Wednesday, February 28, 2024
Homeರಾಜ್ಯಜನತಾದರ್ಶನದ ಅರ್ಜಿಗಳನ್ನು 3 ತಿಂಗಳೊಳಗೆ ಇತ್ಯರ್ಥ : ಸಿಎಂ ಸಿದ್ದರಾಮಯ್ಯ

ಜನತಾದರ್ಶನದ ಅರ್ಜಿಗಳನ್ನು 3 ತಿಂಗಳೊಳಗೆ ಇತ್ಯರ್ಥ : ಸಿಎಂ ಸಿದ್ದರಾಮಯ್ಯ

ಬೆಂಗಳೂರು,ಫೆ.8- ಜನತಾದರ್ಶನದಲ್ಲಿ ಸ್ವೀಕರಿಸಲಾದ ಅರ್ಜಿಗಳನ್ನು 3 ತಿಂಗಳೊಳಗಾಗಿಯೇ ಇತ್ಯರ್ಥಗೊಳಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ವಿಧಾನಸೌಧದ ಆವರಣದಲ್ಲಿ ನಡೆದ ರಾಜ್ಯಮಟ್ಟದ ಜನಸ್ಪಂದನದಲ್ಲಿ ಮಾತನಾಡಿದ ಮುಖ್ಯಮಂತ್ರಿಯವರು, ಈ ಹಿಂದೆ ನಡೆದ ಮೊದಲ ಜನತಾದರ್ಶನದಲ್ಲಿ 5 ಸಾವಿರಕ್ಕೂ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಲಾಗಿತ್ತು. ಅದರಲ್ಲಿ ಶೇ.98 ರಷ್ಟು ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಶೇ.2 ರಷ್ಟು ಮಾತ್ರ ಬಾಕಿ ಉಳಿದಿವೆ ಎಂದು ಹೇಳಿದರು.

ಇಂದಿನ ಜನತಾದರ್ಶನಕ್ಕೆ 10 ಸಾವಿರಕ್ಕಿಂತಲೂ ಹೆಚ್ಚಿನ ಜನ ಆಗಮಿಸಿದ್ದಾರೆ. ಅವರಿಗೆ ಸ್ಥಳದಲ್ಲೇ ಪರಿಹಾರ ದೊರಕಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಒಂದು ವೇಳೆ ಸಾಧ್ಯವಾಗದೇ ಇದ್ದರೆ ಮುಂದಿನ 3 ತಿಂಗಳೊಳಗಾಗಿ ಪರಿಹಾರ ದೊರಕಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಕಾನೂನಾತ್ಮಕವಾಗಿ ಸಾಧ್ಯ ಇರುವ ಎಲ್ಲಾ ಪರಿಹಾರಗಳನ್ನೂ ಒದಗಿಸಲಾಗುವುದು. ಒಂದು ವೇಳೆ ಸಾಧ್ಯವಿಲ್ಲ ಎಂದಾದರೆ ಅದಕ್ಕೆ ಸಕಾರಣಗಳ ಹಿಂಬರಹವನ್ನು ಅರ್ಜಿದಾರರ ವಿಳಾಸಕ್ಕೆ ತಲುಪಿಸುವುದಾಗಿ ಹೇಳಿದರು.

ಇದು 2 ನೇ ರಾಜ್ಯಮಟ್ಟದ ಜನತಾದರ್ಶನವಾಗಿದೆ. ಇದಕ್ಕೂ ಮೊದಲು ಜಿಲ್ಲಾ ಕೇಂದ್ರಗಳಲ್ಲಿ 108 ಜನಸ್ಪಂದನಗಳನ್ನು ನಡೆಸಲಾಗಿದೆ. ಆಡಳಿತ ಬೆಂಗಳೂರಿಗೆ ಕೇಂದ್ರೀಕೃತವಾಗಬಾರದು. ಜನರ ಬಳಿಗೆ ಹೋಗಬೇಕು ಎಂಬುದು ನಮ್ಮ ಮೂಲ ಉದ್ದೇಶ. ಸಣ್ಣಪುಟ್ಟ ಸಮಸ್ಯೆಗಳಿಗೆ ಜನರು ಬೆಂಗಳೂರಿಗೆ ಬರುವುದನ್ನು ತಪ್ಪಿಸಲು ಸ್ಥಳೀಯ ಮಟ್ಟದಲ್ಲೇ ಸಮಸ್ಯೆ ಪರಿಹಾರಕ್ಕೆ ಆದ್ಯತೆ ನೀಡಲಾಗಿದೆ. ಅಲ್ಲಿ ಸಾಧ್ಯವಾಗದೇ ಹೋದರೆ ರಾಜ್ಯಮಟ್ಟದಲ್ಲಿ ಕಾನೂನುಬದ್ಧವಾದ ಪರಿಹಾರ ದೊರಕಿಸುವುದಾಗಿ ಸ್ಪಷ್ಟಪಡಿಸಿದರು.

ಕಾಂಗ್ರೆಸ್‍ನತ್ತ ಕೆ.ಆರ್.ಪೇಟೆ ಮಾಜಿ ಶಾಸಕ ನಾರಾಯಣಗೌಡ..!?

8 ತಿಂಗಳಲ್ಲಿಯೇ ನಮ್ಮ ಸರ್ಕಾರ ಎಲ್ಲಾ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆ. ಇದು ಸಾಧ್ಯವಿಲ್ಲ ಎಂದು ಹೇಳಿದ್ದ ಬಿಜೆಪಿಯವರು ಈಗ ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಲೋಕಸಭೆ ಚುನಾವಣೆ ಬಳಿಕ ಗ್ಯಾರಂಟಿ ಯೋಜನೆಗಳು ನಿಂತುಹೋಗಲಿವೆ ಎಂದು ಸುಳ್ಳು ಹೇಳುತ್ತಿದ್ದಾರೆ. ಜನ ಅವರ ಮಾತುಗಳನ್ನು ನಂಬಬಾರದು. ಗ್ಯಾರಂಟಿ ಯೋಜನೆಗಳು ಬಡವರ ಅನುಕೂಲಕ್ಕಾಗಿ ಅಸಮಾನತೆಯನ್ನು ತೊಲಗಿಸಲು ರೂಪಿಸಿದ ಯೋಜನೆಗಳು. ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ ಎಂದು ಹೇಳಿದರು.

ಗ್ಯಾರಂಟಿ ಯೋಜನೆಗಳಿಂದ ಉಳಿದ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿವೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಬಿಜೆಪಿ ಮತ್ತು ವಿರೋಧಪಕ್ಷದವರಿಗೆ ಅಭಿವೃದ್ಧಿ ಎಂದರೆ ಗೊತ್ತಿಲ್ಲ. ಅಧಿಕಾರದಲ್ಲಿದ್ದಾಗ ಅವರು ಯಾವುದೇ ಅಭಿವೃದ್ಧಿ ಕೆಲಸ ಮಾಡದೇ ಈಗ ಆರೋಪ ಮಾಡುತ್ತಿದ್ದಾರೆ. ಸಾಮಾಜಿಕ ನ್ಯಾಯ, ಸಮಾನತೆ ವಿಷಯದಲ್ಲಿ ನಂಬಿಕೆ ಇಲ್ಲದ ವಿರೋಧ ಪಕ್ಷಗಳು ಗ್ಯಾರಂಟಿ ಯೋಜನೆಗಳನ್ನು ಟೀಕಿಸುತ್ತಿದ್ದಾರೆ ಎಂದು ತಿರುಗೇಟು ನೀಡಿದರು.

ಮಲೆನಾಡಿನಲ್ಲಿ ಮಂಗನ ಕಾಯಿಲೆ ಹೆಚ್ಚಳ : ಜನರಲ್ಲಿ ಆತಂಕ

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿದ್ದರೆ ಬಂಡವಾಳ ಹರಿದುಬರಲಿದೆ. ಈ ನಿಟ್ಟಿನಲ್ಲಿ ನಮ್ಮ ಸರ್ಕಾರ ಹೆಚ್ಚು ಆದ್ಯತೆ ನೀಡಿದೆ. ಭ್ರಾತೃತ್ವ, ಸಮಾನತೆಗಾಗಿ ನಿರಂತರ ಪ್ರಯತ್ನಗಳಾಗುತ್ತಿವೆ ಎಂದು ತಿಳಿಸಿದರು. ಸಚಿವರಿಗೂ ಜಿಲ್ಲಾ ಕೇಂದ್ರಗಳಲ್ಲಿ ಜನಸ್ಪಂದನ ನಡೆಸಿ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಸೂಚನೆ ನೀಡಿರುವುದಾಗಿ ಮುಖ್ಯಮಂತ್ರಿಗಳು ಹೇಳಿದರು. ಸಚಿವರಾದ ಭೈರತಿ ಸುರೇಶ್, ಪ್ರಿಯಾಂಕ್ ಖರ್ಗೆ, ಶಿವರಾಜ ತಂಗಡಗಿ ಹಾಗೂ ಅಕಾರಿಗಳು ಜನಸ್ಪಂದನದಲ್ಲಿ ಹಾಜರಿದ್ದರು.

RELATED ARTICLES

Latest News