ಬೆಂಗಳೂರು,ಜ.20- ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಿನ ತಿಂಗಳು ಫೆಬ್ರವರಿ 16 ರಂದು ಬಜೆಟ್ ಮಂಡಿಸಲಿದ್ದು, ಅದಕ್ಕೆ ಪೂರ್ವಭಾವಿ ಸಮಾಲೋಚನಾ ಸಭೆಗಳನ್ನು ಆರಂಭಿಸಿದ್ದಾರೆ. ರಾಜ್ಯದಲ್ಲಿ ಅತೀ ಹೆಚ್ಚು ಬಜೆಟ್‍ಗಳನ್ನು ಮಂಡಿಸಿ ದಾಖಲೆ ನಿರ್ಮಿಸಿರುವ ಸಿದ್ದರಾಮಯ್ಯ, ತಮ್ಮ 15ನೇ ಬಜೆಟ್‍ಗೆ ಪೂರ್ವ ತಯಾರಿ ಆರಂಭಿಸಿದ್ದಾರೆ.
ಲೋಕಸಭೆ ಚುನಾವಣೆಯ ವರ್ಷವಾಗಿರುವುದರಿಂದ ಈ ಬಾರಿಯ ಬಜೆಟ್ ವ್ಯಾಪಕ ಗಮನ ಸೆಳೆದಿದೆ. ಜೊತೆಗೆ ಪಂಚಖಾತ್ರಿ ಯೋಜನೆಗಳ ಆರ್ಥಿಕ ಹೊರೆ ಹಣಕಾಸಿನ ಲೆಕ್ಕಾಚಾರಕ್ಕೆ ದೊಡ್ಡ ಸವಾಲಾಗಿದೆ. ಈ ಹಿನ್ನೆಲೆಯಲ್ಲಿ ಸಾಕಷ್ಟು ಪೂರ್ವತಯಾರಿಗಳು ಆರಂಭವಾಗಿವೆ.
ಇಂದಿನಿಂದ ಸತತವಾಗಿ ಬಜೆಟ್ ಪೂರ್ವ ಭಾವಿ ಸಭೆಗಳನ್ನು ಮುಖ್ಯಮಂತ್ರಿ ನಡೆಸಲಿದ್ದಾರೆ. ಮೊದಲ ದಿನವಾದ ಇಂದು ಆರೋಗ್ಯ, ಕುಟುಂಬ ಕಲ್ಯಾಣ, ತೋಟಗಾರಿಕೆ, ಗಣಿ ಭೂವಿಜ್ಞಾನ, ರೇಷ್ಮೆ ಪಶುಸಂಗೋಪನೆ, ಯೋಜನೆ, ಉನ್ನತ ಶಿಕ್ಷಣ, ಬೆಂಗಳೂರು ಅಭಿವೃದ್ಧಿ, ಜಲಸಂಪನ್ಮೂಲ, ಸಣ್ಣ ನೀರಾವರಿ, ವಿಜ್ಞಾನ-ತಂತ್ರಜ್ಞಾನ, ಪರಿಸರ ಜೀವಿಶಾಸ್ತ್ರ, ಆಹಾರ ನಾಗರಿಕ ಸರಬರಾಜು, ಸಹಕಾರ ಸೇರಿದಂತೆ 14ಕ್ಕೂ ಹೆಚ್ಚು ಇಲಾಖೆಗಳ ಸಚಿವರು, ಹಿರಿಯ ಅಧಿಕಾರಿಗಳೊಂದಿಗೆ ಇಂದು ಸಮಾಲೋಚನೆ ನಡೆಸಿದ್ದಾರೆ.
ಬಿಜೆಪಿ ಆಡಳಿತಾವಧಿಯಲ್ಲಿ ಈಶಾನ್ಯ ರಾಜ್ಯಕ್ಕೆ ಸುವರ್ಣ ಕಾಲ ; ಶಾ
ಕಳೆದ ಬಜೆಟ್‍ನಲ್ಲಿ ನೀಡಲಾಗಿದ್ದ ಅನುದಾನವನ್ನು ಎಷ್ಟು ಬಳಕೆ ಮಾಡಿಕೊಳ್ಳಲಾಗಿದೆ, ಅನುದಾನ ಬಾಕಿ ಉಳಿಯಲು ವೈಜ್ಞಾನಿಕ ಕಾರಣಗಳೇನು, ಮುಂದಿನ ಬಜೆಟ್‍ನಲ್ಲಿ ಯಾವೆಲ್ಲಾ ಯೋಜನೆಗಳನ್ನು ಪ್ರಸ್ತಾಪಿಸಬಹುದು ಎಂಬ ವಿಚಾರಗಳ ಕುರಿತು ವಿಚಾರ ವಿನಿಮಯ ನಡೆಸಿದ್ದಾರೆ. ಇತ್ತೀಚೆಗೆ ಸಂಪನ್ಮೂಲ ಸಂಗ್ರಹ ಇಲಾಖೆಗಳಾದ ವಾಣಿಜ್ಯ ತೆರಿಗೆ, ನೋಂದಣಿ ಮತ್ತು ಮುದ್ರಾಂಕ, ಸಾರಿಗೆ ಸೇರಿದಂತೆ ಪ್ರಮುಖ ಆದಾಯ ಮೂಲಗಳ ಬಗ್ಗೆ ಪರಾಮರ್ಶೆ ನಡೆಸಿದರು.
ಮುಂದಿನ ದಿನಗಳಲ್ಲಿ ರಾಜ್ಯದ ಮಟ್ಟಿಗೆ ಹೊಂದಿಸಬಹುದಾದ ಆರ್ಥಿಕ ಸಂಪನ್ಮೂಲ, ಕೇಂದ್ರದಿಂದ ನಿರೀಕ್ಷಿಸಬಹುದಾದ ಯೋಜನೆ ಹಾಗೂ ಯೋಜನೇತರ ನೆರವು, ತೆರಿಗೆ ಪಾಲು, ವಿಶೇಷ ಅನುದಾನಗಳನ್ನು ಅಂದಾಜಿಸಿ ಬಜೆಟ್ ಲೆಕ್ಕಾಚಾರಗಳನ್ನು ನಡೆಸಲಾಗುತ್ತಿದೆ. ಉಳಿದ ಇಲಾಖೆಗಳಲ್ಲಿ ಕೇಂದ್ರ ಸಹಭಾಗಿತ್ವದಲ್ಲಿ ನೂರಕ್ಕೂ ಹೆಚ್ಚು ಯೋಜನೆಗಳು ಪ್ರಗತಿಯಲ್ಲಿದ್ದು, ಬಹಳಷ್ಟು ಅನುದಾನದ ಕೊರತೆಯಿಂದ ನೆನೆಗುದಿಯಲ್ಲಿವೆ. ಜೊತೆಗೆ ರಾಜ್ಯಸರ್ಕಾರ ಶಕ್ತಿ, ಗೃಹಜ್ಯೋತಿ, ಅನ್ನಭಾಗ್ಯ, ಗೃಹಲಕ್ಷ್ಮಿ ಮತ್ತು ಯುವನಿಧಿ ಎಂಬ ಜನಪ್ರಿಯ ಕಾರ್ಯಕ್ರಮಗಳನ್ನು ರೂಪಿಸಿದೆ. ಈ ವರ್ಷ 39 ಸಾವಿರ ಕೋಟಿ ರೂ.ಗಳನ್ನು ಪಂಚಖಾತ್ರಿಗಳಿಗಾಗಿ ಖರ್ಚು ಮಾಡುವ ನಿರೀಕ್ಷೆಗಳಿವೆ. ಮುಂದಿನ ವರ್ಷ ಇದು 59 ಸಾವಿರ ಕೋಟಿಗೆ ಏರಿಕೆಯಾಗುವ ಸಾಧ್ಯತೆಯಿದೆ.
ಪಂಚಖಾತ್ರಿಗಳಿಂದಾಗಿ ಅಭಿವೃದ್ಧಿ ಕಾಮಗಾರಿಗಳು ಕುಂಠಿತಗೊಂಡಿವೆ ಎಂಬ ಆರೋಪಗಳು ಆಡಳಿತ ಪಕ್ಷದ ಶಾಸಕರನ್ನೂ ಒಳಗೊಂಡಂತೆ ವ್ಯಾಪಕವಾಗಿ ಕೇಳಿಬಂದಿವೆ. ಪ್ರಸ್ತುತ ವಿಧಾನಸಭೆ ಚುನಾವಣೆ ನಡೆದು ಸರ್ಕಾರಕ್ಕೆ ಅಸ್ತಿತ್ವಕ್ಕೆ ಬರುವ ವೇಳೆಗೆ ಹಿಂದಿನ ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಬಜೆಟ್ ಮಂಡಿಸಿದ್ದರು.
ಮೈಥಿಲಿ ಹಾಡಿದ ಶಬರಿ ಹಾಡಿಗೆ ಮೋದಿ ಫಿದಾ
ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿ ಎರಡನೇ ಬಾರಿಗೆ ಮುಖ್ಯಮಂತ್ರಿಯಾದ ಸಿದ್ದರಾಮಯ್ಯನವರು ಮುಂದಿನ ಬಜೆಟ್‍ನ್ನು ಮುಂದುವರೆಸುವುದರ ಜೊತೆಗೆ ಹೆಚ್ಚುವರಿಯಾಗಿ ಅಲ್ಪಸ್ವಲ್ಪ ಹೊಂದಾಣಿಕೆ ಮಾಡಿಕೊಳ್ಳುವ ಪರಿಸ್ಥಿತಿ ಇತ್ತು. ಆದರೆ ಈ ಬಾರಿ ಪೂರ್ಣ ಪ್ರಮಾಣದ ಬಜೆಟ್ ಮಂಡಿಸುತ್ತಿರುವುದರಿಂದ ಅದರಲ್ಲೂ ಸಿದ್ದರಾಮಯ್ಯನವರ 15ನೇ ಬಜೆಟ್ ಆಗಿರುವುದರಿಂದ ಭಾರೀ ನಿರೀಕ್ಷೆಯಿದೆ. ಅದನ್ನು ತಲುಪಲು ಸಿದ್ದರಾಮಯ್ಯ ಸರಣಿ ಸಭೆಗಳನ್ನು ನಡೆಸುತ್ತಿದ್ದಾರೆ.