ಮೈಸೂರು, ಏ.3- ಕೇಂದ್ರ ಬರ ಪರಿಹಾರ ವಿಚಾರದಲ್ಲಿ ನಾನು ಸುಳ್ಳು ಹೇಳಿದ್ದರೆ ರಾಜೀನಾಮೆ ಕೊಡುತ್ತೇನೆ. ನೀವು ಇದರಲ್ಲಿ ಸುಳ್ಳು ಹೇಳಿದ್ದರೆ ರಾಜೀನಾಮೆ ಕೊಡ್ತೀರಾ ಎಂದು ಸಿಎಂ ಸಿದ್ದರಾಮಯ್ಯ ಕೇಂದ್ರ ಗೃಹ ಸಚಿವ ಅಮಿತ್ ಷಾಗೆ ಸವಾಲು ಹಾಕಿದ್ದಾರೆ.
ಸುತ್ತೂರು ಮಠಕ್ಕೆ ಭೇಟಿ ನೀಡಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರ ಆಶೀರ್ವಾದ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಆರು ತಿಂಗಳಿನಿಂದ ಬರ ಪರಿಹಾರಕ್ಕಾಗಿ ವರದಿ ಕೊಡುತ್ತಲೇ ಬಂದಿದ್ದೇವೆ. ಕಳೆದ ಡಿಸೆಂಬರ್ 23ರಂದೇ ಸಭೆ ಕರೆದು ತೀರ್ಮಾನ ಮಾಡುತ್ತೇನೆ ಎಂದಿದ್ದರು. ಇದಲ್ಲದೆ, ಕೇಂದ್ರ ಅಧ್ಯಯನ ಸಮಿತಿಯೂ ಕೂಡ ವರದಿ ಕೊಟ್ಟಿತ್ತು. ಇದೆಲ್ಲವನ್ನೂ ನಾನು ಸಾಬೀತು ಮಾಡಲು ಸಿದ್ಧವಿದ್ದೇನೆ ಎಂದು ತಿರುಗೇಟು ನೀಡಿದ್ದಾರೆ.
ಸತ್ಯಕ್ಕೆ ತಲೆ ಒಡೆದಂತೆ ಅಮಿತ್ ಷಾ ಅವರು ಸುಳ್ಳು ಹೇಳುತ್ತಿದ್ದಾರೆ. ನಾವು ಇದರ ಬಗ್ಗೆ ಈಗಾಗಲೇ ಸುಪ್ರೀಂಕೋರ್ಟ್‍ಗೆ ದಾವೆ ಹೂಡಿದ್ದೇವೆ. ವಿವರವನ್ನೂ ಕೂಡ ಸಲ್ಲಿಸಿದ್ದೇವೆ. ಇವೆಲ್ಲ ಸುಳ್ಳೆಂದರೆ ನಾನು ರಾಜೀನಾಮೆ ಕೊಡಲು ಸಿದ್ಧ. ಅಮಿತ್ ಷಾ ಅವರೇ ನೀವು ಹೇಳಿರುವುದು ಸುಳ್ಳಾದರೆ ರಾಜೀನಾಮೆ ನೀಡುತ್ತೀರಾ ಎಂದು ಪ್ರಶ್ನಿಸಿದ್ದಾರೆ.
ಎನ್‍ಡಿಆರ್‍ಎಫ್ ಶಿಫಾರಸಿನನ್ವಯ ಐದು ವರ್ಷಕ್ಕೆ ಹಣ ಮೀಸಲಿಟ್ಟಿರುತ್ತಾರೆ. ಖರ್ಚು-ವೆಚ್ಚದ ಬಗ್ಗೆ ಹಣಕಾಸು ಆಯೋಗ ಶಿಫಾರಸು ಮಾಡುತ್ತದೆ. ಆದರೆ, ಕೇಂದ್ರ ಸರ್ಕಾರ ಇದರಲ್ಲಿ ಮಲತಾಯಿ ಧೋರಣೆ ತಳೆಯುತ್ತಿದೆ. ಇದನ್ನೆಲ್ಲ ಅರಿತಿರುವ ಜನರು ಬಿಜೆಪಿ ಸರಿಯಾದ ಬುದ್ಧಿ ಕಲಿಸುತ್ತಾರೆ ಎಂದು ಸಿಎಂ ಕಿಡಿಕಾರಿದ್ದಾರೆ.