ಬೆಂಗಳೂರು,ನ.21- ದೆಹಲಿ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಬೆಳಿಗ್ಗೆ ಸುಪ್ರೀಂಕೋರ್ಟ್‌ನ ಹಿರಿಯ ವಕೀಲ ಅಭಿಷೇಕ್ ಮನುಸಿಂಘ್ವಿ ಅವರ ಮನೆಗೆ ತೆರಳಿ ಮಹತ್ವದ ಮಾತುಕತೆ ನಡೆಸಿದ್ದಾರೆ.ಅಭಿಷೇಕ್ ಮನುಸಿಂಘ್ವಿ ಕಾಂಗ್ರೆಸ್‌ನ ರಾಜ್ಯಸಭಾ ಸದಸ್ಯರಾಗಿದ್ದು, ಸಿದ್ದರಾಮಯ್ಯ ಅವರ ಕುಟುಂಬದ ವಿರುದ್ಧ ಕೇಳಿಬಂದಿರುವ ಮುಡಾ ಹಗರಣದಲ್ಲಿ ವಾದ ಮಂಡಿಸಿದರು. ಕಾನೂನು ಸಲಹೆಗಾರರಾಗಿಯೂ ಕೆಲಸ ಮಾಡಿದ್ದಾರೆ.
ಇತ್ತಿಚೆಗೆ ಅಭಿಷೇಕ್ ಮನುಸಿಂಘ್ವಿ ಅವರ ಸಲಹೆ ಮೇರೆಗೆ ಸಿದ್ದರಾಮಯ್ಯ ಅವರ ಕುಟುಂಬ ನಿವೇಶನಗಳನ್ನು ಮುಡಾಗೆ ವಾಪಸ್ ನೀಡಿತ್ತು. ದೂರುದಾರರ ಮನವಿ ಆಧರಿಸಿ ರಾಜ್ಯಪಾಲರ ಅನುಮತಿ ಪಡೆದು ಪ್ರಕರಣ ದಾಖಲಾಗಿದ್ದು, ಲೋಕಾಯುಕ್ತ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಈ ನಡುವೆ ದೂರುದಾರರಾದ ಸ್ನೇಹಮಯಿ ಕೃಷ್ಣ ಜಾರಿ ನಿರ್ದೇಶನಾಲಯಕ್ಕೆ ನೀಡಿದ್ದ ದೂರು ಆಧರಿಸಿ ತನಿಖೆ ನಡೆಯುತ್ತಿದೆ. ಲೋಕಾಯುಕ್ತದಿಂದ ಜನತೆಗೆ ನ್ಯಾಯ ಸಿಗುವುದಿಲ್ಲ. ಮುಡಾ ಪ್ರಕರಣದಲ್ಲಿ ಸಿಬಿಐ ತನಿಖೆ ನಡೆಯಬೇಕು ಎಂದು ಸ್ನೇಹಮಯಿ ಕೃಷ್ಣ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಹಂತದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಭಿಷೇಕ್ ಮನುಸಿಂಘ್ವಿ ಅವರ ಮನೆಗೆ ಭೇಟಿ ನೀಡಿ ಮಹತ್ವದ ಮಾತುಕತೆ ನಡೆಸಿದ್ದಾರೆ.
ಮೂಲಗಳ ಪ್ರಕಾರ, ಅಭಿಷೇಕ್ ಮನುಸಿಂಘ್ವಿ ಅವರ ಆಹ್ವಾನದ ಮೇರೆಗೆ ಸಿದ್ದರಾಮಯ್ಯ ಇಂದು ಬೆಳಿಗ್ಗೆ ಅವರ ಮನೆಗೆ ಭೇಟಿ ನೀಡಿ ಉಪಹಾರ ಸೇವಿಸಿದರು ಎಂದು ಹೇಳಲಾಗಿದೆ.
ಈ ವೇಳೆ ಮುಡಾ ಪ್ರಕರಣ ಸೇರಿದಂತೆ ಹಲವು ವಿಚಾರಗಳ ಕುರಿತು ಮಹತ್ವದ ಚರ್ಚೆ ನಡೆಸಲಾಗಿದೆ.
ಒಂದು ವೇಳೆ ಹೈಕೋರ್ಟ್ ಸಿಬಿಐ ತನಿಖೆಗೆ ಹಸಿರು ನಿಶಾನೆ ತೋರಿಸಿದರೆ ಅದನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿ ತಡೆ ಪಡೆದುಕೊಳ್ಳುವ ಸಾಧ್ಯತೆಗಳ ಬಗ್ಗೆ ವಿಶ್ಲೇಷಣೆ ನಡೆದಿದೆ. ಜಾರಿ ನಿರ್ದೇಶನಾಲಯ ವಿಚಾರಣೆಗೆ ನೋಟಿಸ್ ನೀಡಿದರೆ ಅನುಸರಿಸಬೇಕಾದ ಕ್ರಮಗಳ ಬಗ್ಗೆಯೂ ಸಿದ್ದರಾಮಯ್ಯಅವರು ಅಭಿಷೇಕ್ ಮನುಸಿಂಘ್ವಿ ಅವರಿಂದ ಸಲಹೆ ಪಡೆದುಕೊಂಡರು ಎಂದು ತಿಳಿದುಬಂದಿದೆ.
ಕೆಎಂಎಫ್‌ನ ನಂದಿನಿ ಉತ್ಪನ್ನಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಿದ್ದರಾಮಯ್ಯ ಅಧಿಕೃತವಾಗಿ ದೆಹಲಿಗೆ ಭೇಟಿ ನೀಡಿದ್ದರು. ಇದೇ ವೇಳೆ ನಿರ್ಮಲಾ ಸೀತಾರಾಮನ್ ಸೇರಿದಂತೆ ಹಲವು ಕೇಂದ್ರ ಸಚಿವರನ್ನು ಭೇಟಿ ಮಾಡಿದ್ದರು.