ಬೆಂಗಳೂರು,ಮಾ.2- ನಗರದ ರಾಮೇಶ್ವರಂ ಕೆಫೆಯಲ್ಲಿನ ಸ್ಪೋಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಗಂಭೀರ ತನಿಖೆ ನಡೆಯುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಂತದಲ್ಲಿ ಯಾವ ಸಂಘಟನೆ, ಯಾರ ಕೈವಾಡ ಎಂಬುದನ್ನು ಹೇಳಲು ಸಾಧ್ಯವಿಲ್ಲ. ತನಿಖೆ ಗಂಭೀರವಾಗಿ ನಡೆಯುತ್ತಿದೆ. ವ್ಯಕ್ತಿಯನ್ನು ಪತ್ತೆ ಹಚ್ಚಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಸ್ಪೋಟ ಸಂಭವಿಸಿರುವುದಂತೂ ನಿಜ. ಮಾಸ್ಕ್ ಹಾಗೂ ಟೋಪಿ ಧರಿಸಿದ್ದ ಒಬ್ಬ ವ್ಯಕ್ತಿ ಬಸ್‍ನಲ್ಲಿ ಬಂದು ಹೋಟೆಲ್‍ನ ಕೌಂಟರ್‍ನಲ್ಲಿ ರವೆ ಇಡ್ಲಿಯನ್ನು ತೆಗೆದುಕೊಂಡು ಟೇಬಲ್‍ನಲ್ಲಿ ಕುಳಿತು ತಿಂದು ಕೈ ತೊಳೆಯುವ ಸಂದರ್ಭದಲ್ಲಿ ಬ್ಯಾಗ್ ಅನ್ನು ಬಿಟ್ಟು ಹೊರಹೋಗಿದ್ದಾನೆ. ಅದು ಸ್ಪೋಟಗೊಂಡು 9 ಜನರಿಗೆ ಗಾಯಗಳಾಗಿವೆ. ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದರು. ನಿನ್ನೆ ಉಪಮುಖ್ಯಮಂತ್ರಿ ಹಾಗೂ ಗೃಹಸಚಿವರು ಸ್ಥಳಕ್ಕೆ ಭೇಟಿ ನೀಡಿದ್ದರು, ಇಂದು ನಾನೂ ಕೂಡ ಸ್ಥಳಕ್ಕೆ ಹೋಗುತ್ತಿದ್ದೇನೆ ಎಂದು ಹೇಳಿದರು.
ಆರೋಪಿಯನ್ನು ಪತ್ತೆ ಹಚ್ಚುವುದು ಸುಲಭವಾಗಿದೆ. ಬಾಂಬ್ ಇಟ್ಟ ಬಳಿಕ ಆರೋಪಿ ಬಸ್‍ನಲ್ಲಿ ವಾಪಸ್ ಹೋಗಿದ್ದಾನೆ. ಪೊಲೀಸರು ಎಲ್ಲಾ ರೀತಿಯ ತನಿಖೆಗಳನ್ನೂ ನಡೆಸುತ್ತಿದ್ದಾರೆ. ಈ ಹಂತದಲ್ಲಿ ಇದು ಭಯೋತ್ಪಾದಕರ ಕೃತ್ಯವೇ ಅಥವಾ ಯಾವುದಾದರೂ ಸಂಘಟನೆ ಭಾಗಿಯಾಗಿದೆಯೇ? ವೈಯಕ್ತಿಕ ದುಷ್ಕøತ್ಯವೇ ಎಂಬುದು ಗೊತ್ತಾಗಿಲ್ಲ ಎಂದು ಹೇಳಿದರು. ಮಂಗಳೂರಿನ ಕುಕ್ಕರ್ ಬಾಂಬ್‍ಗೂ ನಿನ್ನೆಯ ಸ್ಪೋಟಕ್ಕೂ ಸಂಬಂಧವಿಲ್ಲ ಎಂದು ಪ್ರಶ್ನೆಯೊಂದಕ್ಕೆ ಸ್ಪಷ್ಟನೆ ನೀಡಿದರು.
ಘಟನೆಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯವರು ರಾಜೀನಾಮೆ ನೀಡಬೇಕು ಮತ್ತು ಅಲ್ಪಸಂಖ್ಯಾತರ ತುಷ್ಟೀಕರಣದಿಂದಾಗಿಯೇ ಬಾಂಬ್ ಸ್ಪೋಟವಾಗಿದೆ ಎಂದು ಬಿಜೆಪಿಯ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಈ ಹಿಂದೆ ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಪೋಟವಾಗಿತ್ತು. ಆಗಲೂ ಅವರು ಅಲ್ಪಸಂಖ್ಯಾತರ ತುಷ್ಟೀಕರಣ ಮಾಡುತ್ತಿದ್ದರೇ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇಂತಹ ವಿಷಯಗಳಲ್ಲಿ ಬಿಜೆಪಿ ರಾಜಕೀಯ ಮಾಡುತ್ತದೆ. ಬಾಂಬ್ ಸ್ಪೋಟವನ್ನು ನಾನು ಖಂಡಿಸುತ್ತೇನೆ. ಯಾರೂ ಇದನ್ನೇ ಮುಂದಿಟ್ಟುಕೊಂಡು ರಾಜಕೀಯ ಮಾಡಬಾರದು ಎಂದರು.
ವಿಧಾನಸೌಧದಲ್ಲಿ ಪಾಕಿಸ್ತಾನದ ಪರ ಘೋಷಣೆ ಕೂಗಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಫ್‍ಎಸ್‍ಎಲ್‍ನ ವರದಿ ಈವರೆಗೂ ಬಂದಿಲ್ಲ. ಈ ವಿಷಯದಲ್ಲಿ ಪ್ರಕರಣವನ್ನು ತಿರುಚಲು ಪ್ರಯತ್ನಿಸಲಾಗುತ್ತಿದೆ ಎಂಬ ಆರೋಪ ಸುಳ್ಳು. ತಪ್ಪಿತಸ್ಥರು ಯಾರೇ ಇದ್ದರೂ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಸ್ಪಷ್ಟಪಡಿಸಿದರು.