Tuesday, May 7, 2024
Homeರಾಜ್ಯಸರ್ವಾಧಿಕಾರ ಧೋರಣೆಯಿಂದ ಸಂವಿಧಾನ ಬದಲಾವಣೆಗೆ ಒಳಸಂಚು : ಸಿಎಂ ವಾಗ್ದಾಳಿ

ಸರ್ವಾಧಿಕಾರ ಧೋರಣೆಯಿಂದ ಸಂವಿಧಾನ ಬದಲಾವಣೆಗೆ ಒಳಸಂಚು : ಸಿಎಂ ವಾಗ್ದಾಳಿ

ಬೆಂಗಳೂರು,ಮಾ.11- ಬಿಜೆಪಿಯವರು ಸರ್ವಾಧಿಕಾರ ಧೋರಣೆಯ ಮೇಲೆ ನಂಬಿಕೆಯಿರಿಸಿದ್ದು, ಸಂವಿಧಾನ ಬದಲಾವಣೆ ಮಾಡುವ ಒಳಸಂಚನ್ನು ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದರು. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಗ್ರಾಹಕರ ವ್ಯವಹಾರಗಳ ಹಾಗೂ ಮಾಪನ ಶಾಸ್ತ್ರ ಇಲಾಖೆ ವತಿಯಿಂದ ನಗರ ದಲ್ಲಿಂದು ಆಹಾರ ಸೌಧ ಕಟ್ಟಡದ ಶಂಕು ಸ್ಥಾಪನೆ ನೆರವೇರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಸದ ಅನಂತಕುಮಾರ್ ಹೆಗಡೆಯವರು ಸಂವಿಧಾನ ಬದಲಾವಣೆಯ ಬಗ್ಗೆ ಹೇಳಿಕೆ ನೀಡಿರುವ ಕುರಿತು ಪ್ರತಿಕ್ರಿಯೆ ನೀಡಿದರು. ಕೇಂದ್ರ ಸಚಿವರಾಗಿದ್ದಾಗಲೂ ಈ ಮಾತನ್ನು ಅವರು ಹೇಳಿದ್ದರು.

ಇದು ಬಿಜೆಪಿಯ ಒಳಸಂಚಾಗಿದೆ. ಸಂವಿಧಾನದ ಬಗ್ಗೆ ಅನಗತ್ಯವಾಗಿ ಮಾತನಾಡಿದ್ದಾರೆ. ಸಂವಿಧಾನದಲ್ಲಿ ಯಾವುದೇ ರೀತಿಯ ಬದಲಾವಣೆಯನ್ನು ತರಬೇಕಾದರೆ ಸರ್ಕಾರಕ್ಕೆ ಮೂರನೇ ಎರಡರಷ್ಟು ಬಹುಮತವಿರಬೇಕು. ಬಿಜೆಪಿಯವರಿಗೆ ದೇಶ ಹಾಗೂ ಬಡವರ ಏಳಿಗೆಗೆ ಬಹುಮತ ಬೇಕಾಗಿಲ್ಲ, ಬದಲಾಗಿ ಸಂವಿಧಾನ ಬದಲಾಯಿಸಲು ಬಹುಮತ ಬೇಕಾಗಿದೆ ಎಂದು ಮುಖ್ಯಮಂತ್ರಿಯವರು ಆಪಾದಿಸಿದರು.

ಮನುಸ್ಮೃತಿಗೆ ಅನುಗುಣವಾಗಿ ಸಂವಿಧಾನವಿರಬೇಕೆಂಬುದು ಬಿಜೆಪಿಯ ಒಳಸಂಚು. ಆದ್ದರಿಂದ ಇಡೀ ದೇಶದ ಬಡವರು, ಹಿಂದುಳಿದವರು, ಅಲ್ಪಸಂಖ್ಯಾತರು ಬಿಜೆಪಿಯ ಈ ಯೋಚನೆಯನ್ನು ವಿರೋಧಿಸಬೇಕು. ಒಂದು ವೇಳೆ ಸಂವಿಧಾನ ಬದಲಾವಣೆ ಮಾಡಿದರೆ, ಈ ದೇಶದಲ್ಲಿ ರಕ್ತಪಾತವಾಗುತ್ತದೆ. ಆದ್ದರಿಂದ ಬಿಜೆಪಿಯವರು ತಮ್ಮ ಈ ಯೋಚನೆಯನ್ನು ಅನಂತಕುಮಾರ್ ಅವರ ಮೂಲಕ ಹೇಳಿಸುತ್ತಿದ್ದಾರೆ ಎಂದರು.

ಅನಂತಕುಮಾರ್ ಹೆಗಡೆರವರ ಹೇಳಿಕೆ ವೈಯಕ್ತಿಕ ಎಂದು ಬಿಜೆಪಿಯವರು ಹೇಳಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಮಂತ್ರಿಮಂಡಲದಲ್ಲಿದ್ದಂತಹವರು ಹಾಗೂ ಹಿರಿಯ ಸಂಸದರಾಗಿರುವ ಅನಂತಕುವರ್ ಹೆಗಡೆರವರ ಹೇಳಿಕೆ ಹೇಗೆ ವೈಯಕ್ತಿಕವಾಗುತ್ತದೆ? ಅವರಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆಯಿಲ್ಲದೇ ಮನುಸ್ಮೃತಿಯ ತತ್ವಗಳನ್ನು ಜಾರಿಗೊಳಿಸುವ ಉದ್ದೇಶ ಹೊಂದಿದ್ದಾರೆ. ಆದರೆ ನಮ್ಮ ಸಂವಿಧಾನ ಸಮಸಮಾಜ ನಿರ್ಮಾಣದ ತತ್ವವನ್ನು ಹೊಂದಿದ್ದು, ಸ್ವಾತಂತ್ರ್ಯ, ಸಮಾನತೆ ಹಾಗೂ ಭ್ರಾತೃತ್ವಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದರು.

ಲೋಕಸಭೆ ಚುನಾವಣೆಗೆ ಕಾಂಗ್ರೆಸ್‍ನ ಎರಡನೇ ಪಟ್ಟಿ ಬಿಡುಗಡೆಯ ಬಗ್ಗೆ ಪ್ರತಿಕ್ರಿಯೆ ನೀಡಿ, ಇಂದು ಸ್ಕ್ರೀನಿಂಗ್ ಸಮಿತಿಯ ಸಭೆ ನಡೆಯುತ್ತಿದ್ದು, ಶಿಫಾರಸುಗಳನ್ನು ಮಾತ್ರ ಮಾಡಲಾಗುವುದು. ಇದರ ಬಗ್ಗೆ ತೀರ್ಮಾನವನ್ನು ರಾಷ್ಟ್ರೀಯ ಚುನಾವಣಾ ಸಮಿತಿಯು ಕೈಗೊಳ್ಳುತ್ತದೆ ಎಂದು ಹೇಳಿದರು.

ಅನ್ನಭಾಗ್ಯ ಜಾರಿಗೆ ತರುವ ಆಹಾರ ಇಲಾಖೆಗೆ ಸ್ವಂತ ಕಟ್ಟಡ :
ಆಹಾರ ಇಲಾಖೆಯ ಸ್ವಂತ ಕಟ್ಟಡ ನಿರ್ಮಿಸಿ, ಒಂದೇ ಸೂರಿನಡಿ ಇಲಾಖೆಯ ಎಲ್ಲ ಕಚೇರಿಗಳ ಕಾರ್ಯಚಟುವಟಿಕೆಗಳು ನಡೆಸುವಂತೆ ಅನುಕೂಲವಾಗಲು ಆಹಾರಸೌಧ ಕಟ್ಟಡದ ಶಂಕುಸ್ಥಾಪನೆಯನ್ನು ನೆರವೇರಿಸಲಾಗಿದೆ. ಆಹಾರ ಇಲಾಖೆಯಿಂದಲೇ ಅನ್ನಭಾಗ್ಯ ಗ್ಯಾರಂಟಿ ಯೋಜನೆ ಅನುಷ್ಠಾನಗೊಳ್ಳುತ್ತಿದ್ದು, ಸರ್ಕಾರ ಪ್ರಮುಖ ಇಲಾಖೆ ಎಂದು ತಿಳಿಸಿದರು.

ಆಲಿಅಸ್ಕರ್ ರಸ್ತೆಯಲ್ಲಿರುವ ಮಾಪನ ಸೌಧದ ಪಕ್ಕ 30 ಸಾವಿರ ಚದರ ಅಡಿ ಜಾಗದಲ್ಲಿ 49.05 ಕೋಟಿ ರೂ. ವೆಚ್ಚದಲ್ಲಿ ಆಹಾರಸೌಧ ನಿರ್ಮಿಸಲಾಗುತ್ತಿದೆ. ಅಂತ್ಯೋದಯ, ಅನ್ನಭಾಗ್ಯ ಯೋಜನೆಯಡಿ 10,84,406, ಕೇಂದ್ರ ಸರ್ಕಾರದ ಆದ್ಯತಾ ಕುಟುಂಬದಲ್ಲಿ 1,03,38,001 ಹಾಗೂ ರಾಜ್ಯ ಸರ್ಕಾರದ ಆದ್ಯತಾ ಕುಟುಂಬದಲ್ಲಿ 13,21,492 ಪಡಿತರ ಚೀಟಿದಾರರಿದ್ದಾರೆ. ಆದ್ಯತೇತರ 25,00,018 ಸೇರಿದಂತೆ ಒಟ್ಟು 1,52,43,917 ಪಡಿತರ ಚೀಟಿಗಳಿಗೆ 2.35 ಲಕ್ಷ ಮೆಟ್ರಿಕ್ ಟನ್ ಮಾಸಿಕ ಆಹಾರ ಪದಾರ್ಥ ವಿತರಿಸಲಾಗುತ್ತಿದೆ. ಜುಲೈನಿಂದ ಜನವರಿ ಅಂತ್ಯದವರೆಗೆ 4595 ಕೋಟಿ ರೂ.ಗಳನ್ನು (ಅಕ್ಕಿ ಬದಲಿಗೆ) ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗಿದೆ.

ಕಾನೂನು ಮಾಪನ ಶಾಸ್ತ್ರ ಇಲಾಖೆಯು 2023-24 ನೇ ಸಾಲಿಗೆ 56 ಕೋಟಿ ರೂ. ರಾಜಸ್ವ ಸಂಗ್ರಹಣೆ ಗುರಿಯನ್ನು ಹೊಂದಿದ್ದು, 70 ಕೋಟಿ ರೂ. ರಾಜಸ್ವ ಸಂಗ್ರಹಣೆ ಮಾಡಲಾಗಿದೆ ಎಂಬ ಮಾಹಿತಿ ನೀಡಲಾಯಿತು. ಕಾರ್ಯಕ್ರಮದಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್.ಮುನಿಯಪ್ಪ, ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಸೇರಿದಂತೆ ಇಲಾಖೆಯ ಅಕಾರಿಗಳು ಉಪಸ್ಥಿತರಿದ್ದರು.

RELATED ARTICLES

Latest News