Sunday, June 16, 2024
Homeರಾಜ್ಯಮಕ್ಕಳ ಶಾಲೆ ಪ್ರವೇಶಾತಿ ವಯೋಮಿತಿಯ ನಿಯಮಕ್ಕೆ ಪೋಷಕರಿಂದ ತೀವ್ರ ವಿರೋಧ

ಮಕ್ಕಳ ಶಾಲೆ ಪ್ರವೇಶಾತಿ ವಯೋಮಿತಿಯ ನಿಯಮಕ್ಕೆ ಪೋಷಕರಿಂದ ತೀವ್ರ ವಿರೋಧ

ಬೆಂಗಳೂರು, ಮೇ 23- ಒಂದನೇ ತರಗತಿ ಪ್ರವೇಶಾತಿಗೆ 2025-26ನೇ ಸಾಲಿನಿಂದ ಮಕ್ಕಳ ಕನಿಷ್ಠ ವಯೋಮಿತಿಯನ್ನು 6 ವರ್ಷಕ್ಕೆ ನಿಗದಿ ಮಾಡಿರುವುದು ಮತ್ತು ಎಲ್‌ಕೆಜಿಗೆ ದಾಖಲಿಸಲು ಮಕ್ಕಳ ವಯಸ್ಸು ಜೂನ್‌ 1ರೊಳಗೆ 4 ವರ್ಷ ಆಗಿರಬೇಕು (2023-24ರ ಶೈಕ್ಷಣಿಕ ವರ್ಷದಿಂದ) ಎಂಬ ನಿಯಮಕ್ಕೆ ಪೋಷಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

ಈ ಕಟ್ಟುನಿಟ್ಟಿನ ವಯೋಮಿತಿಗಳು ಮಕ್ಕಳನ್ನು ಸಕಾಲಿಕ ಶಿಕ್ಷಣದಿಂದ ವಂಚಿತಗೊಳಿಸುತ್ತಿವೆ. ಅದರಲ್ಲೂ ವಿಶೇಷವಾಗಿ ಕೇವಲ ಒಂದು ದಿನದ ಅಂತರದಲ್ಲಿ ವಯಸ್ಸು ಪೂರ್ಣಗೊಂಡಿರದಿದ್ದರೆ ಅಂಥ ಮಕ್ಕಳಿಗೆ ಅನ್ಯಾಯವಾಗುತ್ತದೆ. ಮಕ್ಕಳು ಇಡೀ ವರ್ಷ ಶಾಲಾ ಶಿಕ್ಷಣದಿಂದ ವಂಚಿತರಾಗುತ್ತಾರೆ ಎಂದು ಪೋಷಕರು ಹೇಳಿದ್ದು, ನಿಯಮದಲ್ಲಿ ಸಡಿಲಿಕೆಗೆ ಒತ್ತಾಯಿಸಿದ್ದಾರೆ.

ಗೊಂದಲಗಳ ಮಧ್ಯೆಯೂ ಇದೀಗ ಖಾಸಗಿ ಶಾಲೆಗಳು ಹೊಸ ನಿಯಮಗಳಿಗೆ ಬದ್ಧವಾಗಿದ್ದು, ವಯಸ್ಸು ಪೂರ್ಣಗೊಂಡಿರದ ಮಕ್ಕಳ ದಾಖಲಾತಿಗೆ ನಿರಾಕರಿಸುತ್ತಿವೆ. ಇದು ಅನೇಕ ಪೋಷಕರನ್ನು ನಿರಾಶೆಗೊಳಿಸಿದೆ. ಕೆಲವು ಪ್ರಕರಣಗಳಲ್ಲಿ ಸುಳ್ಳು ಮಾಹಿತಿ ನೀಡಿ ಇನ್ನೂ 4 ವರ್ಷ ತುಂಬದ ಮಕ್ಕಳನ್ನು ಶಾಲೆಗಳಿಗೆ ಸೇರಿಸಲಾಗುತ್ತಿದೆ ಎಂದು ವರದಿಯಾಗಿದೆ.

ಈ ದಾಖಲಾತಿಗಳಿಗೆ ಅನುಮತಿ ನೀಡುವ ಅಧಿಕೃತ ಆದೇಶವಿದೆ ಎಂದು ಪೋಷಕರನ್ನು ತಪ್ಪುದಾರಿಗೆ ಎಳೆಯಲಾಗುತ್ತಿದೆ. ಆದರೆ, ಶಿಕ್ಷಣ ಇಲಾಖೆಯು ಅಂತಹ ಯಾವುದೇ ಮೌಖಿಕ ಸೂಚನೆ ಅಥವಾ ಆದೇಶಗಳನ್ನು ನೀಡಿಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಿದೆ.
ಇಲಾಖೆಯ ವೆಬ್‌ ಪೋರ್ಟಲ್‌ನಲ್ಲಿ ಎಲ್‌ ಕೆಜಿ ಮತ್ತು ಯುಕೆಜಿ ಪ್ರವೇಶದ ಬಗ್ಗೆ ಮಾಹಿತಿ ನಮೂದಿಸುವಂತಿಲ್ಲ, ಆದರೆ ಒಂದನೇ ತರಗತಿಗೆ ದಾಖಲಾದ ಮಕ್ಕಳ ವಿವರಗಳನ್ನು ಕಡ್ಡಾಯವಾಗಿ ದಾಖಲಿಸಬೇಕು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಇದು ಗೊಂದಲಕ್ಕೆ ಕಾರಣವಾಗಿದೆ.

1ನೇ ತರಗತಿ ಪ್ರವೇಶಕ್ಕೆ 6 ವರ್ಷ ವಯೋಮಿತಿ ನಿಗದಿ:
ಶಿಕ್ಷಣ ಇಲಾಖೆ ಆದೇಶ ಈ ಮಧ್ಯೆ, ವಯೋಮಿತಿ ಸಡಿಲಿಕೆ ಸರ್ಕಾರದ ಪರಿಗಣನೆಯಲ್ಲಿಲ್ಲ ಎಂದು ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ತಪ್ಪಾದ ಮಾಹಿತಿಯಿಂದ ದಾರಿತಪ್ಪಿಸಬೇಡಿ ಮತ್ತು ಶಾಲಾ ಪ್ರವೇಶಕ್ಕಾಗಿ ಪ್ರಸ್ತುತ ವಯಸ್ಸಿನ ನಿಯಮಗಳಿಗೆ ಬದ್ಧವಾಗಿರುವಂತೆ ಪೋಷಕರಿಗೆ ತಿಳಿಸಿದ್ದಾರೆ.

RELATED ARTICLES

Latest News