Tuesday, May 28, 2024
Homeರಾಜ್ಯಚುನಾವಣಾ ಕಾಂಚಾಣ : ಈವರೆಗೆ ರಾಜ್ಯದಲ್ಲಿ 55 ಕೋಟಿ ರೂ. ಮೌಲ್ಯದ ನಗದು, ಉಡುಗೊರೆ, ಮದ್ಯ...

ಚುನಾವಣಾ ಕಾಂಚಾಣ : ಈವರೆಗೆ ರಾಜ್ಯದಲ್ಲಿ 55 ಕೋಟಿ ರೂ. ಮೌಲ್ಯದ ನಗದು, ಉಡುಗೊರೆ, ಮದ್ಯ ಜಪ್ತಿ

ಬೆಂಗಳೂರು,ಮಾ.28- ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ನಗದು, ಉಚಿತ ಉಡುಗೊರೆ, ಮದ್ಯ, ಚಿನ್ನ, ಬೆಳ್ಳಿ, ವಜ್ರಾಭರಣಗಳು ಸೇರಿದಂತೆ 55.76 ಕೋಟಿ ರೂ. ಮೌಲ್ಯದ ವಸ್ತುಗಳನ್ನು ರಾಜ್ಯದಲ್ಲಿ ಜಪ್ತಿ ಮಾಡಲಾಗಿದೆ.

ಕಳೆದ ಲೋಕಸಭಾ ಚುನಾವಣೆಗೆ ಹೋಲಿಸಿದರೆ ಪ್ರಸಕ್ತ ಚುನಾವಣೆಯಲ್ಲಿ ದುಪ್ಪಟ್ಟು ಹಣ ಹಾಗೂ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ನೀಡಿರುವ ಪ್ರಕಟಣೆ ಪ್ರಕಾರ ಚುನಾವಣಾ ವೇಳಾಪಟ್ಟಿ ಪ್ರಕಟವಾದ ಮಾರ್ಚ್ 16 ರಿಂದ ಮಾರ್ಚ್ 26 ರವರೆಗೆ ಒಟ್ಟು 55.76 ಕೋಟಿ ರೂ. ಮೌಲ್ಯದ ನಗದು ಹಾಗೂ ಇತರ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

ಆದರೆ 2019ರ ಲೋಕಸಭಾ ಚುನಾವಣೆಯಲ್ಲಿ 14 ದಿನಗಳ ಅವಯಲ್ಲಿ 26.54 ಕೋಟಿ ರೂ. ಮೊತ್ತದ ನಗದು, ಚಿನ್ನಾಭರಣ, ಮದ್ಯವನ್ನು ವಶಪಡಿಸಿಕೊಳ್ಳಲಾಗಿತ್ತು. ಪ್ರಸಕ್ತ ಚುನಾವಣೆಯಲ್ಲಿ ಕೇವಲ 10 ದಿನಗಳ ಅವಧಿಯಲ್ಲೇ ಅದರ ಎರಡು ಪಟ್ಟು ವಶಪಡಿಸಿಕೊಳ್ಳಲಾಗಿದೆ. 19.69 ಕೋಟಿ ರೂ. ನಗದು, 3.7 ಕೋಟಿ ರೂ. ಉಚಿತ ಉಡುಗೊರೆ, 26.20 ಕೋಟಿ ರೂ. ಮದ್ಯ, 88 ಲಕ್ಷ ರೂ. ಮೌಲ್ಯದ ಮಾದಕ ದ್ರವ್ಯ, 5.47 ಕೋಟಿ ರೂ. ಮೌಲ್ಯದ ಚಿನ್ನ, 26 ಲಕ್ಷ ರೂ. ಮೌಲ್ಯದ ಬೆಳ್ಳಿ, 9 ಲಕ್ಷ ರೂ. ಮೌಲ್ಯದ ವಜ್ರಾಭರಣಗಳನ್ನು ಚುನಾವಣೆ ಹಿನ್ನೆಲೆಯಲ್ಲಿ ಜಪ್ತಿ ಮಾಡಲಾಗಿದೆ.

ಇದುವರೆಗೆ 26.20 ಕೋಟಿ ರೂ. ಮೌಲ್ಯದ ಮದ್ಯವನ್ನು ಜಪ್ತಿ ಮಾಡಲಾಗಿದೆ. ಇದರಲ್ಲಿ ಕ್ಷಿಪ್ರಪಡೆಗಳು, ಸ್ಥಿರ ಕಣ್ಗಾವಲು ತಂಡಗಳು, ಪೊಲೀಸ್, ಆದಾಯ ತೆರಿಗೆ ಅಧಿಕಾರಿಗಳು ವಶಪಡಿಸಿಕೊಂಡಿರುವುದೂ ಸೇರಿದೆ.4.76 ಕೆ.ಜಿ. ತೂಕದ 4,75,65,652 ರೂ. ಮೌಲ್ಯದ ಚಿನ್ನಾಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆದಾಯ ತೆರಿಗೆ ಅಧಿಕಾರಿಗಳು 71,16,480 ರೂ. ಮೌಲ್ಯದ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.

ಒಟ್ಟು 9.74 ಕೆ.ಜಿ ತೂಕದ 5,46,82,132 ರೂ. ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ರಾಜ್ಯದಲ್ಲಿ ನಗದು, ಮದ್ಯ, ಡ್ರಗ್ಸ್, ಉಚಿತ ಉಡುಗೊರೆ, ಚಿನ್ನ, ಬೆಳ್ಳಿ ಆಭರಣಗಳಿಗೆ ಸಂಬಂಧಿಸಿದಂತೆ 847 ಎಫ್‍ಐಆರ್‍ಗಳನ್ನು ದಾಖಲಿಸಲಾಗಿದೆ. 92,664 ಶಸ್ತ್ರಾಸ್ತ್ರಗಳನ್ನು ಠೇವಣಿ ಮಾಡಿದ್ದು, 875 ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. 15 ಶಸ್ತ್ರಾಸ್ತ್ರಗಳ ಪರವಾನಗಿಯನ್ನು ರದ್ದುಪಡಿಸಲಾಗಿದೆ. ಅಬಕಾರಿ ಇಲಾಖೆ ಘೋರ ಅಪರಾಧದಡಿಯಲ್ಲಿ 848 ಪ್ರಕರಣಗಳನ್ನು ದಾಖಲಿಸಲಾಗಿದೆ.

ಪರವಾನಗಿ ಉಲ್ಲಂಘನೆಯಡಿಯಲ್ಲಿ 706 ಪ್ರಕರಣ ದಾಖಲಿಸಿದ್ದು, ಎನ್‍ಡಿಪಿಎಸ್ ಅಡಿಯಲ್ಲಿ 44 ಪ್ರಕರಣಗಳನ್ನು, ಅಬಕಾರಿ ಕಾಯ್ದೆಯಡಿ 3,013 ಪ್ರಕರಣಗಳನ್ನು ದಾಖಲಿಸಲಾಗಿದೆ. 492 ವಿವಿಧ ರೀತಿಯ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕ್ಷಿಪ್ರ ಪಡೆಯವರು ಶ್ರವಣಬೆಳಗೊಳದ ಬಳಿ 56,89,146 ರೂ. ನಗದನ್ನು ಸ್ಥಿರ ಕಣ್ಗಾವಲು ತಂಡದವರು ಚಿತ್ರದುರ್ಗದ ಪಿಳ್ಳೇಕೇರನಹಳ್ಳಿ ಚೆಕ್ ಪೋಸ್ಟ್ ನಲ್ಲಿ 20,35,000 ನಗದನ್ನು ವಶಪಡಿಸಿಕೊಂಡಿದ್ದಾರೆ. ತರೀಕೆರೆ ತಾಲ್ಲೂಕಿನ ಎಂ.ಸಿ.ಹಳ್ಳಿ ಚೆಕ್ ಪೋಸ್ಟ್ ನಲ್ಲಿ ಸ್ಥಿರ ಕಣ್ಗಾವಲು ತಂಡದವರು 4,21,92,752 ರೂ. ಮೌಲ್ಯದ ಚಿನ್ನ, ಬೆಳ್ಳಿ ಮತ್ತು ವಜ್ರದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿಸಿದೆ.

RELATED ARTICLES

Latest News