Sunday, July 7, 2024
Homeರಾಜ್ಯಕಲುಷಿತ ನೀರಿನ ಸಮಸ್ಯೆ : ಜಿಲ್ಲಾಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಎಚ್ಚರಿಕೆ

ಕಲುಷಿತ ನೀರಿನ ಸಮಸ್ಯೆ : ಜಿಲ್ಲಾಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಎಚ್ಚರಿಕೆ

ಬೆಂಗಳೂರು, ಮೇ 23- ಇನ್ನು ಮುಂದೆ ರಾಜ್ಯದ ಯಾವುದೇ ಭಾಗದಲ್ಲಿ ಕಲುಷಿತ ನೀರಿನ ತೊಂದರೆಗಳು ಕಂಡುಬಂದರೆ ಆಯಾ ಜಿಲ್ಲಾಧಿಕಾರಿಗಳನ್ನೇ ಹೊಣೆ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಸಿದ್ದಾರೆ.

ಲೋಕಸಭಾ ಚುನಾವಣಾ ನೀತಿ ಸಂಹಿತೆಯನ್ನು ಆಯೋಗ ಸಡಿಲಗೊಳಿಸಿದ ಬೆನ್ನಲ್ಲೇ ಇಂದು ಮುಖ್ಯಮಂತ್ರಿಯವರು ಗೃಹಕಚೇರಿ ಕೃಷ್ಣಾದಿಂದ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದರು.

ಮೈಸೂರಿನ 2 ಹಳ್ಳಿಗಳಲ್ಲಿ ಕಾಲರಾ ತಲೆದೋರಿದೆ. ಟಿ.ನರಸೀಪುರ ತಾಲೂಕು ತಗಡೂರು ಹಾಗೂ ಕೆ.ಸಾಲಹುಂಡಿ ಗ್ರಾಮಗಳಲ್ಲಿ ಕಲುಷಿತ ನೀರಿನ ಪ್ರಕರಣಗಳಿಂದ ಕಾಲರಾ ಪ್ರಕರಣಗಳು ಹೆಚ್ಚಾಗಿವೆ. ನೀರು ಕಲುಷಿತಗೊಳ್ಳಲು ಇಂಜಿನಿಯರ್‌ಗಳ ಬೇಜವಾಬ್ದಾರಿತನ ಕಾರಣ ಎಂದು ತರಾಟೆಗೆ ತೆಗೆದುಕೊಂಡರು.

ನೀರಿನ ಗುಣಮಟ್ಟವನ್ನು ದಿನನಿತ್ಯ ಪರೀಕ್ಷೆಗೊಳಪಡಿಸಿ ಅದು ಕುಡಿಯಲು ಯೋಗ್ಯವೇ, ಅಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕಾಗಿದೆ. ಅದನ್ನು ಮಾಡದೆ ನಿರ್ಲಕ್ಷ್ಯ ವಹಿಸುವುದು ಅಧಿಕಾರಿಗಳು ಮಾಡುವ ದೊಡ್ಡ ಅಪರಾಧ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಜನಸಾಮಾನ್ಯರು ಸಂಕಷ್ಟಕ್ಕೊಳಗಾಗುತ್ತಿದ್ದಾರೆ ಎಂದು ಕೆಂಡಕಾರಿದರು.

ಇನ್ನು ಮುಂದೆ ಕುಡಿಯುವ ನೀರಿನ ಪರೀಕ್ಷೆ ನಿತ್ಯವೂ ನಡೆಯಬೇಕು. ಯಾವುದೇ ಭಾಗದಲ್ಲೂ ಕಲುಷಿತ ನೀರಿನ ಪ್ರಕರಣ ವರದಿಯಾದರೆ ಸಂಬಂಧಪಟ್ಟ ಜಿಲ್ಲಾಧಿಕಾರಿಗಳನ್ನು ಹೊಣೆ ಮಾಡಲಾಗುವುದು. ಕಾಲರಾ ಹಾಗೂ ಇತರ ಸಾಂಕ್ರಾಮಿಕ ರೋಗಗಳ ವಿಷಯದಲ್ಲಿ ಕರ್ತವ್ಯ ಲೋಪವೆಸಗಿದ ಜಿಲ್ಲಾಮಟ್ಟದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಅಧಿಕಾರಿಗಳ ನಿರ್ಲಕ್ಷ್ಯ :
ಕೆ.ಸಾಲಹುಂಡಿ ಗ್ರಾಮದಲ್ಲಿ ಕಲುಷಿತ ನೀರಿನಿಂದ 40 ಮಂದಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದರೆ ಒಬ್ಬ ಯುವಕ ಮೃತಪಟ್ಟ ಪ್ರಕರಣ ಇತ್ತೀಚೆಗೆ ವರದಿಯಾಗಿತ್ತು. ಕಳೆದ ವರ್ಷ ವಿಜಯಪುರ, ಕಲಬುರಗಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ಪದೇಪದೇ ಕಲುಷಿತ ನೀರಿನ ಪ್ರಕರಣಗಳು ವರದಿಯಾಗಿದ್ದವು. ಮಹಾನಗರಿ ಬೆಂಗಳೂರಿನಲ್ಲೂ ಅಲ್ಲಲ್ಲಿ ಕಲುಷಿತ ನೀರಿನ ಪ್ರಕರಣಗಳು ಕಂಡುಬಂದಿವೆಯಾದರೂ ತತ್‌ಕ್ಷಣದ ಚಿಕಿತ್ಸೆಯಿಂದಾಗಿ ಹೆಚ್ಚಿನ ಅನಾಹುತಗಳಾಗಿಲ್ಲ.

ಅಧಿಕಾರಿಗಳು ಕುಡಿಯುವ ನೀರಿನ ಜೊತೆ ಕಲುಷಿತ ನೀರು ಮಿಶ್ರಣಗೊಳ್ಳುವ ದಿವ್ಯ ನಿರ್ಲಕ್ಷ್ಯ ವಹಿಸಿದ್ದು, ಜನಸಾಮಾನ್ಯರು ಅದರಲ್ಲೂ ಬಡಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಇಂದು ನಡೆದ ಸಭೆಯಲ್ಲಿ ಮುಖ್ಯಮಂತ್ರಿಯವರು ಈ ವಿಚಾರದ ಬಗ್ಗೆ ಆದ್ಯತೆ ನೀಡಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

RELATED ARTICLES

Latest News