೂಲಗಳು ತಿಳಿಸಿವೆ.

ಸಂಸದೀಯ ಪಕ್ಷದ ಅಧ್ಯಕ್ಷರಿಗೆ ಸಂಸತ್ತಿನ 2 ಸದನಗಳಲ್ಲಿ ಪಕ್ಷದ ನಾಯಕರ ಆಯ್ಕೆಯ ಅಧಿಕಾರವಿದೆ. ಹೀಗಾಗಿ ಇಂದು ಸಂಜೆ ಲೋಕಸಭೆ ಹಾಗೂ ರಾಜ್ಯಸಭೆ ನಾಯಕರ ಆಯ್ಕೆ ನಡೆಯಲಿದೆ. ಇದಕ್ಕೂ ಮುನ್ನ ಕಾರ್ಯಕಾರಿಣಿ ಸಭೆ ನಡೆಯಲಿದ್ದು, ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಸಾಧನೆ ಬಗ್ಗೆ ಚರ್ಚೆ ನಡೆಯಲಿದೆ.

ಕಳೆದ 2 ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌‍ ಪಕ್ಷ ಕೇವಲ 44 ಹಾಗೂ 52 ಸ್ಥಾನವನ್ನು ಗಳಿಸಿತ್ತು. ಆದರೆ ಈ ಬಾರಿ 99 ಸ್ಥಾನವನ್ನು ಗಳಿಸಿ ಉತ್ತಮ ಪ್ರದರ್ಶನ ನೀಡಿದೆ. ಅದರ ಕ್ರೆಡಿಟ್‌ ರಾಹುಲ್‌ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆಯವರಿಗೆ ಸಲ್ಲುತ್ತದೆ. ಕಾಂಗ್ರೆಸ್‌‍ ಇಂಡಿ ಒಕ್ಕೂಟದ ಭಾಗವಾಗಿ ಚುನಾವಣೆ ಎದುರಿಸಿತ್ತು ಮತ್ತು ಪಕ್ಷಗಳು ಒಟ್ಟಾಗಿ ಲೋಕಸಭೆಯಲ್ಲಿ ಬಿಜೆಪಿ ಬಹುಮತ ಪಡೆಯುವುದನ್ನು ತಡೆಯಲು ಸಾಧ್ಯವಾಯಿತು.ಈ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ 293 ಸ್ಥಾನಗಳನ್ನು ಗಳಿಸಿದರೆ, ಇಂಡಿ ಒಕ್ಕೂಟ 234 ಸ್ಥಾನಗಳನ್ನು ಗಳಿಸಿತ್ತು.

ಸಂಸತ್ತಿನ ಒಳಗೆ ಮತ್ತು ಹೊರಗೆ ಜನಪರ ಹೋರಾಟ ಮಾಡಲು ಇಂಡಿ ಒಕ್ಕೂಟ ನಿರ್ಧರಿಸಿದೆ. ಅತೀ ದೊಡ್ಡ ಸ್ಟಾಕ್‌ ಮಾರುಕಟ್ಟೆ ಹಗರಣ ಕುರಿತು, ಜಂಟಿ ಸಂಸದೀಯ ಸಮಿತಿಯ ತನಿಖೆಯ ಬೇಡಿಕೆ ಕುರಿತು ಇಂದು ಕಾರ್ಯಕಾರಿಣಿ ಸಭೆಯಲ್ಲಿ ಅಂಗೀಕಾರ ಕೈಗೊಳ್ಳುವ ಸಾಧ್ಯತೆಯಿದೆ.

ಸಭೆಯಲ್ಲಿ ಆಯ್ಕೆಯಾದ ಎಲ್ಲಾ ಲೋಕಸಭಾ ಸಂಸದರು ಹಾಗೂ ರಾಜ್ಯಸಭಾ ಸಂಸದರಿಗೆ ಸಿಡಬ್ಲ್ಯೂಸಿ ಮತ್ತು ಸಿಪಿಪಿ ಸದಸ್ಯರಿಗೆ ಸಂಜೆ 7 ಗಂಟೆಗೆ ಭೋಜನಾಕೂಟ ಆಯೋಜಿಸಲಾಗಿದೆ. ಸೋನಿಯಾಗಾಂಧಿ ಪ್ರಸ್ತುತ ರಾಜ್ಯಸಭಾ ಸದಸ್ಯೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನಖರ್ಗೆಯವರು ರಾಜ್ಯಸಭೆಯ ವಿರೋಧಪಕ್ಷದ ನಾಯಕರಾಗಿದ್ದಾರೆ.

RELATED ARTICLES

Latest News