Sunday, April 28, 2024
Homeರಾಜ್ಯತನಿಖೆ ನಡೆಸಲು ನಮ್ಮ ಪೊಲೀಸರು ಸಮರ್ಥರಿದ್ದಾರೆ : ಪರಮೇಶ್ವರ್

ತನಿಖೆ ನಡೆಸಲು ನಮ್ಮ ಪೊಲೀಸರು ಸಮರ್ಥರಿದ್ದಾರೆ : ಪರಮೇಶ್ವರ್

ಬೆಂಗಳೂರು,ಮಾ.2- ನಗರದ ರಾಮೇಶ್ವರಂ ಕೆಫೆಯಲ್ಲಿನ ಸ್ಪೋಟಕ ಪ್ರಕರಣವನ್ನು ತನಿಖೆ ನಡೆಸಲು ನಮ್ಮ ಪೊಲೀಸ್ ಅಧಿಕಾರಿಗಳೇ ಸಮರ್ಥರಿದ್ದಾರೆ ಎಂದು ಹೇಳುವ ಮೂಲಕ ಗೃಹಸಚಿವ ಡಾ.ಜಿ.ಪರಮೇಶ್ವರ್ ರಾಷ್ಟ್ರೀಯ ಸಂಸ್ಥೆಗಳ ತನಿಖೆಗೆ ವಹಿಸುವ ಸಾಧ್ಯತೆಯನ್ನು ತಳ್ಳಿ ಹಾಕಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ರಾಜ್ಯದ ಎಫ್‍ಎಸ್‍ಎಲ್ ಪ್ರಯೋಗಾಲಯ ಸಮರ್ಥ ಹಾಗೂ ಅತ್ಯಾಧುನಿಕವಾಗಿದೆ. ನಿನ್ನೆ ಘಟನೆ ನಡೆದ ತಕ್ಷಣ ತಜ್ಞರ ದೊಡ್ಡ ತಂಡ ಸ್ಥಳಕ್ಕೆ ಭೇಟಿ ನೀಡಿ ಮಾದರಿಗಳನ್ನು ಸಂಗ್ರಹಿಸಿದೆ. ಬಾಂಬ್‍ನಲ್ಲಿ ಟೈಮರ್ ಅಳವಡಿಸಿರುವುದು, ಯಾವ ರೀತಿಯ ಸ್ಪೋಟಕ ಬಳಸಲಾಗಿದೆ, ಬಾಂಬ್ ಸಾಮಥ್ರ್ಯ ಎಷ್ಟು ಎಂಬೆಲ್ಲಾ ವಿವರಗಳನ್ನೂ ಕಲೆ ಹಾಕಿಕೊಂಡಿದ್ದಾರೆ. ಇದೂ ಕೂಡ ತನಿಖೆಗೆ ಸಹಾಯವಾಗಲಿದೆ ಎಂದರು.

ಆರೋಪಿ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಬಾಂಬ್ ಸ್ಪೋಟ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆಗೆ ಅನೇಕ ತಂಡಗಳನ್ನು ರಚನೆ ಮಾಡಲಾಗಿದೆ. ತನಿಖೆ ಆಳವಾಗಿ ನಡೆಯುತ್ತಿದೆ. ಕೆಲ ಕುರುಹುಗಳು ಸಿಕ್ಕಿವೆ. ಆ ಭಾಗದ ಸಿಸಿಟಿವಿ ದೃಶ್ಯಾವಳಿಗಳನ್ನೂ ಸಂಗ್ರಹಿಸಿ ಪರಿಶೀಲಿಸುತ್ತಿದ್ದಾರೆ ಎಂದು ಹೇಳಿದರು.

ರಾಮೇಶ್ವರಂ ಕೆಫೆ ಮಾರ್ಗದಲ್ಲಿ ನಿನ್ನೆ 26 ಬಸ್‍ಗಳು ಸಂಚರಿಸಿವೆ. ಅವುಗಳಲ್ಲೂ ಸಿಸಿಟಿವಿ ಕ್ಯಾಮರಾ ಇದೆ. ಅದರಲ್ಲಿ ಪ್ರಯಾಣಿಕರ ದೃಶ್ಯಗಳು ಸಂಗ್ರಹವಾಗಿರುತ್ತವೆ. ಬಿಎಂಟಿಸಿ ಸಹಕಾರದೊಂದಿಗೆ ಅದನ್ನೂ ಪರಿಶೀಲಿಸಲಾಗುತ್ತಿದೆ. ಆರೋಪಿ ಎಲ್ಲಿಂದ ಎಲ್ಲಿಗೆ ಪ್ರಯಾಣಿಸಿದ್ದಾನೆ. ಎಲ್ಲಿ ಇಳಿದಿದ್ದಾನೆ. ಬಸ್‍ನಲ್ಲಿ ಆತನ ನಡವಳಿಕೆ ಹೇಗಿತ್ತು. ಈ ಹಿಂದೆ ಎಲ್ಲಿಂದ ಬಂದಿದ್ದನು ಎಂಬೆಲ್ಲಾ ಮಾಹಿತಿಗಳನ್ನು ಪತ್ತೆ ಹಚ್ಚಲು ಪೊಲೀಸರು ಕ್ರಮ ಕೈಗೊಂಡಿದ್ದಾರೆ ಎಂದರು.

ಆರೋಪಿ ಎಷ್ಟೇ ಪ್ರಯತ್ನ ಪಟ್ಟರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಅವರ ಪ್ಲಾನ್ ಆಫ್ ಆಕ್ಷನ್ ಕೂಡ ನಾವು ಕಲೆ ಹಾಕಿದ್ದೇವೆ. ಯಾವ ಸಂಘಟನೆ ಕೈವಾಡವಿದೆ ಎಂಬುದು ಗೊತ್ತಿಲ್ಲ. ನಿನ್ನೆ ನಾವು ಸ್ಥಳಕ್ಕೆ ಹೋಗಿದ್ದಾಗ ರಾಮೇಶ್ವರಂ ಕೆಫೆಯವರು ನಾಲ್ಕೈದು ಹೋಟೆಲ್‍ಗಳನ್ನು ಮಾಡಿದ್ದು, ಯಶಸ್ವಿ ಉದ್ಯಮ ನಡೆಸುತ್ತಿದ್ದರು. ಆ ಹೊಟ್ಟೆ ಉರಿಗೂ ಈ ರೀತಿ ಕೃತ್ಯಗಳು ನಡೆದಿರಬಹುದು ಎಂಬ ಶಂಕೆ ಕೇಳಿಬಂದಿದ್ದವು, ಎಲ್ಲಾ ಆಯಾಮಗಳಲ್ಲೂ ತನಿಖೆ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.

ವಿರೋಧ ಪಕ್ಷಗಳಿಗೆ ಮುಖ್ಯಮಂತ್ರಿ ಹಾಗೂ ಗೃಹಸಚಿವರ ರಾಜಿನಾಮೆ ಕೇಳುವುದೇ ಕೆಲಸವಾಗಿದೆ. 2022 ರಲ್ಲಿ ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಪೋಟವಾಗಿದೆ. ಆಗ ಬಿಜೆಪಿಯವರು ಆಡಳಿತದಲ್ಲಿದ್ದು ರಾಜೀನಾಮೆ ಕೊಟ್ಟಿದ್ದರೇ ಎಂದು ತಿರುಗೇಟು ನೀಡಿದರು. ಆಡಳಿತ ಪಕ್ಷವಾಗಿ ನಮಗೆ ಜವಾಬ್ದಾರಿ ಇದೆ. ಯಾರನ್ನೂ ಬಿಡುವುದಿಲ್ಲ. ಸರ್ಕಾರ ಕಠಿಣ ಕ್ರಮ ಕೈಗೊಳ್ಳುತ್ತದೆ. ರಾಜ್ಯ ಮತ್ತು ಬೆಂಗಳೂರಿನ ಸುರಕ್ಷತೆ ದೃಷ್ಟಿಯಿಂದ ಈಗಾಗಲೇ ಹಲವು ಯೋಜನೆಗಳನ್ನು ಕೈಗೊಂಡಿದ್ದೇವೆ.

ಪೊಲೀಸ್ ಗಸ್ತು ಹೆಚ್ಚಳ, ಕೃತಕ ಬುದ್ಧಿಮತ್ತೆಯ ತಂತ್ರಜ್ಞಾನ ಬಳಕೆ, 7,500 ಸಿಸಿಟಿವಿಗಳ ಅಳವಡಿಕೆ ಸೇರಿದಂತೆ ಹಲವು ಕ್ರಮಗಳಿಂದ ಬೆಂಗಳೂರನ್ನು ಸಾಮಾನ್ಯ ನಾಗರಿಕರ ಹಾಗೂ ಮಹಿಳೆಯರ ಸುರಕ್ಷತಾ ನಗರವನ್ನಾಗಿಸಲು ಪ್ರಯತ್ನಿಸುತ್ತಿದ್ದೇವೆ. ಸಿಸಿಟಿವಿಗಳ ದೃಶ್ಯಾವಳಿಗಳು ತನಿಖೆಗೆ ಮಹತ್ವದ ಸಹಕಾರಿಯಾಗಿವೆ ಎಂದು ಹೇಳಿದರು.

ವಿರೋಧಪಕ್ಷಗಳೂ ಸೇರಿದಂತೆ ಎಲ್ಲರೂ ತನಿಖೆಗೆ ಸಹಕಾರ ನೀಡಬೇಕು. ಈ ವಿಷಯದಲ್ಲಿ ರಾಜಕೀಯ ಮಾಡಬಾರದು. ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂಬ ಘೋಷಣೆಗೆ ಸಂಬಂಧಪಟ್ಟಂತೆ ಈವರೆಗೂ ಎಫ್‍ಎಸ್‍ಎಲ್‍ನ ವರದಿ ಬಂದಿಲ್ಲ ಎಂದು ಸ್ಪಷ್ಟಪಡಿಸಿದರು.

RELATED ARTICLES

Latest News