ಬೆಂಗಳೂರು,ಸೆ.25- ಹೈಕೋರ್ಟ್ ತೀರ್ಪಿನ ಬಳಿಕ ಮುಡಾ ಪ್ರಕರಣದಲ್ಲಿ ಅನುಸರಿಸಬೇಕಾದ ಕಾನೂನು ಹಾಗೂ ರಾಜಕೀಯ ಹೋರಾಟಗಳ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಸರಣಿ ಸಭೆಗಳನ್ನು ನಡೆಸಿದ್ದಾರೆ.
ಇಂದು ಬೆಳಿಗ್ಗೆ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಅವರು ಮುಖ್ಯಮಂತ್ರಿ ಗೃಹಕಚೇರಿ ಕಾವೇರಿಗೆ ಆಗಮಿಸಿ ಸಮಾಲೋಚನೆ ನಡೆಸಿದರು.ಸಚಿವರಾದ ಲಕ್ಷ್ಮೀಹೆಬ್ಬಾಳ್ಕರ್ ಹಾಗೂ ಇತರರು ಇಂದು ಬೆಳಿಗ್ಗೆ ಮುಖ್ಯಮಂತ್ರಿ ಅವರ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದರು. ಹಲವು ಶಾಸಕರು, ಸಚಿವರು ಆಗಮಿಸಿ ಮುಖ್ಯಮಂತ್ರಿಯವರಿಗೆ ನೈತಿಕ ಬೆಂಬಲ ವ್ಯಕ್ತಪಡಿಸಿದರು.
ಬೆಳಿಗ್ಗೆ 11 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ನೇಮಕಾತಿಗಳ ಬಗ್ಗೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಬೇಕಿತ್ತು.
ಆದರೆ ಅದನ್ನು ಬದಿಗಿಟ್ಟು ಮುಖ್ಯಮಂತ್ರಿಯವರು ಕಾನೂನು ಹಾಗೂ ರಾಜಕೀಯ ಸಂಘರ್ಷದ ಬಗ್ಗೆ ಹಲವರ ಜೊತೆ ಭೌತಿಕವಾಗಿ ಹಾಗೂ ದೂರವಾಣಿಯ ಮೂಲಕ ಸಮಾಲೋಚನೆ ನಡೆಸಿದರು.ಮಧ್ಯಾಹ್ನ ಕೇರಳಕ್ಕೆ ಭೇಟಿ ನೀಡುವ ಮುನ್ನ ಸಿದ್ದರಾಮಯ್ಯ ಸಾಕಷ್ಟು ತಯಾರಿಗಳನ್ನು ನಡೆಸಿದರು.