ಬೆಂಗಳೂರು,ಅ.1- ಮುಡಾ ಪ್ರಕರಣದಿಂದಾಗಿ ಸಿದ್ದರಾಮಯ್ಯ ಪತ್ನಿ ಪಾರ್ವತಿಯವರು ತೀವ್ರವಾಗಿ ನೊಂದಿದ್ದು, ದುರುದ್ದೇಶಪೂರಕವಾಗಿ ತೇಜೋವಧೆ ಮಾಡುವ ಪ್ರಯತ್ನಗಳಾಗುತ್ತಿವೆ ಎಂದು ಹೇಳಿಕೊಂಡಿದ್ದಾರೆ ಎಂದು ಕುಟುಂಬದ ಆಪ್ತಮೂಲಗಳು ತಿಳಿಸಿವೆ.
ರಾಜಕೀಯವಾಗಿ 40 ವರ್ಷಗಳಲ್ಲಿ ಎಂದಿಗೂ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಯಾರ ಮೇಲೂ ಪ್ರಭಾವ ಬೀರಲಿಲ್ಲ. ಎಷ್ಟೇ ತೆರೆಮರೆಯಲ್ಲಿದ್ದರೂ ಅನಗತ್ಯವಾಗಿ ತಮನ್ನು ಎಳೆದು ತರಲಾಗುತ್ತಿದೆ ಎಂದು ನೊಂದಿದ್ದಾರೆ ಎಂದು ಸಿದ್ದರಾಮಯ್ಯನವರ ಸಹೋದರ ಸಿದ್ದೇಗೌಡರ ಪುತ್ರ ಸಿದ್ದರಾಮು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ತಮ ದೊಡ್ಡಮ ಪಾರ್ವತಿ ಅವರೊಂದಿಗೆ ಎರಡು-ಮೂರು ಬಾರಿ ಮಾತನಾಡಿದ್ದು, ಇತ್ತೀಚಿನ ಬೆಳವಣಿಗೆಗಳಿಂದ ಅವರು ತೀವ್ರವಾಗಿ ನೊಂದಿದ್ದಾರೆ. ತಮಗೆ ಅರಿಶಿನ ಕುಂಕುಮಕ್ಕೆ ನೀಡಲಾಗಿದ್ದ ಜಮೀನನ್ನು ನೆಪ ಮಾಡಿಕೊಂಡು ರಾಜಕೀಯವಾಗಿ ಸಿದ್ದರಾಮಯ್ಯನವರ ವರ್ಚಸ್ಸನ್ನು ಹಾಳು ಮಾಡಲಾಗುತ್ತಿದೆ ಎಂದು ಹೇಳಿಕೊಂಡಿದ್ದಾರೆ ಎಂದು ತಿಳಿಸಿದರು.
ತಮ ದೊಡ್ಡಮ ಅವರು ಯಾವುದೇ ತಪ್ಪು ಮಾಡಿಲ್ಲ. ನಿವೇಶನವನ್ನು ವಾಪಸ್ ನೀಡುವ ಅಗತ್ಯವಿರಲಿಲ್ಲ. ಆದರೆ ಸಿದ್ದರಾಮಯ್ಯನವರಿಗೆ ರಾಜಕೀಯವಾಗಿ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಈಗಾಗಲೇ ನಿವೇಶನವನ್ನು ವಾಪಸ್ ನೀಡಿದ್ದಾರೆ. ಇದಾದ ಬಳಿಕ ತನಿಖೆಯ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಅವರು ಹೇಳಿದರು.
ಈ ಹಿಂದೆ ಬಿಜೆಪಿಯವರು ಅಧಿಕಾರದಲ್ಲಿದ್ದಾಗಲೇ ನಿವೇಶನ ಕೊಟ್ಟಿದ್ದರು. ಅದೂ ಕೂಡ ಇವರ ಜಮೀನು ಇದ್ದಿದ್ದಕ್ಕಾಗಿಯೇ ನಿವೇಶನ ನೀಡಲಾಗಿದೆ. ಈಗ ಅದರಲ್ಲಿ ತಪ್ಪು ಹುಡುಕುತ್ತಿಲ್ಲ. ಜೆಡಿಎಸ್-ಬಿಜೆಪಿ ಎರಡೂ ಪಕ್ಷಗಳು ಸೇರಿ ಷಡ್ಯಂತ್ರ ಮಾಡುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.