Monday, October 14, 2024
Homeರಾಜ್ಯಸಂಚಾರಿ ನಿಯಮ ಉಲ್ಲಂಘಿಸುವವರ ಚಾಲನಾ ಪರವಾನಗಿ ರದ್ದು ಮಾಡುವಂತೆ ಸಿಎಂ ಸೂಚನೆ

ಸಂಚಾರಿ ನಿಯಮ ಉಲ್ಲಂಘಿಸುವವರ ಚಾಲನಾ ಪರವಾನಗಿ ರದ್ದು ಮಾಡುವಂತೆ ಸಿಎಂ ಸೂಚನೆ

CM instructs to cancel driving license of traffic violators

ಬೆಂಗಳೂರು,ಸೆ.23– ಸಂಚಾರಿ ನಿಯಮಗಳನ್ನು ಉಲ್ಲಂಘಿಸುವವರಿಗೆ ಇನ್ನು ಮುಂದೆ ನೋಟಿಸ್ ನೀಡುವ ಬದಲು ಚಾಲನಾ ಪರವಾನಗಿಯನ್ನೇ ರದ್ದು ಮಾಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.

ವಿಧಾನಸೌಧದ ಮುಂಭಾಗದ ಮೆಟ್ಟಿಲುಗಳ ಮೇಲೆ ಮುಖ್ಯಮಂತ್ರಿಗಳ ಆಪತ್ಕಾಲಯಾನ ಸೇವೆ ಅಡಿಯಲ್ಲಿ ನೂತನವಾಗಿ 45 ಆ್ಯಂಬುಲೆನ್ಸ್ ಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಸರ್ಕಾರ ಎಷ್ಟೇ ಪ್ರಯತ್ನ ಮಾಡಿದರೂ ಜನಸಾಮಾನ್ಯರು ಹಾಗೂ ವಾಹನ ಸವಾರರು ನಿಯಮಗಳನ್ನು ಪಾಲನೆ ಮಾಡದೇ ಇದ್ದರೆ ಅಪಘಾತಗಳನ್ನು ಕಡಿಮೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.

ಅಪಘಾತದಂತಹ ಸಂದರ್ಭದಲ್ಲಿ ಯುವಕರು ಹಾಗೂ ವಿದ್ಯಾರ್ಥಿಗಳ ಜೀವಹಾನಿಯಾದರೆ ಮುಂದೆ ಅವರಿಂದ ದೇಶಕ್ಕೆ ದೊರೆಯಬಹುದಾದ ಸೇವೆಗಳು ಇಲ್ಲವಾಗುತ್ತವೆ. ಕುಟುಂಬಗಳು ಸಂಕಷ್ಟಕ್ಕೆ ಸಿಲುಕುತ್ತವೆ. ಗಾಯಾಳುಗಳಾದಾಗ ಜೀವನವೇ ತೊಂದರೆಗೊಳಗಾಗುತ್ತದೆ ಎಂದು ಹೇಳಿದರು.

ರಾಜ್ಯದಲ್ಲಿ ಪ್ರತಿವರ್ಷ 40 ಸಾವಿರ ಅಪಘಾತಗಳಾಗುತ್ತಿವೆ. ಅದರಲ್ಲಿ 9 ರಿಂದ 10 ಸಾವಿರ ಜನ ಜೀವ ಕಳೆದುಕೊಳ್ಳುತ್ತಿದ್ದಾರೆ. ಅಪಘಾತಗಳನ್ನು ತಗ್ಗಿಸಲು 2017 ರಲ್ಲಿ ರಸ್ತೆ ಸುರಕ್ಷತಾ ಪ್ರಾಧಿಕಾರ ರಚನೆಯಾಗಿದೆ. ಅದರಲ್ಲಿ ಸಂಗ್ರಹಿಸಲಾಗುವ ನಿಧಿಯಲ್ಲಿ 45 ಕೋಟಿ ರೂ.ಗಳನ್ನು ಆರೋಗ್ಯ ಇಲಾಖೆಗೆ ನೀಡಲಾಗಿದ್ದು, ಇದರಿಂದ 65 ಹೊಸ ಆ್ಯಂಬುಲೆನ್‌್ಸಗಳನ್ನು ಖರೀದಿಸಲಾಗಿದೆ ಎಂದರು.

ಅಪಘಾತಗಳಾದ ಸಂದರ್ಭದಲ್ಲಿ ಸುವರ್ಣ ಸಮಯ ಎಂದು ಹೇಳಲಾಗುವ ಒಂದು ಗಂಟೆಯಲ್ಲಿ ಚಿಕಿತ್ಸೆ ದೊರೆತರೆ ಜೀವರಕ್ಷಣೆ ಸಾಧ್ಯವಾಗುತ್ತದೆ. ಅದಕ್ಕಾಗಿ ಇಂದು ಲೋಕಾರ್ಪಣೆಗೊಂಡ ಆ್ಯಂಬುಲೆನ್‌್ಸಗಳ ಪೈಕಿ 30 ರಲ್ಲಿ ಜೀವರಕ್ಷಕ ಸಲಕರಣೆಗಳ ಜೊತೆಗೆ ವೆಂಟಿಲೇಟರ್, ಔಷಧಿ ಹಾಗೂ ತಂತ್ರಜ್ಞ ಸಿಬ್ಬಂದಿಗಳು ಇರಲಿದ್ದು, ಜೀವರಕ್ಷಣೆಗೆ ಶ್ರಮಿಸಲಿದ್ದಾರೆ.

ಹತ್ತಿರದ ತಾಲ್ಲೂಕು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಅಗತ್ಯವಿದ್ದರೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಕರೆದೊಯ್ದು ಜೀವರಕ್ಷಣೆ ಮಾಡುವ ಪ್ರಯತ್ನಗಳಾಗುತ್ತವೆ ಎಂದರು.ಸಂಚಾರ ನಿಯಮಗಳನ್ನು ಪಾಲನೆ ಮಾಡಿದರೆ ಅಪಘಾತಗಳು ಕಡಿಮೆಯಾಗುತ್ತವೆ. ಕುಡಿದು ವಾಹನ ಓಡಿಸಬೇಡಿ ಎಂದರೆ ನಾಮಫಲಕ ನೋಡಿಯೇ ವಾಹನ ಚಲಾಯಿಸುತ್ತಾರೆ.

ಇಲ್ಲಿ ಮೂತ್ರವಿಸರ್ಜನೆ ಮಾಡಬೇಡಿ ಎಂದು ಬೋರ್ಡ್ ಇದ್ದರೆ ನಿಷೇಧಿತ ಕೆಲಸವನ್ನು ಅಲ್ಲಿಯೇ ಮಾಡಿ ಸಬೂಬು ಹೇಳುತ್ತಾರೆ. ಈ ರೀತಿಯ ಧೋರಣೆಗಳನ್ನು ಜನರು ಬಿಟ್ಟು ಬದಲಾಗಬೇಕು. ನಿಯಮ ಪಾಲನೆ ಪ್ರತಿಯೊಬ್ಬರ ಜವಾಬ್ದಾರಿ. ವಾಹನಗಳನ್ನು ಸುರಕ್ಷತಾ ಸ್ಥಿತಿಯಲ್ಲಿಟ್ಟುಕೊಂಡಿರಬೇಕು. ನನಗೆ ಡ್ರೈವಿಂಗ್ ಬರುವುದಿಲ್ಲ, ತುಂಬಾ ಜನ ಫೋನಿನಲ್ಲಿ ಮಾತನಾಡುತ್ತಲೇ ವಾಹನ ಚಲಾವಣೆ ಮಾಡುವುದನ್ನು ನೋಡಿದ್ದೇನೆ. ವೇಗಮಿತಿ 80 ಕಿ.ಮೀ. ಇದ್ದರೆ 120 ಕಿ.ಮೀ. ವೇಗದಲ್ಲಿ ಗಾಡಿ ಓಡಿಸುತ್ತಾರೆ ಎಂದು ಹೇಳಿದರು.

ಸಂಚಾರ ನಿಯಮಗಳನ್ನು ಉಲ್ಲಂಘನೆ ಮಾಡಿದರೆ ಚಾಲನಾ ಪರವಾನಗಿ ರದ್ದು ಮಾಡುವ ವ್ಯವಸ್ಥೆ ವಿದೇಶದಲ್ಲಿದೆ. ನಮಲ್ಲೂ ಅದೇ ಪದ್ಧತಿಯನ್ನು ಪಾಲನೆ ಮಾಡಿ. ನೋಟಿಸ್ ಕೊಡುವುದು ಬೇಡ. ನೇರವಾಗಿ ಪರವಾನಗಿ ರದ್ದು ಮಾಡಿ, ತಪ್ಪು ಮಾಡಿದವರು ಕೋರ್ಟ್ಗೆ ಹೋಗಲಿ ಎಂದು ಸೂಚನೆ ನೀಡಿದರು.

ಕೊಲೆ ಮಾಡಿದರೆ ಜೀವಾವಧಿ ಶಿಕ್ಷೆಯಾಗುತ್ತದೆ ಎಂದು ಗೊತ್ತಿದ್ದೂ ಹತ್ಯೆ ಮಾಡುತ್ತಾರೆ. ಜೈಲಿಗೆ ಹೋದರೂ ಪರವಾಗಿಲ್ಲ. ನಿನ್ನನ್ನು ಮುಗಿಸುತ್ತೇನೆ ಎಂದು ಧಮ್ಕಿ ಹಾಕವುದು ಕಂಡುಬರುತ್ತಿದೆ. ಇದು ಸರಿಯಲ್ಲ ಎಂದು ಹೇಳಿದರು.ಸಚಿವರಾದ ರಾಮಲಿಂಗಾರೆಡ್ಡಿ, ದಿನೇಶ್ಗುಂಡೂರಾವ್, ಶಾಸಕರಾದ ರೂಪಕಲಾ, ನಾಗರಾಜ್ ಯಾದವ್ ಮತ್ತಿತರರು ಉಪಸ್ಥಿತರಿದ್ದರು.

RELATED ARTICLES

Latest News