Friday, May 17, 2024
Homeರಾಜ್ಯಲೋಕಸಭಾ ಚುನಾವಣೆಗೂ ಮುನ್ನವೇ ರಾಜ್ಯ ಸಚಿವ ಸಂಪುಟ ಪುನಾರಚನೆ..?

ಲೋಕಸಭಾ ಚುನಾವಣೆಗೂ ಮುನ್ನವೇ ರಾಜ್ಯ ಸಚಿವ ಸಂಪುಟ ಪುನಾರಚನೆ..?

ಬೆಂಗಳೂರು,ಅ.20- ಕಾಂಗ್ರೆಸ್ ಸರ್ಕಾರವನ್ನು ಪತನಗೊಳಿಸಲು ತೆರೆಮೆರೆಯಲ್ಲಿ ಚಟುವಟಿಕೆಗಳು ನಡೆಯುತ್ತಿವೆ ಎಂಬ ವದಂತಿಯ ನಡುವೆ ಆಡಳಿತರೂಢ ಪಕ್ಷದ ಶಾಸಕರನ್ನು ಭದ್ರಪಡಿಸಿಕೊಳ್ಳಲು ಸಚಿವ ಸಂಪುಟ ಪುನಾರಚನೆಯ ತುಪ್ಪವನ್ನು ಮೂಗಿಗೆ ಸವರುವಂತಹ ಪ್ರಯತ್ನವನ್ನು ಹೈಕಮಾಂಡ್ ಮಾಡಿದೆ.

ಇತ್ತೀಚೆಗೆ ಬೆಂಗಳೂರಿಗೆ ದಿಢೀರ್ ಆಗಮಿಸಿದ್ದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೊಂದಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

ನಿಗಮಮಂಡಳಿ ನೇಮಕಾತಿ, ಸಚಿವ ಸಂಪುಟ ಪುನಾರಚನೆ ಲೋಕಸಭೆ ಚುನಾವಣೆ ಅಭ್ಯರ್ಥಿಗಳ ಆಯ್ಕೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಸಮಾಲೋಚನೆ ನಡೆದಿದೆ ಎಂದು ಹೇಳಲಾಗಿದೆ. ಅದರ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್‍ನ ಉಸ್ತುವಾರಿ ನಾಯಕ ರಣದೀಪ್ ಸಿಂಗ್ ಸುರ್ಜೆವಾಲ ಕೆಲವು ಶಾಸಕರನ್ನು ಸಂಪರ್ಕಿಸಿದ್ದು ಮುಂದಿನ ಸಚಿವ ಸಂಪುಟ ಪುನಾರಚನೆ ವೇಳೆ ನಿಮಗೆ ಅವಕಾಶ ಸಿಗಲಿದೆ ಎಂದು ಹೇಳಿರುವ ಮಾಹಿತಿಗಳಿವೆ.

ನಿಜ್ಜರ್ ಹತ್ಯೆ ಹೇಳಿಕೆ ಮುನ್ನ ಭಾರತದೊಂದಿಗೆ ಚರ್ಚೆ ನಡೆಸಿದ್ದೇವೆ ; ಕೆನಡಾ

ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಯಾದ ಬೆನ್ನಲ್ಲೇ ಸರ್ಕಾರದ ವಿರುದ್ಧ ಹೋರಾಟ ಮತ್ತು ಚಟುವಟಿಕೆಗಳು ತೀವ್ರಗೊಂಡಿದೆ ಈಗಾಗಲೇ ಹಲವು ಬಾರಿ ಡಿ.ಕೆ.ಶಿವಕುಮಾರ್ ಅವರು ಬಹಿರಂಗ ಹೇಳಿಕೆ ನೀಡಿ ಸರ್ಕಾರ ಪತನಗೊಳಿಸುವ ಸಂಚು ನಡೆದಿದೆ ಎಂದು ಆರೋಪಿಸಿದರು.

ಬಿಜೆಪಿಯ ಒಂದು ತಂಡ ಕಾಂಗ್ರೆಸ್ ಶಾಸಕರನ್ನು ಸಂಪರ್ಕಿಸಿ ಆಮಿಷವೊಡ್ಡುವ ಕೆಲಸ ಮಾಡುತ್ತಿದೆ. ನಮ್ಮ ಶಾಸಕರು ಈ ಬಗ್ಗೆ ಸಂಪೂರ್ಣ ಮಾಹಿತಿ ನೀಡುತ್ತಿದ್ದಾರೆ. ಸಮಯ ಬಂದಾಗ ಎಲ್ಲವನ್ನು ಬಹಿರಂಗಪಡಿಸುತ್ತೇವೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ರಾಜ್ಯ ಮಟ್ಟದಲ್ಲಿ ನಾಯಕರುಗಳು ಶಾಸಕರನ್ನು ಸಂಪರ್ಕಿಸಿ ಅಭಿಪ್ರಾಯ ಕ್ರೂಢೀಕರಿಸುವ ಪ್ರಯತ್ನ ಮಾಡಿದ್ದಾರೆ. ಈಗಾಗಲೇ ಒಂದು ಸುತ್ತು ಜಿಲ್ಲಾ ಮಟ್ಟದಲ್ಲಿ ಶಾಸಕರು ಮತ್ತು ಸಚಿವರ ಸಭೆ ನಡೆಸಲಾಗಿದೆ. ಅದರ ಹೊರತಾಗಿಯೂ ಕೆಲವರು ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ನೀಡುತ್ತಿಲ್ಲ ಎಂಬ ಹೇಳಿಕೆಗಳನ್ನು ಬಹಿರಂಗವಾಗಿ ನೀಡಿ ಆಕ್ಷೇಪಿಸುತ್ತಿದ್ದಾರೆ.

ಇದು ಮುಜುಗರದ ಸನ್ನಿವೇಶವಾಗಿದೆ. ಮತ್ತೊಂದೆಡೆ ಸರ್ಕಾರ ಪತನಗೊಳಿಸಲು ತೆರೆಮರೆಯಲ್ಲಿ ಸದ್ದಿಲ್ಲದೆ ನಡೆಯುತ್ತಿರುವ ಆಪರೇಷನ್ ಕಮಲದ ಕಸರತ್ತು ಕಾಂಗ್ರೆಸಿಗರ ನಿದ್ದೆಗೆಡಿಸಿದೆ. ದೇಶದಲ್ಲೇ ಅದರಲ್ಲೂ ದಕ್ಷಿಣ ಭಾರತದಲ್ಲಿ ಪ್ರಮುಖ ರಾಜ್ಯವಾಗಿರುವ ಕರ್ನಾಟಕದಲ್ಲಿ ಆಡಳಿತದಲ್ಲಿರುವುದು ಕಾಂಗ್ರೆಸ್‍ಗೆ ಜೀವ ಕಣವಾಗಿದೆ. ಇಲ್ಲಿಯ ಸರ್ಕಾರವನ್ನು ಕಳೆದುಕೊಂಡರೆ ಕಾಂಗ್ರೆಸ್ ಅಸ್ತಿತ್ವವೇ ಪ್ರಶ್ನಾರ್ಹವಾಗುವ ಆತಂಕವಿದೆ.

ಈ ಹಿನ್ನಲೆಯಲ್ಲಿ ಪ್ರತಿ ಬೆಳವಣಿಗೆಯ ಮೇಲೂ ಕಟ್ಟೆಚ್ಚರ ವಹಿಸಬೇಕು. ಯಾವುದೇ ಸಂದರ್ಭದಲ್ಲೂ ಸರ್ಕಾರವನ್ನು ಬಿಟ್ಟುಕೊಡಬಾರದು. ಆಪರೇಷನ್ ಕಮಲ ಸೇರಿದಂತೆ ಎಂಥದ್ದೇ ಚಟುವಟಿಕೆಗಳಿದ್ದರೂ ತಿರುಗೇಟು ನೀಡಬೇಕೆಂದು ಹೈಕಮಾಂಡ್ ರಾಜ್ಯ ನಾಯಕರಿಗೆ ಸೂಚಿಸಿದೆ ಎಂದು ಹೇಳಲಾಗಿದೆ. ಇದು ಸಾಲದು ಎಂಬಂತೆ ಕೆಲವು ಶಾಸಕರನ್ನು ಸಂಪರ್ಕಿಸಿ ಸಚಿವ ಸಂಪುಟ ಪುನಾರಚನೆ ವೇಳೆ ಅವಕಾಶ ನೀಡಲಾಗುವುದು. ಬಿಜೆಪಿ ಮತ್ತು ಜೆಡಿಎಸ್‍ನ ಯಾವುದೇ ಆಮಿಷಗಳಿಗೆ ಒಳಗಾಗಬೇಡಿ ಎಂದು ಹೈಕಮಾಂಡ್ ನಾಯಕರು ಮನವೊಲಿಸುತ್ತಿದ್ದಾರೆ ಎಂದು ಹೇಳಲಾಗಿದೆ.

ಮಧ್ಯಪ್ರದೇಶ ಚುನಾವಣೆ : ಫೈನಲ್ ಆಯ್ತು ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ

ಈ ಬಗ್ಗೆ ಕೆಲವು ಶಾಸಕರು ತಮ್ಮ ಅಭಿಪ್ರಾಯಗಳನ್ನು ಹೇಳಿಕೊಂಡಿದ್ದು, ಸಚಿವ ಸಂಪುಟ ಪುನಾರಚನೆ ನಿಗದಿಯಂತೆ ಸರ್ಕಾರದ ಎರಡೂವರೆ ವರ್ಷಗಳ ಬಳಿಕ ನಡೆಯಲಿದೆ. ಈ ನಡುವೆ ಕ್ಷಿಪ್ರ ಬೆಳವಣಿಗಳಾದರೆ ಹೈಕಮಾಂಡ್ ಯಾವ ರೀತಿಯ ನಿರ್ಧಾರವನ್ನಾದರೂ ತೆಗೆದುಕೊಳ್ಳಬಹುದು. ಲೋಕಸಭೆ ಚುನಾವಣೆಗೂ ಮುನ್ನವೇ ಸಂಪುಟ ಪುನಾರಚನೆಯಾದರೆ ಅಚ್ಚರಿಪಡಬೇಕಿಲ್ಲ ಎಂದು ಮೂಲಗಳು ತಿಳಿಸಿವೆ.

RELATED ARTICLES

Latest News