ಬೆಂಗಳೂರು,ಡಿ.21- ಕೋವಿಡ್ ನಿಯಂತ್ರಣಕ್ಕೆ ಅನುಸರಿಸಲಾಗಿರುವ ಕ್ರಮಗಳ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಗೃಹಕಚೇರಿ ಕೃಷ್ಣಾದಲ್ಲಿ ಆರೋಗ್ಯ ಇಲಾಖೆಯ ಸಚಿವರು, ಅಧಿಕಾರಿಗಳು ಹಾಗು ಇತರ ಇಲಾಖೆಗಳ ಪ್ರಮುಖರ ಜೊತೆ ಸಭೆ ನಡೆಸಲಾಗಿದ್ದು, ಕೋವಿಡ್ ವಿಷಯದಲ್ಲಿ ಅನಗತ್ಯ ಆತಂಕವೂ ಬೇಡ ಜೊತೆಯಲ್ಲಿ ನಿರ್ಲಕ್ಷ್ಯವೂ ಸಲ್ಲ ಎಂದು ಸೂಚನೆ ನೀಡಿದ್ದಾರೆ.
ಜಿಲ್ಲೆ, ತಾಲೂಕು ಆಸ್ಪತ್ರೆಗಳಲ್ಲಿ ಆಮ್ಲಜನಕ ಲಭ್ಯತೆ, ಐಸೊಲೇಷನ್ ಬೆಡ್‍ಗಳು, ವೆಂಟಿಲೇಟರ್, ತುರ್ತು ಚಿಕಿತ್ಸೆಗೆ ಪ್ರತ್ಯೇಕ ವ್ಯವಸ್ಥೆ ಸೇರಿದಂತೆ ಅಗತ್ಯ ಇರುವ ವ್ಯವಸ್ಥೆಗಳ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ನೀಡಲು ನಿರ್ಧರಿಸಲಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದರಪಟ್ಟಿಯ ಕುರಿತು ಚರ್ಚೆ ಮಾಡಲಾಗಿದೆ. ಆರ್‍ಟಿಪಿಸಿಆರ್ ಹಾಗೂ ಇತರ ಪರೀಕ್ಷೆಗಳಿಗೆ ಖಾಸಗಿ ಆಸ್ಪತ್ರೆಗಳು ಸಂಗ್ರಹಿಸಬಹುದಾದ ದರಗಳ ಕುರಿತು ಸಮಾಲೋಚನೆಗಳಾಗಿವೆ.
ನಿನ್ನೆ ಕೇಂದ್ರ ಸಚಿವರು ಎಲ್ಲಾ ರಾಜ್ಯಗಳ ಆರೋಗ್ಯ ಸಚಿವರು ಹಾಗೂ ಕೆಲ ಪ್ರಮುಖರೊಂದಿಗೆ ಸಭೆ ನಡೆಸಿದ್ದರು. ನಿನ್ನೆ ರಾತ್ರಿ ದೆಹಲಿ ಪ್ರವಾಸದಿಂದ ಬೆಂಗಳೂರಿಗೆ ಮರಳಿದ ಸಿದ್ದರಾಮಯ್ಯ ಇಂದು ಬೆಳಿಗ್ಗೆ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. ಶಾಲಾ-ಕಾಲೇಜುಗಳು, ಸಾರ್ವಜನಿಕ ಸ್ಥಳಗಳು, ಜನನಿಬಿಡ ಪ್ರದೇಶಗಳು, ಮಾಲ್‍ಗಳು, ಜಾತ್ರೆ, ಸಮಾವೇಶಗಳಲ್ಲಿ ಅನುಸರಿಸಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಚರ್ಚೆಗಳಾಗಿವೆ. ಈಗಾಗಲೇ ಆಸ್ಪತ್ರೆಗಳು ಹಾಗೂ ಕೆಲ ಸರ್ಕಾರಿ ಕಚೇರಿಗಳಲ್ಲಿ ಮಾಸ್ಕ್ ಖಡ್ಡಾಯಗೊಳಿಸಲಾಗಿದೆ. ಓಮಿಕ್ರಾನ್‍ನ ಉಪತಳಿಯಾಗಿರುವ ಜೆಎನ್-1 ಸೋಂಕು ಅಪಾಯಕಾರಿಯಲ್ಲ ಎಂಬ ವರದಿ ಇದ್ದರೂ ಕೂಡ ಸೋಂಕಿನಿಂದ ಅಸ್ವಸ್ಥತೆ ಹಾಗೂ ಆರೋಗ್ಯದ ಏರಿಳಿತಗಳಾಗುವ ಕಾರಣಕ್ಕೆ ಮುಂಜಾಗ್ರತೆ ಅನಿವಾರ್ಯ ಎಂದು ಮುಖ್ಯಮಂತ್ರಿ ಸೂಚಿಸಿದ್ದಾರೆ.
ಸೋಂಕು ಹರಡುವ ಪ್ರಮುಖ ಪ್ರದೇಶಗಳನ್ನು ಗುರುತಿಸಿ ಸಾನಿಟೈಸೇಷನ್ ಸೇರಿದಂತೆ ಇತರ ಕ್ರಮಗಳನ್ನು ಕೈಗೊಳ್ಳಬೇಕು. ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಯಾಗದಂತೆ ವಿಶ್ವಾಸ ಮೂಡಿಸಬೇಕು. ಆಸ್ಪತ್ರೆಗೆ ದಾಖಲಾಗುವ ಪ್ರಮಾಣ ಹೆಚ್ಚಾದ ಸಂದರ್ಭದಲ್ಲಿ ಪರಿಸ್ಥಿತಿಯನ್ನು ನಿಬಾಯಿಸಲು ಅಗತ್ಯವಾದ ಔಷಧಿ ಹಾಗೂ ಚಿಕಿತ್ಸಾ ಸಲಕರಣೆಗಳನ್ನು ಸಜ್ಜುಗೊಳಿಸಿಟ್ಟುಕೊಳ್ಳಬೇಕು. ಪಿಪಿಇ ಕಿಟ್, ಪರೀಕ್ಷಾ ಕಿಟ್‍ಗಳಂತಹ ಸೌಲಭ್ಯಗಳನ್ನು ಜಿಲ್ಲಾಮಟ್ಟದಲ್ಲೇ ಹೊಂದಿಸಿಕೊಳ್ಳುವಂತೆ ಸೂಚಿಸಲಾಗಿದೆ.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್, ಗೃಹಸಚಿವ ಡಾ.ಜಿ.ಪರಮೇಶ್ವರ್, ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್, ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಖರ್ಗೆಯವರು ಪ್ರಧಾನಿ ಅಭ್ಯರ್ಥಿಯಾದರೆ ಸಂತಸದ ವಿಷಯ : ಪರಮೇಶ್ವರ್
ಕೋವಿಡ್ 1, 2 ಮತ್ತು 3 ನೇ ಅಲೆಯ ವೇಳೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿತ್ತು. ವಿಪಕ್ಷವಾಗಿದ್ದ ಕಾಂಗ್ರೆಸ್ ಆಡಳಿತ ವ್ಯವಸ್ಥೆಯ ಬಗ್ಗೆ ವ್ಯಾಪಕ ಟೀಕೆ ಮಾಡಿತ್ತು. ಕೋವಿಡ್ ಸಲಕರಣೆಗಳ ಖರೀದಿಯಲ್ಲೂ ಭಾರೀ ಅವ್ಯವಹಾರವಾಗಿದೆ ಎಂಬ ಆರೋಪ ಮಾಡಿದ್ದಲ್ಲದೆ, ಅದರ ತನಿಖೆಗೂ ಆದೇಶಿಸಿದೆ. ಈಗ ಪರಿಸ್ಥಿತಿ ತಿರುವು ಮುರುವಾಗಿದ್ದು ಕಾಂಗ್ರೆಸ್ ಅಧಿಕಾರದಲ್ಲಿದೆ, ಬಿಜೆಪಿ ವಿರೋಧಪಕ್ಷದಲ್ಲಿದೆ.
ಚಿಕಿತ್ಸೆಗೆ ತುರ್ತು ಕ್ರಮ ಕೈಗೊಳ್ಳುವುದು ಒಂದೆಡೆಯಾದರೆ, ಅದರ ಪೂರ್ವ ಸಿದ್ಧತೆಗಳಲ್ಲಿ ಯಾವುದೇ ನಿಯಮ ಬಾಹಿರ ಕೃತ್ಯಗಳಾಗದಂತೆ ಎಚ್ಚರಿಕೆ ವಹಿಸುವುದು ಮುಖ್ಯವಾಗಿದೆ. ಈ ಹಿನ್ನೆಲೆಯಲ್ಲಿ ಖುದ್ದು ಸಿದ್ದರಾಮಯ್ಯ ಅವರೇ ಅಧಿಕಾರಿಗಳ ಜೊತೆ ಸಭೆ ನಡೆಸಿ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದ್ದಾರೆ ಎನ್ನಲಾಗಿದೆ.