Thursday, December 5, 2024
Homeರಾಜ್ಯದೆಹಲಿಯಲ್ಲಿ ನಂದಿನಿ ಉತ್ಪನ್ನಗಳ ಮಾರಾಟಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ

ದೆಹಲಿಯಲ್ಲಿ ನಂದಿನಿ ಉತ್ಪನ್ನಗಳ ಮಾರಾಟಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ

CM Siddaramaiah launches sale of Nandini products in Delhi

ಬೆಂಗಳೂರು, ನ.21- ಕರ್ನಾಟಕದ ಕೆಎಂಎಫ್‌ ಸಂಸ್ಥೆಯ ನಂದಿನಿ ಬ್ರ್ಯಾಂಡ್‌ ಉತ್ಪನ್ನಗಳ ಅಧಿಕೃತ ಮಾರಾಟ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಆರಂಭಗೊಂಡಿದೆ. ನಂದಿನಿ ಉತ್ಪನ್ನಗಳನ್ನು ಬಿಡುಗಡೆ ಮಾಡುವ ಮೂಲಕ ಸಿಎಂ ಸಿದ್ದರಾಮಯ್ಯ, ದೆಹಲಿಯಲ್ಲಿ ಕೆಎಂಎಫ್‌ ಉತ್ಪನ್ನಗಳ ಮಾರಾಟಕ್ಕೆ ಚಾಲನೆ ನೀಡಿದರು.

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಕರ್ನಾಟಕ ಹಾಲು ಒಕ್ಕೂಟದ ನಂದಿನಿ ಬ್ರ್ಯಾಂಡ್‌ ಉತ್ಪನ್ನಗಳ ಅಧಿಕೃತ ಮಾರಾಟಕ್ಕೆ ಹಸಿರು ನಿಶಾನೆ ನೀಡಲಾಗಿದ್ದು, ದೇಶದ ರಾಜಧಾನಿಯಲ್ಲೂ ನಂದಿನಿ ಉತ್ಪನ್ನಗಳ ಲಭ್ಯ ಆರಂಭವಾಗಲಿದೆ. ಈ ಮೂಲಕ ಅಮುಲ್‌ ಮತ್ತು ಮದರ್‌ ಡೇರಿಯಂತಹ ಪ್ರಮುಖ ಬ್ರ್ಯಾಂಡ್‌ಗಳ ಜತೆ ಕರ್ನಾಟಕದ ನಂದಿನಿ ಕೂಡ ಪೈಪೋಟಿ ಒಡ್ಡಲಿದೆ.

ದೆಹಲಿಯ ಖಾಸಗಿ ಹೊಟೇಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ನಂದಿನಿ ಉತ್ಪನ್ನಗಳನ್ನು ಬಿಡುಗಡೆ ಮಾಡುವ ಮೂಲಕ ಅಧಿಕೃತ ಮಾರಾಟಕ್ಕೆ ಚಾಲನೆ ನೀಡಲಾಯಿತು. ಸಚಿವರಾದ ಭೈರತಿ ಸುರೇಶ್‌, ವೆಂಕಟೇಶ್‌, ಚಲುವರಾಯಸ್ವಾಮಿ, ವ್ಯವಸ್ಥಾಪಕ ನಿರ್ದೇಶಕ ಎಂ.ಕೆ.ಜಗದೀಶ್‌, ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಕೆಎಂಎಫ್‌ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

3-4 ಲಕ್ಷ ಲೀಟರ್‌ ಹಾಲು ಮಾರಾಟ ಗುರಿ:
ದೆಹಲಿಯಲ್ಲಿ 3 ರಿಂದ 4 ಲಕ್ಷ ಲೀಟರ್‌ ಹಾಲನ್ನು ಮಾರಾಟ ಮಾಡಬೇಕು ಎಂಬ ಗುರಿ ಹಾಕಿಕೊಂಡಿದ್ದೇವೆ. ಇನ್ನು ಮುಂದೆ ದೆಹಲಿಯಲ್ಲಿ ಶೇ.100ರಷ್ಟು ಪರಿಶುದ್ಧ ಹಾಲು ಸಿಗಲಿದೆ. ಶುದ್ಧ ಹಸುವಿನ ಹಾಲನ್ನು ದೆಹಲಿ ಜನರಿಗೆ ನೀಡುತ್ತೇವೆ ಎಂದು ಕೆಎಂಎಫ್‌ ಅಧ್ಯಕ್ಷ ಭೀಮಾನಾಯಕ್‌ ಹೇಳಿದರು.

ಕೆಲವು ತಿಂಗಳ ಹಿಂದೆ ಅಮೆರಿಕ ಹಾಗೂ ವೆಸ್ಟ್ ಇಂಡೀಸ್‌‍ನಲ್ಲಿ ನಡೆದಿದ್ದ ಟಿ-20 ವಿಶ್ವಕಪ್‌ ವೇಳೆ ಸ್ಕಾಟ್ಲೆಂಡ್‌ ಮತ್ತು ಐರ್ಲೆಂಡ್‌ ತಂಡಗಳ ಪ್ರಾಯೋಜಕತ್ವವನ್ನು ಕೆಎಂಎಫ್‌ ವಹಿಸಿತ್ತು. ಸ್ಕಾಟ್ಲೆಂಡ್‌ ಮತ್ತು ಐರ್ಲೆಂಡ್‌ ತಂಡಗಳ ಜೆರ್ಸಿ ಮೇಲೆ ಪ್ರಾಯೋಜಕರಾಗಿ ನಂದಿನಿ ಬ್ರ್ಯಾಂಡ್‌ ಹೆಸರು ನಮೂದಿಸಲಾಗಿತ್ತು.

ಅಷ್ಟೇ ಅಲ್ಲದೆ, ವಿಶ್ವಕಪ್‌ ವೇಳೆ ನಂದಿನಿ ಉತ್ಪನ್ನಗಳನ್ನೂ ಪೂರೈಸಲಾಗಿತ್ತು. ಆ ಮೂಲಕ ವಿಶ್ವಮಟ್ಟದಲ್ಲಿ ನಂದಿನಿ ಬ್ರ್ಯಾಂಡ್‌ ಉತ್ಪನ್ನಗಳು ಗಮನ ಸೆಳೆದಿದ್ದವು. ವಿಶ್ವಕಪ್‌ ವೇಳೆ ನಂದಿನಿ ಬ್ರ್ಯಾಂಡ್‌ನ್ನ ಫ್ರೋಝನ್‌ ಸಿಹಿತಿಂಡಿಗಳು, ಹಾಲಿನಿಂದ ಕೂಡಿದ ಎನರ್ಜಿ ಡ್ರಿಂಕ್‌ ನಂದಿನಿ ಸ್ಪ್ಲಾಶ್‌ಅನ್ನು ಕೆಎಂಎಫ್‌ ಅಮೆರಿಕಕ್ಕೆ ಪೂರೈಕೆ ಮಾಡಿತ್ತು.

ಅಮುಲ್‌ ಜೊತೆ ಸ್ಪರ್ಧೆಗೆ ಪ್ರಯತ್ನ : ಸಿದ್ದರಾಮಯ್ಯ ಸಿದ್ದರಾಮಯ್ಯ
ಹಾಲು ಉತ್ಪಾದನೆ ಹಾಗೂ ಮಾರುಕಟ್ಟೆಯಲ್ಲಿ ಗುಜರಾತನ್ನು ಹಿಂದಿಕ್ಕಲು ಸಾಧ್ಯವಾಗದಿದ್ದರೂ ಸಮೀಪ ಸ್ಪರ್ಧೆಗೆ ಪ್ರಯತ್ನ ನಡೆಸುವಂತೆ ಕೆಎಂಎಫ್‌ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.ದೆಹಲಿಯಲ್ಲಿಂದು ನಂದಿನಿ ಹಾಲು ವಿತರಣೆ ಹಾಗೂ ಇತರೆ ಉತ್ಪನ್ನಗಳ ಮಾರಾಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಗುಜರಾತಿನ ಅಮುಲ್‌ ಸಂಸ್ಥೆ ಪ್ರತಿದಿನ 400 ಲಕ್ಷ ಕೆಜಿ ಹಾಲು ಉತ್ಪಾದಿಸುತ್ತಿದ್ದು, ಉತ್ತಮ ಮಾರುಕಟ್ಟೆಯನ್ನು ಹೊಂದಿದೆ. ನಮ ರಾಜ್ಯದಲ್ಲಿ ಪ್ರತಿದಿನ 3 ಲಕ್ಷ ಕೆಜಿ ಹಾಲು ಉತ್ಪಾದನೆಯಾಗುತ್ತಿದೆ. ನಾವು ಗುಜರಾತ್‌ ಸಂಸ್ಥೆಯನ್ನು ಹಿಂದಿಕ್ಕಲು ಸಾಧ್ಯವಿಲ್ಲದೇ ಇರಬಹುದು. ಆದರೆ ಸಮೀಪ ಸ್ಪರ್ಧೆ ಮಾಡಲು ಅವಕಾಶವಿದೆ ಎಂದರು.

ಕರ್ನಾಟಕದಲ್ಲಿ ಪ್ರತಿದಿನ 200 ಅಥವಾ 300 ಲಕ್ಷ ಕೆಜಿ ಹಾಲು ಉತ್ಪಾದಿಸುವ ಅವಕಾಶಗಳಿವೆ. ಮಂಡ್ಯ ಜಿಲ್ಲೆಯಲ್ಲಿ ದಲ್ಲಿ 10 ಲಕ್ಷ ಕೆಜಿ ಹಾಲು ಉತ್ಪಾದನೆಯಾಗುತ್ತಿದೆ. ಅದನ್ನು 20 ಲಕ್ಷಕ್ಕೆ ಹೆಚ್ಚಿಸುವ ಸಾಮರ್ಥ್ಯವಿದೆ ಎಂದರು.

ಈ ಹಿಂದೆ ಗುಜರಾತಿನ ಕುರಿಯನ್‌ ಅವರು ಕ್ಷೀರಕ್ರಾಂತಿ ಜಾರಿಗೊಳಿಸಿದಾಗ ಸಂಸತ್‌ನಲ್ಲಿ ಚರ್ಚೆಯಾಗಿತ್ತು. ಹಳ್ಳಿಯ ಹಾಲು ಪಟ್ಟಣಕ್ಕೆ ಬಂದಿದೆ, ಪಟ್ಟಣದ ಸಾರಾಯಿ ಹಳ್ಳಿಗೆ ಹೋಗುತ್ತಿದೆ ಎಂಬ ಟೀಕೆಗಳು ಬಂದಿದ್ದವು. ದೇವಾನುದೇವತೆಗಳು ಕುಡಿಯುತ್ತಿದ್ದರು. ಸುರಪಾನ ಎಂಬುದು ಅಂದಿನಿಂದಲೂ ಇದೆ. ಹಾಗೆಂದು ನಾನು ಮದ್ಯಪಾನ ಮಾಡುವವರ ಪರವಾಗಿಲ್ಲ ಎಂದು ಹೇಳಿದರು.

ಜೆ.ಎಚ್‌.ಪಟೇಲ್‌ ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದಲ್ಲಿ ಮದ್ಯಪಾನ ನಿಷೇಧ ಮಾಡಬೇಕೆಂಬ ಚರ್ಚೆ ನಡೆಯಿತು. ಅದರ ಅಧ್ಯಯನಕ್ಕಾಗಿ ರಚಿಸಲಾಗಿದ್ದ ಉಪಸಮಿತಿಯಲ್ಲಿ ನಾನೂ ಇದ್ದೆ. ನಾವು ಗುಜರಾತ್‌ ಮತ್ತು ಕೇರಳಕ್ಕೆ ಭೇಟಿ ನೀಡಿದ್ದೆವು. ಅಲ್ಲೆಲ್ಲಾ ಸಂಪೂರ್ಣ ಪಾನ ನಿಷೇಧವಿದ್ದರೂ ಮದ್ಯ ಯಥೇಚ್ಛವಾಗಿ ಸಿಗುತ್ತಿತ್ತು. ಹೀಗಾಗಿ ಪಾನ ನಿಷೇಧ ಸಾಧ್ಯವಿಲ್ಲ. ಕಾನೂನಿನ ಮೂಲಕ ಕುಡಿತವನ್ನು ನಿಲ್ಲಿಸಲು ಅಸಾಧ್ಯ ಎಂಬುದು ಮನವರಿಕೆಯಾಯಿತು.

ಹಾಲು ಸಂಪೂರ್ಣ ಆಹಾರ. ಭರ್ತಿಯಾದ ಪೌಷ್ಠಿಕಾಂಶ ಹೊಂದಿದೆ. ಮಕ್ಕಳ ಬೆಳವಣಿಗೆಗೆ ಹಾಲು ಅತ್ಯಮೂಲ್ಯವಾಗಿದೆ. ಹೈನುಗಾರಿಕೆಯಿಂದ ಗ್ರಾಮೀಣ ಆರ್ಥಿಕತೆ ಸದೃಢಗೊಳ್ಳುತ್ತದೆ. ಗುಜರಾತಿನಲ್ಲಿ 80 ಸಾವಿರ ಕೋಟಿ ರೂ. ವಹಿವಾಟು ನಡೆಸಿದರೆ ಕರ್ನಾಟಕದಲ್ಲಿ 22 ಸಾವಿರ ಕೋಟಿ ರೂ. ವ್ಯಾಪಾರವಾಗುತ್ತಿದೆ. ಪ್ರತಿದಿನ 31 ಕೋಟಿ ರೂ.ಗಳನ್ನು ಹಾಲು ಉತ್ಪಾದಕರಿಗೆ ಪಾವತಿ ಮಾಡಲಾಗುತ್ತಿದೆ ಎಂದರು.

ಪಶುಸಂಗೋಪನಾ ಸಚಿವರಾಗಿದ್ದಾಗ ಹೈನುಗಾರಿಕೆ ಸಂಘಗಳು ಮತ್ತು ಡೈರಿಯನ್ನು ಒಗ್ಗೂಡಿಸುವ ನಿರ್ಣಯ ಕೈಗೊಳ್ಳಲಾಯಿತು. ಮುಖ್ಯಮಂತ್ರಿಯಾಗಿದ್ದಾಗ ಕ್ಷೀರಭಾಗ್ಯ ಯೋಜನೆ ಜಾರಿಗೊಳಿಸಿದೆ. ಅದಕ್ಕೆ ವಿಶ್ವಬ್ಯಾಂಕ್‌ ಮನ್ನಣೆ ದೊರೆತಿದೆ ಎಂದು ಹೇಳಿದರು. ದೆಹಲಿ ದೊಡ್ಡ ಹಾಗೂ ವೇಗವಾಗಿ ಬೆಳೆಯುತ್ತಿರುವ ನಗರ. ವಿಶ್ವದ ನಾನಾ ಭಾಗಗಳಿಂದಲೂ ಜನ ಇಲ್ಲಿಗೆ ಬಂದು ನೆಲೆಸಿದ್ದಾರೆ. ಅವರಿಗೆ ಹಾಲಿನ ಅಗತ್ಯ ಇದೆ. ಹಾಲು ಮಾರುಕಟ್ಟೆಗೆ ಹೆಚ್ಚಿನ ವಿತರಕರು ಮುಂದೆ ಬರಬೇಕು ಎಂದರು.

2500 ಕಿ.ಮೀ. ದೂರ ಇರುವ ದೆಹಲಿಗೆ ಹಾಲು ಸರಬರಾಜು ಮಾಡಲು 54 ಗಂಟೆ ಸಮಯ ಹಿಡಿಯುತ್ತದೆ. ಎರಡು ಕಾಲು ದಿನ ಹಾಲು ಸರಬರಾಜು ಮಾಡುವಾಗ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕು ಎಂದು ಸಲಹೆ ನೀಡಿದರು.

RELATED ARTICLES

Latest News