Wednesday, October 16, 2024
Homeರಾಜ್ಯನಾಗಮಂಗಲ ಗಲಭೆ : ಅನಗತ್ಯವಾಗಿ ಪ್ರಚೋದನಾಕಾರಿ ಹೇಳಿಕೆ ನೀಡದಂತೆ ಸಚಿವ ಚೆಲುವರಾಯಸ್ವಾಮಿ ಮನವಿ

ನಾಗಮಂಗಲ ಗಲಭೆ : ಅನಗತ್ಯವಾಗಿ ಪ್ರಚೋದನಾಕಾರಿ ಹೇಳಿಕೆ ನೀಡದಂತೆ ಸಚಿವ ಚೆಲುವರಾಯಸ್ವಾಮಿ ಮನವಿ

Nagamangala Riot: Minister Cheluvarayaswamy appeals not to make unnecessarily provocative statements

ಮಂಡ್ಯ,ಸೆ.12- ನಾಗಮಂಗಲದ ಗಣೇಶನ ಗಲಭೆ ಪ್ರಕರಣದಲ್ಲಿ ಅನಗತ್ಯವಾಗಿ ಪ್ರಚೋದನಾಕಾರಿ ಹೇಳಿಕೆ ನೀಡದೇ ಪರಿಸ್ಥಿತಿ ತಿಳಿಗೊಳ್ಳಲು ಸಹಕರಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಹಾಗೂ ಕೃಷಿ ಸಚಿವ ಚೆಲುವರಾಯಸ್ವಾಮಿ ಮನವಿ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾವು ಪ್ರವಾಸದಲ್ಲಿದ್ದು ನಿನ್ನೆ ಸಂಜೆಯಷ್ಟೇ ವಿಮಾನದಲ್ಲಿ ಬಂದಿಳಿದೆ.

ಈ ನಡುವೆ ನಾಗಮಂಗಲದಲ್ಲಿ ಗಲಭೆ ಸಂಭವಿಸಿದೆ ಎಂದು ಮಾಹಿತಿ ತಿಳಿಯಿತು. ತಕ್ಷಣವೇ ಎಸ್ಪಿ, ಐಜಿಪಿ, ಎಡಿಜಿಪಿ ಅವರಿಗೆ ಕರೆ ಮಾಡಿ ಸ್ಥಳಕ್ಕೆ ತೆರಳುವಂತೆ ಸೂಚನೆ ನೀಡಿದ್ದೆ. ಸ್ಥಳೀಯ ಅಧಿಕಾರಿಗಳ ಜೊತೆ ಚರ್ಚೆ ಮಾಡಿದ್ದೇನೆ. ಗಣಪತಿ ಮೂರ್ತಿಯ ಮೆರವಣಿಗೆಯ ವೇಳೆ ಎರಡು ಸಮುದಾಯಗಳ ನಡುವೆ ಕೂಗಾಟ ಹಾಗೂ ಘರ್ಷಣೆ ನಡೆದಿದೆ.

ಒಂದು ಸಮುದಾಯ ಪೊಲೀಸ್‌‍ ಠಾಣೆಯ ಮುಂದೆ ಗಣೇಶನನ್ನು ಇಟ್ಟುಕೊಂಡು ಪ್ರತಿಭಟನೆ ನಡೆಸಿದೆ, ಆಗ ಮತ್ತೆ ವಾಗ್ವಾದ ನಡೆದು ಸಂಘರ್ಷ ಹೆಚ್ಚಾಗಿದೆ. ತಕ್ಷಣವೇ ಪೊಲೀಸರು ಸ್ಥಳಕ್ಕೆ ಬಂದು ತಿಳಿ ಹೇಳುವ ಪ್ರಯತ್ನ ಮಾಡಿದ್ದಾರೆ ಎಂದು ಹೇಳಿದರು.

ಅನಗತ್ಯವಾಗಿ ಸಂಘರ್ಷ ಬೇಡ. ಅನಾಹುತಗಳಾದರೆ ಅದರಿಂದಾಗುವ ನಷ್ಟ ತೀವ್ರವಾಗಿರುತ್ತದೆ. ಯಾರೂ ದುಡುಕಬೇಡಿ, 40 ವರ್ಷಗಳಿಂದ ನಾಗಮಂಗಲದಲ್ಲಿ ಶಾಂತಿ ನೆಲೆಸಿದೆ. ದೇವರ ಕೆಲಸ ಗಲಭೆಗೆ ಕಾರಣವಾಗುವುದು ಬೇಡ ಎಂದು ತಾವು ಮನವಿ ಮಾಡಿದ್ದು, ಕೊನೆಗೆ ಗಣೇಶ ವಿಸರ್ಜನೆಯಾಗಿದೆ.

ಸಂಘರ್ಷದಲ್ಲಿ ಒಂದಿಷ್ಟು ಸಣ್ಣಪುಟ್ಟ ಘಟನೆಗಳು ನಡೆದಿವೆ. ಅಂಗಡಿಗಳಿಗೆ, ಬೈಕ್‌ಗಳಿಗೆ ಹಾನಿಯಾಗಿದೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹಸಚಿವ ಡಾ.ಜಿ.ಪರಮೇಶ್ವರ್‌ ತಮ ಜೊತೆ ಚರ್ಚೆ ನಡೆಸಿದ್ದಾರೆ. ಅಧಿಕಾರಿಗಳಿಗೂ ಸೂಕ್ತ ಸೂಚನೆ ನೀಡಿದ್ದಾರೆ ಎಂದು ಹೇಳಿದರು.

ಮೊದಲಿಗೆ ನಮ ಆದ್ಯತೆ ಪರಿಸ್ಥಿತಿಯನ್ನು ತಹಬದಿಗೆ ತಂದು ಶಾಂತಿ ನೆಲೆಸುವುದಾಗಿದೆ. ನಂತರ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು. ಪೊಲೀಸರು ಈಗಾಗಲೇ ಹಲವು ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದರು.

ಇಲ್ಲಿ ಅಧಿಕಾರದ ಪ್ರಶ್ನೆ ಇಲ್ಲ. ಸಾರ್ವಜನಿಕರ ನೆಮದಿಯ ವಿಚಾರವಾಗಿದೆ. ಬ್ಲಾಕ್‌ ಕಾಂಗ್ರೆಸ್‌‍ ಅಧ್ಯಕ್ಷರ ಪುತ್ರ ಭಾಗಿಯಾಗಿರುವುದು, ಪೊಲೀಸರ ವೈಫಲ್ಯ, ಎರಡೂ ಸಮುದಾಯಗಳ ನಾಯಕರ ಲೋಪಗಳು ಸೇರಿದಂತೆ ಎಲ್ಲಾ ವಿಚಾರಗಳನ್ನೂ ಸಾವಧಾನದಿಂದ ಪರಿಶೀಲಿಸಬೇಕು. ಸದ್ಯಕ್ಕೆ ನಮಗೆ ಜನರ ಹಿತದೃಷ್ಟಿ ಮುಖ್ಯ ಎಂದು ಹೇಳಿದರು.

RELATED ARTICLES

Latest News