Friday, November 22, 2024
Homeರಾಜ್ಯಲಾಠಿ ಏಟು ಸ್ಮರಿಸಿಕೊಂಡ ಸಿಎಂ ಸಿದ್ದರಾಮಯ್ಯ

ಲಾಠಿ ಏಟು ಸ್ಮರಿಸಿಕೊಂಡ ಸಿಎಂ ಸಿದ್ದರಾಮಯ್ಯ

ಬೆಂಗಳೂರು,ಫೆ.10- ವಿದ್ಯಾರ್ಥಿ ದೆಸೆಯಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಲು ಹೋಗಿ ಪೊಲೀಸರಿಂದ ಮೊದಲ ಬಾರಿಗೆ ಲಾಠಿ ಏಟು ತಿಂದಿದ್ದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಮರಿಸಿಕೊಂಡರು. ರೈತ ನಾಯಕ ಪ್ರೊ.ನಂಜುಂಡಸ್ವಾಮಿಯವರ ನೆನಪು, ರಾಜ್ಯಮಟ್ಟದ ಬೃಹತ್ ರೈತ ಸಮಾವೇಶ ಹಾಗೂ ರೈತಪರ ಬಜೆಟ್ ಕುರಿತ ಹಕ್ಕೊತ್ತಾಯಗಳ ಕಾರ್ಯಗಾರದಲ್ಲಿ ಮಾತನಾಡಿದ ಮುಖ್ಯಮಂತ್ರಿಯವರು ರೈತ ಸಂಘ ಹೋರಾಟ ಕಾಲಘಟ್ಟದ ನೆನಪುಗಳನ್ನು ಸ್ಮರಿಸಿಕೊಂಡರು.

ತಾವು ಶಾರದಾ ವಿಲಾಸ ಕಾನೂನು ಕಾಲೇಜಿನ ವಿದ್ಯಾರ್ಥಿಯಾಗಿದ್ದಾಗ ಪ್ರೊ.ನಂಜುಂಡಸ್ವಾಮಿ ಆ ಕಾಲೇಜಿನಲ್ಲಿ ಪಾಠ ಮಾಡುತ್ತಿದ್ದರು. ಏಳೆಂಟು ಜನ ವಿದ್ಯಾರ್ಥಿಗಳು ನಾವು ಅವರ ಕಟ್ಟಾ ಅನುಯಾಯಿಗಳಾಗಿದ್ದೆವು ಎಂದು ಹೇಳಿದರು. ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆ ಪ್ರಜಾಪ್ರಭುತ್ವದ ಅನುಸಾರ ನಡೆಯಬೇಕು ಎಂದು ಹೋರಾಟ ಮಾಡುವಂತೆ ಪ್ರೊ.ನಂಜುಂಡಸ್ವಾಮಿ ನಮ್ಮನ್ನು ಪ್ರೇರೇಪಿಸಿದ್ದರು. ಅದು ನನ್ನ ಜೀವನದ ಮೊದಲ ಹೋರಾಟ. ಆನಂತರ ಆಗಿನ ವೀರೇಂದ್ರ ಪಾಟೀಲ್ ಸರ್ಕಾರದ ವಿರುದ್ಧ ಹೋರಾಟ ರೂಪಿಸಲಾಗಿತ್ತು.

ರಾಮಸ್ವಾಮಿ ವೃತ್ತದಿಂದ ಪುರಭವನದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ವೇಳೆ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದರು. ಆಗ ನನಗೆ ಮೊದಲ ಬಾರಿ ಲಾಠಿ ಏಟು ಬಿದ್ದಿತ್ತು. ಎರಡನೇ ಬಾರಿ ಮಾನಸಗಂಗೋತ್ರಿ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಕಪ್ಪು ಬಾವುಟ ಪ್ರದರ್ಶಿಸಿದಾಗ ಪೊಲೀಸರು 2ನೇ ಬಾರಿ ಲಾಠಿ ರುಚಿ ತೋರಿಸಿದ್ದರು ಎಂದು ಸ್ಮರಿಸಿಕೊಂಡರು.

ರೈತ ಸಂಘ ಸ್ಥಾಪನೆಯಾದಾಗ ನಾನು ಮೈಸೂರು ಜಿಲ್ಲೆಯ ಪ್ರಧಾನ ಕಾರ್ಯದರ್ಶಿಯಾಗಿದ್ದೆ. 1983 ರ ವಿಧಾನಸಭೆ ಚುನಾವಣೆಯಲ್ಲಿ ಸ್ರ್ಪಧಿಸಬೇಕು ಎಂದು ನಾನು, ಯಾವಗಲ್, ರೇವಣ ಸಿದ್ಧಯ್ಯ ಪಟ್ಟು ಹಿಡಿದಿದ್ದೆವು. ನಂಜುಂಡಸ್ವಾಮಿಯವರು ಚುನಾವಣೆ ಬೇಡ ಎಂದಿದ್ದೆವು. ನಾವು ಸಭಾತ್ಯಾಗ ಮಾಡಿದ್ದೆವು. ಅದಕ್ಕಾಗಿ ರೈತ ಸಂಘದಿಂದ ತಮ್ಮನ್ನು ಉಚ್ಚಾಟಿಸಲಾಯಿತು. ನಂತರ ರೈತ ಚಳುವಳಿಗೆ ಮರಳಲಿಲ್ಲ ಎಂದರು. ನಾನು ರಾಜಕೀಯಕ್ಕೆ ಬರಲು ನಂಜುಂಡಸ್ವಾಮಿಯವರೇ ಪ್ರೇರೇಪಣೆ. ಮುಂದಿನ ದಿನಗಳಲ್ಲಿ ಲೋಕಸಭೆ ಚುನಾವಣೆಗೆ ಬಂದಾಗ ನಾನು ನಿಲ್ಲಬೇಕೆ, ಬೇಡವೇ ಎಂಬ ಬಗ್ಗೆ ನಂಜುಂಡಸ್ವಾಮಿಯವರ ಸಲಹೆ ಕೇಳಿದ್ದೆ. ನೀನು ನಿಲ್ಲು, ನಾನೂ ನಿಲ್ಲುತ್ತೇನೆ ಎಂದಿದ್ದರು ಎಂದು ಸ್ಮರಿಸಿಕೊಂಡರು.

ರೈತ ಸಂಘ ಅತ್ಯಂತ ಪ್ರಬಲವಾಗಿತ್ತು. ಸರ್ಕಾರಿ ಅಧಿಕಾರಿಗಳು ಸಚಿವರಿಗೆ ಹೆದರುತ್ತಿರಲಿಲ್ಲ. ಹಸಿರು ಟೋಪಿ, ಹಸಿರು ಶಾಲು ಹಾಕಿಕೊಂಡು ಸರ್ಕಾರಿ ಕಚೇರಿಗಳಿಗೆ ಹೋದರೆ ಅಧಿಕಾರಿಗಳು ಎದ್ದುನಿಂತು ಬಿಡುತ್ತಿದ್ದರು. ನಂಜುಂಡಸ್ವಾಮಿ ನಿಷ್ಠುರ ಮತ್ತು ಕಠಿಣ ನಿರ್ಧಾರವನ್ನು ತೆಗೆದುಕೊಳ್ಳುತ್ತಿದ್ದರು ಎಂದು ಹೇಳಿದರು.
ದೇಶದಲ್ಲಿ ಬಹಳಷ್ಟು ಜನ ಕೃಷಿಯನ್ನು ಅವಲಂಬಿಸಿದ್ದಾರೆ. ಆಹಾರ ಸ್ವಾವಲಂಬನೆಗೆ ರೈತರೇ ಕಾರಣ. ಇತ್ತೀಚೆಗೆ ಕೃಷಿ ನಷ್ಟವಾಗುತ್ತಿದೆ ಎಂಬ ಕಾರಣಕ್ಕಾಗಿ ಬಹಳಷ್ಟು ಮಂದಿ ನಗರದತ್ತ ವಲಸೆ ಬರುತ್ತಿದ್ದಾರೆ. ನಗರೀಕರಣದ ಸಮಸ್ಯೆಗಳು ಹೆಚ್ಚಾಗುತ್ತಿವೆ ಎಂದರು.

ಬಜೆಟ್‍ನಲ್ಲಿ ಅಳವಡಿಸಿರುವಂತೆ 20 ಕ್ಕೂ ಹೆಚ್ಚು ಹಕ್ಕೊತ್ತಾಯಗಳನ್ನು ರೈತ ಸಂಘ ನೀಡಿದೆ. ಅವುಗಳಲ್ಲಿ ಸಾಧ್ಯ ಎನ್ನುವಷ್ಟನ್ನು ಜಾರಿ ಮಾಡುತ್ತೇನೆ. ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತರಲಾಗುವುದು. ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಅದು ಜಂಟಿ ಆಯ್ಕೆ ಸಮಿತಿ ಪರಿಶೀಲನೆಯಲ್ಲಿಯೇ ಇದೆ. ಮುಂದಿನ ದಿನಗಳಲ್ಲಿ ಅದನ್ನು ಕಾನೂನು ರೂಪದಲ್ಲಿ ಜಾರಿಗೊಳಿಸುತ್ತೇವೆ ಎಂದು ಹೇಳಿದರು. ಕೃಷಿಗೆ ಗರಿಷ್ಠ ಪ್ರಮಾಣದ ಆದ್ಯತೆ ನೀಡಬೇಕು. ದೇಶದಲ್ಲಿ ರೈತರು, ಸೈನಿಕರು, ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಕೃಷಿ ಸುಧಾರಣೆಗೆ ರಾಷ್ಟ್ರಮಟ್ಟದಲ್ಲಿಯೂ ಯೋಜನೆ ರೂಪಿಸಲು ಕಾಂಗ್ರೆಸ್‍ನ ಪ್ರಣಾಳಿಕಾ ಸಮಿತಿ ಸಭೆಯಲ್ಲಿ ಚರ್ಚೆ ನಡೆಸಲಾಗುವುದು ಎಂದು ಭರವಸೆ ನೀಡಿದರು.

ಸಹಜಸ್ಥಿತಿಯತ್ತ ಹಿಂಸಾಚಾರ ಪೀಡಿತ ಉತ್ತರಾಖಂಡ

ರೈತ ಸಂಘ ಕೋಮುವಾದಿಗಳ ವಿರುದ್ಧವಾಗಿರುವ ನಿರ್ಧಾರ ತೆಗೆದುಕೊಂಡಿರುವುದು ಸ್ವಾಗತಾರ್ಹ. ರೈತ ಪರವಾದ ಚಳುವಳಿಯನ್ನು ಎಂದಿನಂತೆ ಮುಂದುವರೆಸಲಿ ಎಂದು ಸಲಹೆ ನೀಡಿದರು.
ಸಚಿವರಾದ ಎಚ್.ಸಿ.ಮಹದೇವಪ್ಪ, ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಶಾಸಕರಾದ ಬಿ.ಆರ್.ಪಾಟೀಲ್, ದರ್ಶನ್ ಪುಟ್ಟಣ್ಣಯ್ಯ, ರೈತ ಮುಖಂಡರಾದ ಮಾಲಿ ಪಾಟೀಲ್, ಕಾರ್ಮಿಕ ನಾಯಕ ಮೈಕಲ್ ಫರ್ನಾಂಡೀಸ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ರೈತ ಸಂಘ ಕೃಷಿಯನ್ನು ಸುಸ್ಥಿರಗೊಳಿಸಲು ಮೌಲ್ಯರ್ವತ ಚಟುವಟಿಕೆಗಳಿಗೆ ತಲಾ 20 ಲಕ್ಷ ರೂ.ಗಳ ಆರ್ಥಿಕ ನೆರವು, ರೈತ ಯುವಕರನ್ನು ಮದುವೆಯಾಗುವವರಿಗೆ 5 ಲಕ್ಷ ಆರ್ಥಿಕ ನೆರವು, ಬ್ಯಾಂಕ್ ಸಾಲ ವಸೂಲಾತಿಗೆ ಕಡಿವಾಣ, ಆಸ್ತಿ ಹರಾಜಿಗೆ ತಡೆ ನೀಡಬೇಕು. ಕೃಷಿ ಬೆಲೆ ಆಯೋಗಕ್ಕೆ ಶಾಸನದ್ಧ ಅಕಾರ ನೀಡಿ ಬಲಗೊಳಿಸಬೇಕು. ಬರ ಬಾತ ರೈತರಿಗೆ ವೈಜ್ಞಾನಿಕ ಪರಿಹಾರಗಳನ್ನು ನೀಡಬೇಕು. 2024 ರ ವಿದ್ಯುತ್ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತರಬೇಕು. ಕಬ್ಬಿಗೆ ಘೋಷಿತ ಬೆಂಬಲ ಬೆಲೆ ನೀಡಬೇಕು. ಕರ ನಿರಾಕರಣೆ ಚಳುವಳಿಯ ಹಿಂಬಾಕಿಯ ಮನ್ನಾ ಮಾಡಬೇಕು ಎಂಬುದು ಸೇರಿದಂತೆ ಹಲವು ಬೇಡಿಕೆಗಳನ್ನು ಮುಖ್ಯಮಂತ್ರಿಯವರಿಗೆ ಸಲ್ಲಿಸಲಾಯಿತು.

RELATED ARTICLES

Latest News