Wednesday, April 2, 2025
Homeರಾಜ್ಯಬಿಎಂಟಿಸಿಯ ನೂತನ ಬಸ್‌‍ಗಳಿಗೆ ಚಾಲನೆ ನೀಡಿ, ಸಿಟಿ ರೌಡ್ಸ್ ಹಾಕಿದ ಸಿಎಂ

ಬಿಎಂಟಿಸಿಯ ನೂತನ ಬಸ್‌‍ಗಳಿಗೆ ಚಾಲನೆ ನೀಡಿ, ಸಿಟಿ ರೌಡ್ಸ್ ಹಾಕಿದ ಸಿಎಂ

CM launched the new buses of BMTC

ಬೆಂಗಳೂರು,ಸೆ.12- ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ರವರ ಅನುಪಸ್ಥಿತಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಬೆಂಗಳೂರು ನಗರ ಪ್ರದಕ್ಷಿಣೆ ನಡೆಸಿದ್ದಾರೆ.ವಿಧಾನಸೌಧದ ಮೆಟ್ಟಿಲುಗಳ ಬಳಿ ಬಿಎಂಟಿಸಿಯ ನೂತನ ಬಸ್‌‍ಗಳಿಗೆ ಚಾಲನೆ ನೀಡಿದ ಬಳಿಕ ತಮ ಪ್ರಯಾಣ ಆರಂಭಿಸಿದ ಸಿದ್ದರಾಮಯ್ಯ ಅವರು, ರಾಜಭವನ ರಸ್ತೆ ಮೂಲಕ ಚಾಲುಕ್ಯ ಸರ್ಕಲ್‌, ಹೈಗ್ರೌಂಡ್ಸ್ ಸರ್ಕಲ್‌ ಮೂಲಕ ಬಳ್ಳಾರಿ ರಸ್ತೆಯಲ್ಲಿ ಪ್ರಯಾಣ ಮುಂದುವರೆಸಿದರು.

ಮೇಕ್ರಿವೃತ್ತದ ಬಳಿಯಿಂದ ಹೆಬ್ಬಾಳಕ್ಕೆ ತೆರಳಿ ಅಲ್ಲಿ ಹೆಚ್ಚುವರಿ ಸೇತುವೆ ನಿರ್ಮಾಣ ಕಾಮಗಾರಿಯನ್ನು ಪರಿಶೀಲನೆ ನಡೆಸಿದರು. ಜೊತೆಗೆ ಅಲ್ಲಿಯೇ ನಡೆಯುತ್ತಿರುವ ಕೆಳಸೇತುವೆ ಹಾಗೂ ಮೇಲ್ಸೇತುವೆಗಳ ನಿರ್ಮಾಣ ಕಾಮಗಾರಿಯನ್ನು ಖುದ್ದು ಪರಿಶೀಲಿಸಿದರು.

ಕೆ.ಆರ್‌.ಪುರಂಗೆ ತೆರಳಿದ ಮುಖ್ಯಮಂತ್ರಿಗಳು ಹೊರವರ್ತುಲ ರಸ್ತೆ ದುರಸ್ಥಿ ಹಾಗೂ ಬಿಎಂಆರ್‌ಸಿಎಲ್‌ನ ಮೆಟ್ರೋ ಕಾಮಗಾರಿಗಳ ಪರಿಶೀಲನೆ ನಡೆಸಿದರು.ಕೆಲ ದಿನಗಳ ಹಿಂದೆ ಕಂದಾಯ ಸಚಿವ ಕೃಷ್ಣಾಭೈರೇಗೌಡ ಹೊರವರ್ತುಲ ರಸ್ತೆಯಲ್ಲಿನ ಗುಂಡಿಗಳ ಫೋಟೊ ಲಗತ್ತಿಸಿ ಯಾರಾದರೂ ಈ ಗುಂಡಿಗಳನ್ನುಮುಚ್ಚಿಸಿ ಎಂದು ಮನವಿ ಮಾಡಿದ್ದರು. ಇದು ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು. ಸರ್ಕಾರದ ಸಚಿವರೇ ಈ ರೀತಿ ಅಂಗಲಾಚುವ ಪರಿಸ್ಥಿತಿ ಬಂದಿದೆ. ಬೆಂಗಳೂರಿನಲ್ಲಿ ಯಾರು, ಯಾರ ಮಾತನ್ನೂ ಕೇಳುತ್ತಿಲ್ಲ ಎಂಬ ಟೀಕೆಗಳು ವ್ಯಕ್ತವಾಗಿದ್ದವು.

ಕೆ.ಆರ್‌.ಪುರಂ ಸಂಪರ್ಕಿಸುವ ಹೊರವರ್ತುಲ ರಸ್ತೆಗಳಲ್ಲಿ ತೀವ್ರ ಸ್ವರೂಪದ ಗುಂಡಿಗಳು ಕಂಡುಬಂದಿದ್ದವು. ಜೊತೆಗೆ ಬೆಂಗಳೂರಿನಾದ್ಯಂತ ಇರುವ ಎಲ್ಲಾ ಗುಂಡಿಗಳನ್ನು 15 ದಿನದೊಳಗೆ ದುರಸ್ಥಿ ಮಾಡದೇ ಇದ್ದರೆ ಸಂಬಂಧಪಟ್ಟ ಅಧಿಕಾರಿಗಳನ್ನು ಅಮಾನತುಪಡಿಸುವುದಾಗಿ ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿರುವ ಡಿ.ಕೆ.ಶಿವಕುಮಾರ್‌ ಎಚ್ಚರಿಕೆ ನೀಡಿದರು.

ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ತರಾತುರಿಯಲ್ಲಿ ಗುಂಡಿಗಳನ್ನು ಮುಚ್ಚುತ್ತಿದ್ದು, ಕೆಲವು ಕಡೆ ಆಧುನಿಕ ತಂತ್ರಜ್ಞಾನವನ್ನು ಬಳಕೆ ಮಾಡುತ್ತಿರುವುದು ಕಂಡುಬಂದಿದೆ.ಡಿ.ಕೆ.ಶಿವಕುಮಾರ್‌ ಅಮೆರಿಕಾ ಪ್ರವಾಸದಲ್ಲಿದ್ದರೂ ಬೆಂಗಳೂರಿನಲ್ಲಿ ಗುಂಡಿ ಮುಚ್ಚುವ ಕೆಲಸ ಭರದಿಂದ ಮುಂದುವರೆದಿದೆ. ಈ ನಡುವೆ ಸಿದ್ದರಾಮಯ್ಯ ಅವರು ಬೆಂಗಳೂರು ವೀಕ್ಷಣೆ ನಡೆಸಿದ್ದಾರೆ.

ಕೆ.ಆರ್‌.ಪುರಂನಿಂದ ವೀರಣ್ಣನಪಾಳ್ಯ ಜಂಕ್ಷನ್‌, ನಾಗಾವರ ಜಂಕ್ಷನ್‌, ಬೆಂಗಳೂರು ಮುಖ್ಯರಸ್ತೆಯನ್ನು ಪರಿಶೀಲಿಸಿ ಕೆ.ಆರ್‌.ಪುರಂ ಬಳಿ ಯುಟರ್ನ್‌ ಪಡೆದು ಇಂದಿರಾನಗರ ಮಾರ್ಗವಾಗಿ ಗುರುದ್ವಾರ ಜಂಕ್ಷನ್‌, ಹಲಸೂರು ರಸ್ತೆ, ಕಬ್ಬನ್‌ ರಸ್ತೆಗಳನ್ನು ಪರಿಶೀಲನೆ ನಡೆಸಿದ್ದಾರೆ. ಅಲ್ಲಲ್ಲಿ ಕಂಡುಬಂದ ರಸ್ತೆಗುಂಡಿಗಳನ್ನು ವೀಕ್ಷಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

RELATED ARTICLES

Latest News