ಬೆಂಗಳೂರು,ಮಾ.28- ಕೋಲಾರ, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಗಳು ಕಾಂಗ್ರೆಸ್ ಪಕ್ಷಕ್ಕೆ ಬಿಸಿತುಪ್ಪವಾಗಿ ಪರಿಣಮಿಸಿದ್ದು, ಭಿನ್ನಮತವನ್ನು ಶಮನಗೊಳಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಂದು ಸಂಜೆ ಮಹತ್ವದ ಸಭೆ ನಡೆಸಲಿದ್ದಾರೆ.
ಸಚಿವ ಕೆ.ಎಚ್.ಮುನಿಯಪ್ಪ ಅವರ ಪಟ್ಟಿನಿಂದಾಗಿ ಕೋಲಾರ ಕ್ಷೇತ್ರವನ್ನು ಬಹುತೇಕ ಅವರ ಅಳಿಯ ಚಿಕ್ಕಪೆದ್ದಣ್ಣ ಅವರಿಗೆ ಬಿಟ್ಟುಕೊಡಲು ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಿತ್ತು. ಇನ್ನೇನು ಅಧಿಕೃತ ಪ್ರಕಟಣೆಯಾಗಲಿದೆ ಎಂಬ ಹಂತದಲ್ಲಿ ಕಾಂಗ್ರೆಸ್‍ನ ಐವರು ಶಾಸಕರು ರಾಜೀನಾಮೆಗೆ ಮುಂದಾಗಿದ್ದರು.
ಶಾಸಕ ಡಾ.ಎಂ.ಸಿ.ಸುಧಾಕರ್, ಮಾಲೂರು ಕ್ಷೇತ್ರದ ಶಾಸಕ ಕೆ.ವೈ.ನಂಜೇಗೌಡ, ಕೋಲಾರ ಕ್ಷೇತ್ರದ ಶಾಸಕ ಮಂಜುನಾಥ್, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿಯೂ ಆಗಿರುವ ವಿಧಾನಪರಿಷತ್ ಸದಸ್ಯ ನಸೀರ್ ಅಹಮ್ಮದ್, ಮತ್ತೊಬ್ಬ ವಿಧಾನಪರಿಷತ್ ಸದಸ್ಯ ಅನಿಲ್‍ಕುಮಾರ್, ಬಂಗಾರಪೇಟೆ ಕ್ಷೇತ್ರದ ಶಾಸಕ ನಾರಾಯಣಸ್ವಾಮಿ ಮತ್ತಿತರರು ರಾಜೀನಾಮೆ ನೀಡುವ ಬೆದರಿಕೆ ಹಾಕಿದರು.
ವಿಧಾನಪರಿಷತ್ ಸದಸ್ಯರು ಸಭಾಪತಿ ಬಸವರಾಜ ಹೊರಟ್ಟಿ ಅವರ ಕಚೇರಿಗೆ ಹೋಗಿ ರಾಜೀನಾಮೆ ಪತ್ರವನ್ನು ಪ್ರದರ್ಶಿಸುವ ಮೂಲಕ ಬಿಕ್ಕಟ್ಟನ್ನು ತಾರಕಕ್ಕೆ ಕೊಂಡೊಯ್ದಿದ್ದರು. ತಕ್ಷಣವೇ ಮಧ್ಯಪ್ರವೇಶಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅತೃಪ್ತರನ್ನು ಸಮಾಧಾನಪಡಿಸಿದರು.ಚರ್ಚೆಯ ಮೂಲಕ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು. ಹೀಗಾಗಿ ರಾಜೀನಾಮೆ ಪ್ರಹಸನ ನಿನ್ನೆ ತಾತ್ಕಾಲಿಕವಾಗಿ ಮುಂದೂಡಿಕೆಯಾಗಿದೆ. ಇಂದು ಸಂಜೆ ಮಹತ್ವದ ಸಭೆ ನಡೆಯಲಿದೆ.
ಯಾರಿಗೆ ಟಿಕೆಟ್ :
ಸಚಿವ ಮುನಿಯಪ್ಪ ತಮ್ಮ ಕುಟುಂಬದ ಸದಸ್ಯರಿಗೆ ಟಿಕೆಟ್ ನೀಡಬೇಕೆಂದು ಪಟ್ಟು ಹಿಡಿದಿದ್ದರೆ, ಅದಕ್ಕೆ ರಮೇಶ್‍ಕುಮಾರ್ ನೇತೃತ್ವದ ವಿರೋಧಿ ಬಣ ಆಕ್ಷೇಪ ವ್ಯಕ್ತಪಡಿಸಿದೆ. ಕ್ಷೇತ್ರದಲ್ಲಿ ಬಲಗೈ ಸಮುದಾಯದ ಜನಸಂಖ್ಯೆ 3.80 ಲಕ್ಷ ಇದೆ. 1952 ರಿಂದಲೂ ಇಲ್ಲಿ ಬಲಗೈ ಸಮುದಾಯಕ್ಕೆ ಅವಕಾಶ ನೀಡಿಲ್ಲ. ಹಾಗಾಗಿ ಈ ಬಾರಿ ಬಲಗೈ ಸಮುದಾಯಕ್ಕೆ ಅವಕಾಶ ನೀಡಬೇಕು ಎಂದು ಬೇಡಿಕೆ ಮುಂದಿಟ್ಟಿದ್ದಾರೆ.
ಮುನಿಯಪ್ಪ ಅವರ ಕುಟುಂಬ ಹೊರತಾಗಿ, ಬೇರೆಯವರಿಗೆ ಟಿಕೆಟ್ ನೀಡಿ ಎಡಗೈ ಸಮುದಾಯವನ್ನು ಪರಿಗಣಿಸುವುದಾದರೆ ರಾಜ್ಯಸಭೆಯ ಮಾಜಿ ಸದಸ್ಯ ಎಲ್.ಹನುಮಂತಯ್ಯ ಅವರಿಗೆ ಅವಕಾಶ ಮಾಡಿಕೊಡಿ. ಬಲಗೈ ಸಮುದಾಯಕ್ಕೆ ಟಿಕೆಟ್ ನೀಡುವುದಾದರೆ ಬಂಗಾರಪೇಟೆ ಕ್ಷೇತ್ರದ ಶಾಸಕ ನಾರಾಯಣಸ್ವಾಮಿ, ದಲಿತ ಮುಖಂಡ ಮುನಿಯಪ್ಪ, ಬಿ.ಸಿ.ಮುದ್ದುಗಂಗಾಧರ್ ಅಥವಾ ಬೇರೆ ಸಮುದಾಯವನ್ನು ಪರಿಗಣಿಸುವುದಾದರೆ ಆದಿನಾರಾಯಣ ಅಥವಾ ಬೇರೆಯವರನ್ನು ಕಣಕ್ಕಿಳಿಸುವಂತೆ ಪಟ್ಟು ಹಿಡಿದಿದ್ದಾರೆ.
ಇತ್ತ ಮುನಿಯಪ್ಪ ತಮ್ಮ ಅಳಿಯ ಚಿಕ್ಕಪೆದ್ದಣ್ಣ ಅವರಿಗೆ ಟಿಕೆಟ್ ನೀಡಬೇಕು. ಇಲ್ಲದೇ ಹೋದರೆ ತಮ್ಮ ಪುತ್ರಿ ಹಾಗೂ ಶಾಸಕಿ ರೂಪಾ ಶಶಿಧರ್ ಅವರಿಗೆ ಅವಕಾಶ ಮಾಡಿಕೊಡಬೇಕು ಎಂದು ಹೊಸ ಬೇಡಿಕೆಯನ್ನು ಮುಂದಿಟ್ಟಿದ್ದಾರೆ.ತಾವು 7 ಬಾರಿ ಕೋಲಾರ ಕ್ಷೇತ್ರವನ್ನು ಪ್ರತಿನಿಧಿಸಿದ್ದು, ಪ್ರಬಲವಾದ ಹಿಡಿತ ಹೊಂದಿದ್ದೇನೆ. ರಮೇಶ್‍ಕುಮಾರ್ ಮತ್ತವರ ಸಂಗಡಿಗರು ಕಳೆದ ಬಾರಿ ಪಕ್ಷವಿರೋಧಿ ಚಟುವಟಿಕೆ ಮಾಡಿದ್ದರಿಂದಾಗಿ ನನಗೆ ಸೋಲಾಯಿತು. ಇಲ್ಲದೇ ಹೋದರೆ ಕೋಲಾರ ಕಾಂಗ್ರೆಸ್‍ನ ಭದ್ರಕೋಟೆ. ಈ ಬಾರಿ ಗೆಲುವು ಸಾಧಿಸುವುದು ಶತಸಿದ್ಧ ಎಂದು ಹೇಳಿದ್ದಾರೆ.
ಜೊತೆಗೆ ರಾಜ್ಯದಲ್ಲಿ ಪರಿಶಿಷ್ಟ ಜಾತಿಗಳ ನಡುವೆ ಸಾಮಾಜಿಕ ನ್ಯಾಯ ಪಾಲನೆಯಾಗಬೇಕಾದರೆ ಎಡಗೈ ಸಮುದಾಯಕ್ಕೆ ಎರಡು ಕ್ಷೇತ್ರಗಳಲ್ಲಿ ಟಿಕೆಟ್ ನೀಡಬೇಕು. ಬಲಗೈ ಸಮುದಾಯಕ್ಕೆ ಬಿಜಾಪುರ ಮತ್ತು ಕಲಬುರಗಿಯಲ್ಲಿ ಟಿಕೆಟ್ ನೀಡಲಾಗಿದೆ ಎಂದರು.
ಚಾಮರಾಜನಗರದಲ್ಲೂ ಮಹದೇವಪ್ಪ ಅವರ ಪುತ್ರ ಸುನಿಲ್ ಬೋಸ್‍ಗೆ ಟಿಕೆಟ್ ನೀಡುವ ಸಾಧ್ಯತೆಯಿದ್ದು, ಒಟ್ಟು 3 ಕ್ಷೇತ್ರಗಳಿಗೆ ಅವಕಾಶ ಕಲ್ಪಿಸಿದಂತಾಗುತ್ತದೆ. ಎಡಗೈ ಸಮುದಾಯಕ್ಕೆ ಚಿತ್ರದುರ್ಗದಲ್ಲಿ ಮಾತ್ರ ಅವಕಾಶ ಕಲ್ಪಿಸಲಾಗಿದೆ.
ಕೋಲಾರದಲ್ಲೂ ಬಲಗೈ ಸಮುದಾಯಕ್ಕೆ ಟಿಕೆಟ್ ಕೊಟ್ಟರೆ ನಾಲ್ಕು ಕಡೆ ಅವಕಾಶ ಸಿಕ್ಕಂತಾಗಲಿದ್ದು, ಎಡಗೈ ಸಮುದಾಯಕ್ಕೆ ಅನ್ಯಾಯವಾಗಲಿದೆ. ಪಕ್ಷವಿರೋಧಿ ಚಟುವಟಿಕೆ ನಡೆಸಿದ ಹಾಗೂ ತಮ್ಮ ವಿರುದ್ಧ ರಾಜಕಾರಣ ಮಾಡುತ್ತಾ ಬರುವವರಿಗೆ ಕಾಂಗ್ರೆಸ್‍ನಲ್ಲಿ ಹೆಚ್ಚು ಬೆಂಬಲ ಹಾಗೂ ಕುಮ್ಮಕ್ಕು ನೀಡಲಾಗುತ್ತಿದೆ ಎಂದು ಡಿ.ಕೆ.ಶಿವಕುಮಾರ್‍ರ ಮುಂದೆ ಮುನಿಯಪ್ಪ ತಮ್ಮ ಅಳಲು ತೋಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ಹೀಗಾಗಿ ಕೋಲಾರ ಕ್ಷೇತ್ರದ ಕಗ್ಗಂಟು ಕಾಂಗ್ರೆಸ್ ನಾಯಕರಿಗೆ ಸಮಯ ಕಳೆದಂತೆ ತಲೆಬಿಸಿಯಾಗುತ್ತಿದೆ. ಮತ್ತೊಂದೆಡೆ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಮುಖ್ಯಮಂತ್ರಿಯವರ ಒತ್ತಾಸೆಯ ಮೇರೆಗೆ ಯುವ ಕಾಂಗ್ರೆಸ್‍ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ಸಚಿವ ಎಂ.ಆರ್.ಸೀತಾರಾಮ್ ಅವರ ಪುತ್ರ ರಕ್ಷಾ ರಾಮಯ್ಯ ಅವರಿಗೆ ಬಹುತೇಕ ಟಿಕೆಟ್ ಖಚಿತವಾಗಿತ್ತು. ಆದರೆ ಚಿಕ್ಕಬಳ್ಳಾಪುರವನ್ನು ಎರಡು ಬಾರಿ ಪ್ರತಿನಿಧಿಸಿರುವ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಮರಳಿ ಸ್ರ್ಪಧಿಸುವ ಪಟ್ಟು ಹಿಡಿದಿದ್ದಾರೆ.
ಹೀಗಾಗಿ ತಮಗೆ ಟಿಕೆಟ್ ನೀಡಲೇಬೇಕು ಎಂದು ಹೈಕಮಾಂಡ್ ಮುಂದೆ ಪ್ರತಿಪಾದಿಸಿದ್ದಾರೆ. ಇನ್ನೇನು ಘೋಷಣೆಯಾಗಬೇಕಾಗಿದ್ದ ಪಟ್ಟಿ ಈ ಕಾರಣಕ್ಕಾಗಿ ತಡೆಹಿಡಿಯಲ್ಪಟ್ಟಿದೆ. ಈ ಎರಡೂ ಕ್ಷೇತ್ರಗಳು ಕಾಂಗ್ರೆಸ್ಸಿಗರಿಗೆ ಕಗ್ಗಂಟಾಗಿ ಪರಿಣಮಿಸಿವೆ.