Friday, October 4, 2024
Homeರಾಜ್ಯಹೈಕೋರ್ಟ್‌ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಲು ಸಿಎಂ ಸಿದ್ದರಾಮಯ್ಯ ತಯಾರಿ

ಹೈಕೋರ್ಟ್‌ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಲು ಸಿಎಂ ಸಿದ್ದರಾಮಯ್ಯ ತಯಾರಿ

CM Siddaramaiah is preparing to appeal to the High Court division bench

ಬೆಂಗಳೂರು,ಸೆ.24- ಹೈಕೋರ್ಟ್‌ ನೀಡಿರುವ ತೀರ್ಪನ್ನು ಪ್ರಶ್ನಿಸಿ ಕಾನೂನು ಹೋರಾಟ ನಡೆಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಾಗಿದ್ದು, ಹೈಕೋರ್ಟ್‌ನ ವಿಭಾಗೀಯ ಪೀಠಕ್ಕೆ ಮೇಲನವಿ ಸಲ್ಲಿಸುವ ತಯಾರಿ ನಡೆಸಿದ್ದಾರೆ.

ಅರ್ಜಿದಾರರಾದ ಟಿ.ಜೆ.ಅಬ್ರಹಾಂ ಹಾಗೂ ಇತರರು ಸುಪ್ರೀಂಕೋರ್ಟ್‌ನಲ್ಲಿ ಈಗಾಗಲೇ ಕೇವಿಯಟ್‌ ಸಲ್ಲಿಸಿರುವುದರಿಂದ ಪ್ರಕರಣವನ್ನು ಸಿದ್ದರಾಮಯ್ಯ ಅವರು ಗಂಭೀರವಾಗಿ ಪರಿಗಣಿಸಿದ್ದು, ಮುಂದಿನ ಕಾನೂನು ಹೋರಾಟಕ್ಕೆ ತಕ್ಷಣಕ್ಕೆ ತ್ವರಿತ ಕ್ರಮಗಳನ್ನು ಅನುಸರಿಸುತ್ತಿದ್ದಾರೆ.

ಹೈಕೋರ್ಟ್‌ನ ಏಕಸದಸ್ಯ ಪೀಠದ ನ್ಯಾ.ನಾಗಪ್ರಸನ್ನ ಅವರ ತೀರ್ಪು ಪ್ರಕಟಗೊಂಡ ಬೆನ್ನಲ್ಲೇ ವಿಭಾಗೀಯ ಪೀಠದ ಮುಂದೆ ಮೇಲನವಿ ಸಲ್ಲಿಸಲು ವಕಾಲತ್ತಿನ ಕರಡನ್ನು ಸಿದ್ಧಪಡಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಾನೂನು ತಜ್ಞರ ಜೊತೆ ಹಾಗೂ ಸಂಪುಟದ ಹಿರಿಯ ಸಚಿವರ ಜೊತೆ ಚರ್ಚೆ ನಡೆಸಿದ್ದಾರೆ. ಜೊತೆಯಲ್ಲೇ ಸುಪ್ರೀಂಕೋರ್ಟ್‌ನಲ್ಲೂ ಅರ್ಜಿ ಸಲ್ಲಿಸುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ.

ಇದೇ ಸಮಯದಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲೂ ಸಿದ್ದರಾಮಯ್ಯನವರು ಕಾನೂನು ಹೋರಾಟ ಮುಂದುವರೆಸಬೇಕಿದೆ. ಒಂದೆಡೆ ಹೈಕೋರ್ಟ್‌ನಲ್ಲಿ ರಾಜ್ಯಪಾಲರ ಅಭಿಯೋಜನೆಯನ್ನು ಪ್ರಶ್ನಿಸಿ ವಿಭಾಗೀಯ ಪೀಠದ ಮುಂದೆ ವಾದ ಮಂಡಿಸಿದರೆ ಮತ್ತೊಂದೆಡೆ ತನಿಖೆ ಹಾಗೂ ಮುಂದಿನ ಕ್ರಮಗಳಿಗೆ ಸಂಬಂಧಪಟ್ಟಂತೆ ಜನಪ್ರತಿನಿಧಿಗಳ ನ್ಯಾಯಾಲಯದಲ್ಲೂ ವಾದ-ಪ್ರತಿವಾದಗಳನ್ನು ನಡೆಸಬೇಕಿದೆ.

ಸಿದ್ದರಾಮಯ್ಯನವರು ನಿಯಮ 482 ರ ಅಡಿ ರಿಟ್‌ ಅರ್ಜಿ ಸಲ್ಲಿಸಿರುವುದರಿಂದ ಇದು ಹೆಚ್ಚುವರಿ ಬಾಬ್ತುಗಳ ವ್ಯಾಪ್ತಿಗೆ ಒಳಪಡಲಿದ್ದು, ನೇರವಾಗಿ ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸುವುದಕ್ಕಿಂತ ಹೈಕೋರ್ಟ್‌ನಲ್ಲೇ ವಾದ ಮಾಡಬೇಕಾದಂತಹ ಅನಿವಾರ್ಯತೆ ಎದುರಾಗಿದೆ.

ಅರ್ಜಿದಾರರಾದ ಟಿ.ಜೆ.ಅಬ್ರಹಾಂ ಹಾಗೂ ಇತರರು ನಾಳೆ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ ಹೈಕೋರ್ಟ್‌ ತೀರ್ಪನ್ನು ಪ್ರಸ್ತಾಪಿಸಿ ವಿಚಾರಣೆಗೆ ಅನುಮತಿ ಕೇಳುವ ಸಾಧ್ಯತೆಯಿದೆ. ಒಂದು ವೇಳೆ ಕೆಳಹಂತದ ನ್ಯಾಯಾಲಯ ತನಿಖೆಗೆ ಆದೇಶಿಸುವ ಅಥವಾ ಮತ್ತೊಂದು ದಿನಾಂಕವನ್ನು ನಿಗದಿಪಡಿಸುವ ಸಾಧ್ಯಾಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ.

ರಾಜ್ಯಪಾಲರು ಮುಡಾ ಪ್ರಕರಣದ ಅಭಿಯೋಜನೆ ಮತ್ತು ತನಿಖೆಗೆ ಪೂರ್ವಾನುಮತಿ ನೀಡಿರುವುದನ್ನು ಹೈಕೋರ್ಟ್‌ನ ಏಕಸದಸ್ಯ ಪೀಠ ಎತ್ತಿಹಿಡಿದ ಬೆನ್ನಲ್ಲೇ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಮುಂದಿನ ಹಂತದ ವಿಚಾರಣೆ ನಡೆಯುವ ಸಾಧ್ಯತೆಯಿದೆ. ಈವರೆಗೂ ಹೈಕೋರ್ಟ್‌ನ ತಡೆಯಾಜ್ಞೆಯಿಂದಾಗಿ ಕೆಳಹಂತದ ನ್ಯಾಯಾಲಯದಲ್ಲಿನ ಪ್ರಕ್ರಿಯೆಗಳಿಗೆ ನಿರ್ಬಂಧವಿತ್ತು.

ನ್ಯಾ.ನಾಗಪ್ರಸನ್ನ ಅವರ ಪೀಠದ ತೀರ್ಪು ಎಲ್ಲಾ ನಿರ್ಬಂಧಗಳನ್ನೂ ತೆರವು ಮಾಡಿರುವುದರಿಂದ ಯಾವ ಕ್ಷಣದಲ್ಲಾದರೂ ಜನಪ್ರತಿನಿಧಿಗಳ ನ್ಯಾಯಾಲಯ ಪ್ರಕರಣ ದಾಖಲಿಸಲು ಸೂಚಿಸಬಹುದಾಗಿದೆ ಅಥವಾ ಲೋಕಾಯುಕ್ತ ಪೊಲೀಸರು ಸ್ವಯಂ ಪ್ರೇರಿತವಾಗಿಯೂ ಪ್ರಕರಣ ದಾಖಲಿಸುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

ಸಿದ್ದರಾಮಯ್ಯನವರಿಗೆ ಸಂಕಷ್ಟ :
ಪ್ರಕರಣ ದಾಖಲಾದರೆ ಸಿದ್ದರಾಮಯ್ಯ ಅವರಿಗೆ ಸಂಕಷ್ಟ ತಪ್ಪಿದ್ದಲ್ಲ ಎಂದು ಹೇಳಲಾಗುತ್ತಿದೆ. ಮೇಲ್ನೋಟಕ್ಕೆ ಕಾಂಗ್ರೆಸ್‌‍ ಹೈಕಮಾಂಡ್‌ ಆದಿಯಾಗಿ ಸಚಿವರು, ಶಾಸಕರೆಲ್ಲರೂ ಸಿದ್ದರಾಮಯ್ಯನವರ ಬೆನ್ನಿಗೆ ನಿಲ್ಲುವುದಾಗಿ ಹೇಳುತ್ತಿದ್ದಾರೆ.ಪ್ರಕರಣ ದಾಖಲಾದರೂ, ನ್ಯಾಯಾಲಯದ ಹೋರಾಟದಲ್ಲಿ ಹಿನ್ನಡೆಯಾದರೂ ಸಿದ್ದರಾಮಯ್ಯ ರಾಜೀನಾಮೆ ನೀಡುವ ಅಗತ್ಯವಿಲ್ಲ ಎಂಬ ಸಮರ್ಥನೆಗಳು ಕೇಳಿಬರುತ್ತಿವೆ.

ಆದರೆ ಬಿಜೆಪಿ ತೀರ್ಪು ಪ್ರಕಟಗೊಂಡ ತಕ್ಷಣವೇ ಪತ್ರಿಕಾಗೋಷ್ಠಿ ನಡೆಸಿ ಸಿದ್ದರಾಮಯ್ಯನವರಿಗೆ ನೈತಿಕತೆಯ ಪ್ರಶ್ನೆಯನ್ನು ಮುಂದಿಟ್ಟಿದೆ. ಇದು ಕೇವಲ ರಾಜ್ಯಕ್ಕೆ ಸೀಮಿತವಾಗಿರುವ ವಿಚಾರವಾಗಿರದೇ ರಾಷ್ಟ್ರೀಯ ಮಟ್ಟದಲ್ಲೂ ಕಾಂಗ್ರೆಸ್‌‍ನ ನೈತಿಕತೆಯನ್ನು ಅಣಕಿಸುವಂತೆ ಮಾಡಲಿದೆ. ಹೀಗಾಗಿ ಸಿದ್ದರಾಮಯ್ಯನವರು ಇಕ್ಕಟ್ಟಿನ ಪರಿಸ್ಥಿತಿಗೆ ಸಿಲುಕುವ ಸಾಧ್ಯತೆಯಿದೆ.

RELATED ARTICLES

Latest News