ಬೆಂಗಳೂರು,ಡಿ.3- ಬೆಳಗಾವಿ ಚಳಿಗಾಲದ ವಿಧಾಮಂಡಲ ಅಧಿವೇಶನದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಹವಾಮಾನ ವೈಪರೀತ್ಯದಿಂದಾಗಿ ಮಂಗಳೂರು ಪ್ರವಾಸವನ್ನು ರದ್ದುಗೊಳಿಸಿದ ಮುಖ್ಯಮಂತ್ರಿಯವರು ಸಂಪನೂಲ ಕ್ರೋಢೀಕರಣ ಇಲಾಖೆಗಳ ಮುಖ್ಯಸ್ಥರ ಜೊತೆ ಚರ್ಚೆ ನಡೆಸಿದರು.
ಮಧ್ಯಾಹ್ನ ವಾಣಿಜ್ಯ ತೆರಿಗೆ ಇಲಾಖೆ, ಅಬಕಾರಿ ಇಲಾಖೆ, ನೋಂದಣಿ ಹಾಗೂ ಮುದ್ರಾಂಕ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಗಳ ಅಪರ ಮುಖ್ಯ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು, ಆಯುಕ್ತರು, ನಿರ್ದೇಶಕರ ಜೊತೆ ಸಂಪನೂಲ ಕ್ರೂಢೀಕರಣ ಮತ್ತು ಖರ್ಚು ವೆಚ್ಚಗಳ ಬಗ್ಗೆ ಮಾಹಿತಿ ಪಡೆದುಕೊಂಡರು.
ಬೆಳಗಾವಿ ಅಧಿವೇಶನದಲ್ಲಿ ರಾಜ್ಯಸರ್ಕಾರದ ಯೋಜನೆಗಳ ಬಗ್ಗೆ ಮಹತ್ವದ ಚರ್ಚೆ ನಡೆಯಲಿದೆ. ವಿರೋಧಪಕ್ಷಗಳು ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ ಎಂದು ಗಂಭೀರ ಆರೋಪ ಮಾಡುತ್ತಿದ್ದು, ಇದಕ್ಕೆ ಅಧಿಕೃತವಾಗಿ ಪ್ರತ್ಯುತ್ತರಿಸಲು ಮುಖ್ಯಮಂತ್ರಿ ಇಲಾಖಾಧಿಕಾರಿಗಳಿಂದ ಸಮಗ್ರ ಮಾಹಿತಿ ಪಡೆದುಕೊಂಡಿದ್ದಾರೆ.
ಪಂಚಖಾತ್ರಿ ಯೋಜನೆಗಳಿಗೆ ಸಾಕಷ್ಟು ಹಣ ಖರ್ಚಾಗುತ್ತಿದೆ. ಜೊತೆಗೆ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ನೀಡುತ್ತಿಲ್ಲ ಎಂದು ಆಡಳಿತ ಪಕ್ಷದ ಶಾಸಕರೇ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳ ಸಭೆ ಮಹತ್ವ ಪಡೆದುಕೊಂಡಿದೆ.