Thursday, October 24, 2024
Homeರಾಜ್ಯಗೊಂದಲ ಬಿಡಿ ಕೆಲಸ ಮಾಡಿ : ಸಚಿವರಿಗೆ ಸಿಎಂ ಸಲಹೆ

ಗೊಂದಲ ಬಿಡಿ ಕೆಲಸ ಮಾಡಿ : ಸಚಿವರಿಗೆ ಸಿಎಂ ಸಲಹೆ

ಬೆಂಗಳೂರು,ನ.4- ಕಾಂಗ್ರೆಸ್‍ನಲ್ಲಿ ಇತ್ತೀಚೆಗೆ ಸೃಷ್ಟಿಯಾಗಿರುವ ಗೊಂದಲಗಳನ್ನು ಬಗೆಹರಿಸುವುದು ಮತ್ತು ಲೋಕಸಭೆ ಚುನಾವಣೆ ತಯಾರಿ ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಸಂಪುಟ ಸಚಿವರ ಜೊತೆ ಉಪಹಾರಕೂಟ ನಡೆಸಿದ್ದು, ಗೊಂದಲಗಳನ್ನು ಬದಿಗಿಟ್ಟು ಬರ ನಿರ್ವಹಣೆ ಮತ್ತು ಚುನಾವಣೆ ಸಿದ್ದತೆಗಳಿಗೆ ಆದ್ಯ ಗಮನ ನೀಡುವಂತೆ ಸೂಚನೆ ನೀಡಿದ್ದಾರೆ.

ಮೊದಲ ಹಂತದಲ್ಲಿ 19 ಸಚಿವರಿಗೆ ಆಹ್ವಾನ ನೀಡಲಾಗಿದ್ದು, ಬಾಕಿ ಉಳಿದ ಸಚಿವರ ಜೊತೆಗೆ ಮುಂದಿನ ಬುಧವಾರ ಅಥವಾ ಗುರುವಾರ ಉಪಹಾರಕೂಟ ನಡೆಸುವ ಸಾಧ್ಯತೆ ಇದೆ. ಇಂದು ಬೆಳಗ್ಗೆ ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕಾವೇರಿಯಲ್ಲಿ ಉಪಹಾರಕೂಟದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ರಾಮಲಿಂಗಾರೆಡ್ಡಿ, ಡಾ.ಜಿ.ಪರಮೇಶ್ವರ್, ಕೆ.ಎಚ್.ಮುನಿಯಪ್ಪ, ಎಂ.ಬಿ.ಪಾಟೀಲ್, ಎಚ್.ಸಿ.ಮಹದೇವಪ್ಪ, ಜಮೀರ್ ಅಹಮ್ಮದ್ ಖಾನ್, ದಿನೇಶ್ ಗುಂಡೂ ರಾವ್, ಕೃಷ್ಣಭೈರೇಗೌಡ, ಸಂತೋಷ್ ಲಾಡ್, ಈಶ್ವರ್ ಖಂಡ್ರೆ, ಕೆ.ಎನ್. ರಾಜಣ್ಣ, ಪ್ರಿಯಾಂಕ ಖರ್ಗೆ, ಭೈರತಿ ಸುರೇಶ್, ಎನ್. ಎಸ್.ಬೋಸರಾಜ್ ಸೇರಿದಂತೆ ಹಲವರು ಭಾಗವಹಿಸಿದ್ದರು. ಸಚಿವ ಸತೀಶ್ ಜಾರಕಿಹೊಳಿ ವೈಯಕ್ತಿಕ ಕಾರಣದಿಂದಾಗಿ ಸಭೆಯಿಂದ ದೂರ ಉಳಿದಿದ್ದರು.

ಸಚಿವ ಕೆ.ಜೆ.ಜಾರ್ಜ್ ದೆಹಲಿ ಪ್ರವಾಸದಲ್ಲಿರುವುದರಿಂದ ಸಭೆಯಲ್ಲಿ ಭಾಗವಹಿಸಲಿಲ್ಲ ಎಂದು ಹೇಳಲಾಗಿದೆ.
ಇತ್ತೀಚೆಗೆ ಕಾಂಗ್ರೆಸ್‍ನಲ್ಲಿ ಒಂದರ ಮೇಲೊಂದರಂತೆ ಗೊಂದಲಕಾರಿ ಹೇಳಿಕೆಗಳು ಕೇಳಿಬರುತ್ತಿದ್ದು, ಲೋಕಸಭೆ ಚುನಾವಣೆಗೆ ಕೆಟ್ಟ ಪರಿಣಾಮ ಬೀರುವ ಆತಂಕ ಸೃಷ್ಟಿಯಾಗಿತ್ತು.

ಪಕ್ಷದಲ್ಲಿ ಎರಡು ಶಕ್ತಿ ಕೇಂದ್ರಗಳು ಮತ್ತೊಮ್ಮೆ ಗಂಭೀರ ಸ್ವರೂಪದಲ್ಲಿ ಸಕ್ರಿಯಗೊಂಡಿದ್ದವು. ಡಿ.ಕೆ.ಶಿವಕುಮಾರ್ ಪರವಾಗಿ ಕೆಲವು ಶಾಸಕರು ಬ್ಯಾಟಿಂಗ್ ಮಾಡಿದರೆ, ಕೆಲವು ಸಚಿವರು ಮತ್ತು ಶಾಸಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಪರವಾಗಿ ಬಹಿರಂಗ ಹೇಳಿಕೆ ನೀಡುವ ಮೂಲಕ ಒಳಬೇಗುದಿಗೆ ತುಪ್ಪ ಸುರಿದಿದ್ದರು. ಇದು ದಿನೇ ದಿನೇ ತೀವ್ರಗೊಳಲಾರಂಭಿಸಿ ಅಕಾರ ಹಂಚಿಕೆಯ ವಿಚಾರವನ್ನು ಹಾದಿರಂಪ ಬೀದಿರಂಪ ಮಾಡಿತ್ತು.

ಎರಡೂವರೆ ವರ್ಷದ ಬಳಿಕ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗುತ್ತಾರೆ ಎಂದು ಹೇಳುತ್ತಲೇ ಕೆಲವು ಶಾಸಕರು ಬಿಜೆಪಿ ಆಪರೇಷನ್ ಕಮಲವನ್ನು ಚಾಲ್ತಿಯಲ್ಲಿಟ್ಟಿದೆ. ಕಾಂಗ್ರೆಸ್‍ನ 11ಕ್ಕೂ ಹೆಚ್ಚು ಮಂದಿ ಶಾಸಕರನ್ನು ಈಗಾಗಲೇ ಸಂಪರ್ಕಿಸಲಾಗಿದೆ. 50 ಕೋಟಿ ರೂ. ಆಮಿಷವೊಡ್ಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸರ್ಕಾರ ಅಸ್ಥಿರಗೊಳಿಸುವ ಆತಂಕವಿದೆ. ಅಂತಹ ಪರಿಸ್ಥಿತಿಯನ್ನು ನಿಭಾಯಿಸಲು ಟ್ರಬಲ್ ಶೂಟರ್ ಖ್ಯಾತಿಯ ಡಿ.ಕೆ.ಶಿವಕುಮಾರ್ ಅವರು ಅನಿವಾರ್ಯ ಎಂದು ಬಿಂಬಿಸಲು ಯತ್ನಿಸಲಾಗಿತ್ತು.

ಇದಕ್ಕೆ ತಮ್ಮದೇ ಶೈಲಿಯಲ್ಲಿ ಮಾಸ್ಟರ್ ಸ್ಟ್ರೋಕ್ ನೀಡಿರುವ ಸಿದ್ದರಾಮಯ್ಯ, ಐದು ವರ್ಷ ನಮ್ಮ ಸರ್ಕಾರ ಅಧಿಕಾರದಲ್ಲಿರುತ್ತದೆ. ನಾನು ಮುಖ್ಯಮಂತ್ರಿಯಾಗಿದ್ದೇನೆ. ಮುಖ್ಯಮಂತ್ರಿಯಾಗಿ ಮುಂದುವರೆಯುತ್ತೇನೆ ಎಂದು ಹೇಳುವ ಮೂಲಕ ಭಾರೀ ಸಂಚಲನ ಮೂಡಿಸಿದ್ದರು.

ಅದರ ಬೆನ್ನಲ್ಲೇ ಕೆ.ಎನ್.ರಾಜಣ್ಣ ವಿವಾದಕ್ಕೆ ತುಪ್ಪ ಸುರಿಯುವಂತೆ ಸಿದ್ದರಾಮಯ್ಯ ಅವರ ಬಳಿಕ ಡಾ.ಜಿ.ಪರಮೇಶ್ವರ್ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಘೋಷಿಸಿಬಿಟ್ಟರು. ಪಕ್ಷದಲ್ಲಿ ಮೇಲಿಂದ ಮೇಲೆ ಆಕ್ರಮಣಕಾರಿ ಹೇಳಿಕೆಗಳು ಹೊರಬರುತ್ತಿರುವುದನ್ನು ಗಮನಿಸಿದ ಡಿ.ಕೆ.ಶಿವಕುಮಾರ್ ಸ್ವಲ್ಪ ತಣ್ಣಗಾದಂತಾಗಿದ್ದಾರೆ. ತಾವು ಮುಖ್ಯಮಂತ್ರಿಯಾಗುವುದಾಗಿ ಎಲ್ಲಿಯೂ ಹೇಳಿಲ್ಲ. ಹಂಚಿಕೆ ಮಾಡಿಕೊಳ್ಳಲು ಅಧಿಕಾರವೇನು ಅವರ ಸ್ವಂತ ಆಸ್ತಿಯಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಲು ಯತ್ನಿಸಿದ್ದಾರೆ.

ದೆಹಲಿಗೆ ಹೊಂದಿಕೊಂಡ ಹಲವು ನಗರಗಳಲ್ಲಿ ಕಂಪಿಸಿದ ಭೂಮಿ

ಇದರ ಬೆನ್ನಲ್ಲೂ ರಾಮನಗರ ಹಾಗೂ ಇತರ ಭಾಗದ ಶಾಸಕರು ಡಿ.ಕೆ.ಶಿವಕುಮಾರ್ ಪರವಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಹೈಕಮಾಂಡ್ ನಾಯಕರು, ಶಾಸಕರು, ಕ್ಷೇತ್ರ ಅಭಿವೃದ್ಧಿ ಮತ್ತು ಸರ್ಕಾರದ ಪರವಾಗಿ ಮಾತ್ರ ಮಾತನಾಡಬೇಕು. ಅನಗತ್ಯವಾಗಿ ವಿವಾದ ಸೃಷ್ಟಿಸುವ ಹೇಳಿಕೆ ನೀಡಬಾರದು ಎಂದು ಕಟ್ಟಪ್ಪಣೆ ಮಾಡಿದ್ದರು.
ಮತ್ತೊಂದು ಹೆಜ್ಜೆ ಮುಂದೆ ಹೋಗಿ ಡಿ.ಕೆ.ಶಿವಕುಮಾರ್ ಅವರು, ಗೊಂದಲದ ಹೇಳಿಕೆ ನೀಡುವ ಶಾಸಕರಿಗೆ ನೋಟಿಸ್ ನೀಡುವುದಾಗಿ ಎಚ್ಚರಿಸಿದರು. ಆದರೆ ಇದ್ಯಾವುದೂ ಫಲ ನೀಡಿದಂತೆ ಕಾಣುತ್ತಿಲ್ಲ. ಹೀಗಾಗಿ ಖುದ್ದು ಸಿದ್ದರಾಮಯ್ಯನವರೇ ಅಖಾಡಕ್ಕಿಳಿದಿದ್ದಾರೆ.

ಉಪಹಾರದ ನೆಪದಲ್ಲಿ ಸಚಿವರ ಜೊತೆ ಸಭೆ ನಡೆಸಿ ಎಲ್ಲ ಗೊಂದಲಗಳಿಗೂ ತೆರೆ ಎಳೆಯಲು ಮುಂದಾಗಿದ್ದಾರೆ. ಅಕಾರ ಹಂಚಿಕೆ, ಸಚಿವ ಸಂಪುಟ ಪುನಾರಚನೆ, ನಿಗಮಮಂಡಳಿಗಳ ನೇಮಕಾತಿ, ಲೋಕಸಭೆ ಚುನಾವಣೆ ಕುರಿತಂತೆ ಇಂದಿನ ಸಭೆಯಲ್ಲಿ ಚರ್ಚೆಗಳಾಗಿವೆ.

ಲೋಕಸಭೆ ಚುನಾವಣೆಯ ಅಭ್ಯರ್ಥಿಗಳ ಆಯ್ಕೆಗೆ ಸಚಿವರ ನೇತೃತ್ವದಲ್ಲಿ ವೀಕ್ಷಕರ ಸಮಿತಿ ರಚಿಸಲಾಗಿದೆ. ಆದರೆ ಬಹಳಷ್ಟು ಮಂದಿ ಈವರೆಗೂ ಕ್ಷೇತ್ರಗಳಿಗೆ ತೆರಳಿ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸುವ ಮತ್ತು ಪಕ್ಷಕ್ಕೆ ವರದಿ ನೀಡುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿಲ್ಲ.

ಈ ಕುರಿತಂತೆ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ.ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೆವಾಲ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರೊಂದಿಗಿನ ಸಭೆಯಲ್ಲಿ ಚರ್ಚಿಸಲಾಗಿತ್ತು.

ಎಲ್ಲ ಸಚಿವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಅವರು ಒಟ್ಟಾಗಿ ಕುಳಿತು ಚರ್ಚೆ ನಡೆಸುವಂತೆ ಸಲಹೆ ನೀಡಲಾಗಿತ್ತು. ಈ ಹಿನ್ನಲೆಯಲ್ಲಿ ಇಂದು ಉಪಹಾರಕೂಟ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಸಭೆಯಲ್ಲಿ ಅಧಿಕಾರಿಗಳ ವರ್ಗಾವಣೆ, ಆಡಳಿತದ ವಿಚಾರಗಳು, ಬರ ನಿರ್ವಹಣೆ ಹಾಗೂ ಚುನಾವಣೆ ತಯಾರಿಗೆ ಸಂಬಂಧಪಟ್ಟಂತೆ ಮಹತ್ವದ ಚರ್ಚೆಗಳಾಗಿದ್ದು, ಸಚಿವರು ಕೂಡ ಸಲಹೆಗಳನ್ನು ನೀಡಿದ್ದಾರೆ ಎಂದು ಹೇಳಲಾಗಿದೆ.

ಮುಂದಿನ ದಿನಗಳಲ್ಲಿ ಎಲ್ಲ ಗೊಂದಲಗಳನ್ನು ಬದಿಗಿಟ್ಟು, ಚುನಾವಣೆಯತ್ತ ಗಮನಹರಿಸುವುದಾಗಿ ಸಚಿವರು ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಸಭೆಯಲ್ಲಿ ಭಾಗವಹಿಸಿದ್ದ ಎಲ್ಲ ಸಚಿವರು ಸೌಹಾರ್ದಯುತ ವಾತಾವರಣದಲ್ಲಿ ಚರ್ಚೆ ನಡೆಸಿದ್ದಾರೆ. ಅದರಲ್ಲೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಗುನಗುತ್ತಾ ಎಲ್ಲರೊಂದಿಗೆ ಆತ್ಮೀಯವಾಗಿ ಮಾತನಾಡಿದ್ದು ಒಗ್ಗಟ್ಟಿನ ಮಂತ್ರ ಜಪಿಸಿದ್ದಾರೆ.

RELATED ARTICLES

Latest News