Friday, October 11, 2024
Homeರಾಜಕೀಯ | Politicsಇಷ್ಟೆಲ್ಲಾ ಕಸರತ್ತು ನಿಮಗೆ ಬೇಕಿತ್ತಾ..? : ಸಿಎಂ ವಿರುದ್ಧ ಎಚ್ಡಿಕೆ ವಾಗ್ದಾಳಿ

ಇಷ್ಟೆಲ್ಲಾ ಕಸರತ್ತು ನಿಮಗೆ ಬೇಕಿತ್ತಾ..? : ಸಿಎಂ ವಿರುದ್ಧ ಎಚ್ಡಿಕೆ ವಾಗ್ದಾಳಿ

Union Minister HD Kumaraswamy

ನವದೆಹಲಿ,ಅ.1- ಮುಡಾದಿಂದ ಪಡೆಯಲಾಗಿದ್ದ ನಿವೇಶನಗಳನ್ನು ಏಕಾಏಕಿ ಹಿಂದಿರುಗಿಸಲು ಹೇಳಿಕೊಟ್ಟವರು ಯಾರು?, ಇಷ್ಟೆಲ್ಲಾ ಸರ್ಕಸ್ ಏಕೆ ಬೇಕಿತ್ತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಕೇಂದ್ರ ಭಾರಿ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಎಚ್.ಡಿ. ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವರ ಪತ್ನಿ ರಾತ್ರಿ ಏಕಾಏಕಿ ಮುಡಾಗೆ ಪತ್ರ ಬರೆದು ನಿವೇಶನ ಬೇಡ ಎಂದು ಹೇಳಿದ್ದಾರೆ. ಮನೆಯ ಚಿನ್ನ, ಒಡವೆ ಯಾವುದರ ಮೇಲೂ ಮಮತೆ ಇಲ್ಲ ಎಂದು ಹೇಳಿದ್ದಾರೆ. ಇದು ಸಿಎಂ ಗಮನಕ್ಕೆ ಬಾರದೇ ನಿವೇಶನವನ್ನು ವಾಪಸ್ ನೀಡುವುದಾಗಿ ಹೇಳಿದ್ದಾರೆಯೇ? ಎಂದು ಪ್ರಶ್ನಿಸಿದರು.

ಕಪ್ಪುಚುಕ್ಕೆ ಇಲ್ಲದಂತೆ ರಾಜಕೀಯ ಮಾಡಿರುವುದಾಗಿ ಹೇಳಿಕೊಂಡಿದ್ದರು. ನನ್ನನ್ನು ಸುಳ್ಳುಗಾರ ಅಂತಾರೆ. ಇವರ ಮಾತು ಕೇಳಿಸಿಕೊಂಡರೆ ಸುಳ್ಳು ಎಲ್ಲಿ ಹುಟ್ಟಿದೆ ಎಂಬುದು ಗೊತ್ತಾಗುತ್ತದೆ. ನನ್ನನ್ನು ಹಿಟ್ ಅಂಡ್ ರನ್ ಎನ್ನುತ್ತಾರೆ. ಇವರೇನು ಯೂಟರ್ನೇ? , ಕಳ್ಳತನ ಮಾಡಿದ ಮೇಲೆ ತಪ್ಪಾಯಿತು ಎಂದರೆ ಬಿಡಲು ಸಾಧ್ಯವೇ? ಎಂದು ತರಾಟೆಗೆ ತೆಗೆದುಕೊಂಡರು.

ಮುಡಾ ನಿವೇಶನಗಳನ್ನು ಪಡೆದಿರುವುದಷ್ಟೇ ಅಲ್ಲ, ಈ ಹಿಂದೆ ಏನೆಲ್ಲಾ ಮಾಡಿದ್ದಾರೆ. ವೈಟ್ನರ್ ಹಾಕಿದ್ದು ಮುಗಿದ್ಹೋಯ್ತು. ಈಗ ಇಲ್ಲಿಗೆ ಬಂದಿದ್ದಾರೆ ಎಂದ ಅವರು, ಸಿದ್ದರಾಮಯ್ಯ ಅವರು ಚುನಾವಣಾ ಸಾಲ ತೀರಿಸಲು ಒಂದು ಕೋಟಿ ರೂ.ಗೆ ಮಾರಾಟ ಮಾಡಿದ್ದ ನಿವೇಶನ ಎಲ್ಲಿಂದ ಬಂದಿತು.

ಬಡವರ ಮಕ್ಕಳಿಗೆ ವಸತಿ ಶಾಲೆ ನಿರ್ಮಾಣ ಮಾಡಲು ಭೂಮಿ ಡಿ ನೋಟಿಫಿಕೇಷನ್ ಮಾಡಿಸಿಕೊಂಡು ಅದನ್ನು ಸಿದ್ದರಾಮಯ್ಯ ಪಡೆದಿದ್ದಾರೆ. ಇದು 14 ನಿವೇಶನಗಳಿಗಿಂತ ದೊಡ್ಡ ಪ್ರಕರಣ ಎಂದು ಆರೋಪಿಸಿದರು.ಊರಿಗೇ ಬುದ್ಧಿ ಹೇಳುವವರು ಇಲ್ಲಿ ಏನು ಮಾಡಿದ್ದೀರಿ, ಸತ್ಯ ಹೇಳಿ, ಈಗ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಹೋಗಿ ಕುಂಕುಮ ಇಟ್ಟುಕೊಂಡು ರಕ್ಷಣೆ ಪಡೆಯುತ್ತಿದ್ದಾರೆ. ಇದರ ಜೊತೆಗೆ ಇನ್ನೂ ಎರಡು ಪ್ರಕರಣಗಳಿವೆ ಎಂದು ದೂರಿದರು.

ಸಚಿವ ಕೃಷ್ಣಭೈರೇಗೌಡರು ಮೇಧಾವಿಯಲ್ಲವೇ?, ಇದನ್ನೂ ಪರಿಶೀಲನೆ ಮಾಡಲಿ. ನಾನು ಇಂತಹ ಕೆಲಸ ಮಾಡಿಲ್ಲ. ತಾನೊಂದು ಬಗೆದರೆ, ದೈವ ಮತ್ತೊಂದು ಬಗೆಯುವುದು ಎನ್ನುವಂತಾಗಿದೆ. ಅಧಿಕಾರ ದುರ್ಬಳಕೆ ಮಾಡಿಕೊಂಡು ನಮನ್ನು ಮುಗಿಸುವ ಹುನ್ನಾರ ನಡೆಸಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಏನೋ ಹೇಳಿದ್ದಾರೆ ಎಂದ ಅವರು ಭ್ರಷ್ಟರ ದಾಖಲೆ ಬಿಡುಗಡೆ ಮಾಡುವ ಕಾಲ ಬರುತ್ತದೆ ಎಂದರು.

ತನಿಖೆಗೆ ಜಾಮೀನು ಪಡೆದಿಲ್ಲ :
ನಾನು ಜಾಮೀನು ಪಡೆದಿರುವುದು ತನಿಖೆ ಮಾಡದಂತೆ ಅಲ್ಲ. ಈ ಸರ್ಕಾರದ ಕೆಟ್ಟ ಅಧಿಕಾರಿಗಳಿಂದ ಏನು ಬೇಕಾದರೂ ಮಾಡುತ್ತಾರೆ. ಜಾಮೀನು ತೆಗೆದುಕೊಳ್ಳಿ ಎಂದು ನಮ ವಕೀಲರು ಹೇಳಿದ್ದರಿಂದ ಜಾಮೀನು ತೆಗೆದುಕೊಂಡಿದ್ದೇನೆಯೇ ಹೊರತು ತನಿಖೆ ಮಾಡದಂತೆ ಜಾಮೀನು ತೆಗೆದುಕೊಂಡಿಲ್ಲ ಎಂದು ಸ್ಪಷ್ಟಪಡಿಸಿದರು.

ಐಪಿಎಸ್ ಅಧಿಕಾರಿ ವಿರುದ್ಧ ನಾನು ಮಾತನಾಡಿದಾಗ ಅವರು ಎಲ್ಲಿ, ಯಾರ ಛೇಂಬರ್ನಲ್ಲಿ ಕುಳಿತು ಮಾತನಾಡಿದ್ದಾರೆ ಎಂಬುದು ಗೊತ್ತಿದೆ. ಒಂದು ದಿನವಾದರೂ ಕುಮಾರಸ್ವಾಮಿಯವರನ್ನು ಜೈಲಿಗೆ ಹಾಕಬೇಕೆಂಬ ಚರ್ಚೆ ಮಾಡಿದ್ದಾರೆ ಎಂದು ಹೇಳಿದರು.

80 ಕೋಟಿ ರೂ. ಗುಳುಂ ಮಾಡಿರುವ ಆರೋಪ ಪ್ರಕರಣದಲ್ಲಿ ಏನಾಯಿತು?, ಯಾರನ್ನು ಎಸ್ಐಟಿ ಬಂಧಿಸಿತ್ತು? ಎಂಬುದು ಗೊತ್ತಿಲ್ಲವೇ?, ನಾನು ಯಾವ ಅಧಿಕಾರಿಯನ್ನೂ ದುರ್ಬಳಕೆ ಮಾಡಿಕೊಂಡಿಲ್ಲ. ನಾನು ಅಧಿಕಾರಿಗೆ ಪ್ರಶ್ನೆ ಮಾಡಿದ್ದೂ ಕೂಡ ನನ್ನ ಪ್ರಕರಣಕ್ಕೆ ಸಂಬಂಧಿಸಿದ್ದಲ್ಲ. ರಾಜ್ಯಪಾಲರ ಕಚೇರಿ ತನಿಖೆ ಮಾಡಲು ಅವಕಾಶ ಕೇಳಿ ಪತ್ರ ಬರೆದಿದ್ದು, ಅದನ್ನು ಸೋರಿಕೆ ಮಾಡಿರುವ ಹಿನ್ನೆಲೆಯಲ್ಲಿ ಪ್ರಶ್ನಿಸಿದ್ದೇನೆ. ಅಧಿಕಾರಿಯ ಉದ್ಧಟತನದ ಬಗ್ಗೆ ಪ್ರಶ್ನೆ ಮಾಡಿದ್ದೇನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬೆಂಗಳೂರಿನ ಭೂ ಮಾಫಿಯಾ ಕಾನೂನು ಬಾಹಿರ ಚಟುವಟಿಕೆ ಮಾಡುವವರಿಗೆ ಸಾಥ್ ನೀಡಲು ಐಪಿಎಸ್ ಸ್ಥಾನವನ್ನು ಆ ಅಧಿಕಾರಿಗೆ ಕೊಟ್ಟಿದ್ದೀರ. ಆ ಅಧಿಕಾರಿ ಕ್ರಿಮಿನಲ್ ಪ್ರಕರಣದಲ್ಲಿ 2ನೇ ಆರೋಪಿಯಾಗಿದ್ದು, ಅವರು ಜಾಮೀನು ಪಡೆದುಕೊಂಡಿದ್ದಾರೆ ಎಂದರು.

ಮುಖ್ಯಮಂತ್ರಿ ಬಳಿ ಬಂದು ಕ್ರಿಮಿನಲ್ ಮುಖ್ಯಮಂತ್ರಿ ಎಂದು ಅಧಿಕಾರಿಗಳು ಹೇಳಿದರೆ ಏನು ಮಾಡುತ್ತೀರ?, ಶನಿವಾರ ಕಚೇರಿ ರಜೆ ಇದ್ದರೂ ಲೆಟರ್ಹೆಡ್ ಇಲ್ಲದೇ, ಸೀಲ್ ಇಲ್ಲದೇ, ಸಂಖ್ಯೆ ಇಲ್ಲದ ಪತ್ರ ಹೊರಗೆ ಬಂದಿದೆ. ಆ ಅಧಿಕಾರಿ ಹೈಕೋರ್ಟ್ನಲ್ಲಿ ತಡೆಯಾಜ್ಞೆ ತೆಗೆದುಕೊಂಡಿದ್ದಾರೆ. ನಾನು ಕೇವಲ ಜಾಮೀನು ಪಡೆದಿದ್ದೇನೆಯೇ ಹೊರತು ಅವರಂತೆ ತನಿಖೆಗೆ ತಡೆಯಾಜ್ಞೆ ಕೇಳಿಲ್ಲ ಎಂದು ವಾಗ್ದಾಳಿ ನಡೆಸಿದರು.

ಗೃಹಸಚಿವ ಡಾ.ಜಿ.ಪರಮೇಶ್ವರ್ ಅವರು ಶಬ್ದ ಪಂಡಿತರಾಗಿದ್ದು, ನನ್ನ ಹೆಸರನ್ನು ಪತ್ರದಲ್ಲಿ ಉಲ್ಲೇಖಿಸಿಲ್ಲ ಎಂದು ಹೇಳಿದ್ದಾರೆ. ಆದರೆ ಆ ಪತ್ರ ಹೇಗೆ ಹಂಚಲಾಯಿತು?, ನನ್ನ ವಿರುದ್ಧ ಮುಖ್ಯಮಂತ್ರಿ ಕಚೇರಿಯಿಂದ ನಿನ್ನೆ ರಾತ್ರಿ ಮತ್ತೊಂದು ಪತ್ರ ಹೋಗಿದೆ. ಪತ್ರದಲ್ಲಿ ಉಲ್ಲೇಖಿಸಿರುವ ಕಿಶೋರ್ಕುಮಾರ್ ಅವರನ್ನು ಎಲ್ಲಿಗೆ ಕರೆಸಿಕೊಂಡರು. ಹೆದರಿಸಿ ಹಣ ಪಡೆಯುವ ಚರ್ಚೆ ನಡೆದಿದೆಯಲ್ಲವೇ? ಎಂದು ಆರೋಪಿಸಿದರು.

RELATED ARTICLES

Latest News