Sunday, June 8, 2025
Homeಮನರಂಜನೆಕಾಲೇಜು ಕಲಾವಿದನ ಕಲರ್ ಫುಲ್ ಲೋಕ

ಕಾಲೇಜು ಕಲಾವಿದನ ಕಲರ್ ಫುಲ್ ಲೋಕ

ಚಿತ್ರ: ಕಾಲೇಜ್ ಕಲಾವಿದ
ನಿರ್ಮಾಣ : ಗಜಾನನ ಫಿಲಂಸ್
ನಿರ್ದೇಶನ : ಸಂಜಯ್ ಮಳವಳ್ಳಿ
ತಾರಾಬಳಗ: ಆರವ್ ಸೂರ್ಯ, ಚೈತ್ರಾ, ಹುಲಿ ಕಾರ್ತೀಕ್, ಹರಿಣಿ ಮುಂತಾದವರು

ಕಾಲೇಜ್ ಕಲಾವಿದ ಹೆಸರೇ ಹೇಳುವಂತೆ ಇದೊಂದು ಕಾಲೇಜಿನ ಕಥೆ. ಹಾಗಂತ ಬರೀ ಕಾಲೇಜಿನಲ್ಲಿಯೇ ಸಾಗುವುದಿಲ್ಲ. ಒಂದು ಬ್ಯೂಟಿಫುಲ್ ಕೌಟುಂಬಿಕ ಕಥೆಯೂ ಇದರಲ್ಲಿ ಅಡಗಿದೆ. ಅದರಲ್ಲೂ ಒಂದೊಳ್ಳೆ ಕಾಲೇಜು ಸ್ಟೋರಿ ಇದೆ. ಸ್ಟುಡೆಂಟ್ಸ್ ಮಧ್ಯೆ ನಡೆಯುವ ಸಿನಿಮಾ ಎಂದಾಕ್ಷಣಾ ನಮ್ಮ ನಿರೀಕ್ಷೆಗಳು ಸಹಜವಾಗಿಯೇ ಹೆಚ್ಚಾಗುತ್ತವೆ. ಅಲ್ಲೊಬ್ಬ ಹೀರೋ ಎಂಟ್ರಿ ಇರುತ್ತೆ, ಕ್ಲಾಸ್ ರೂಮಿನೊಳಗೆ ತರಲೆ, ತುಂಟಾಟ ಇರುತ್ತೆ, ಹೀರೋಯಿನ್ ಎಂಟ್ರಿ ಆಗುತ್ತೆ, ಲವ್ ಆಗುತ್ತೆ, ಡ್ಯುಯೆಟ್ ಸಾಂಗ್ಸ್ ಬರುತ್ತೆ, ವಿಲನ್ ಗಳು ಇರ್ತಾರೆ. ಹೀಗೆ ನಾನಾ ರೀತಿಯ ನಿರೀಕ್ಷೆಗಳು ಹುಟ್ಟಿಕೊಳ್ಳುತ್ತವೆ. ಈ ಎಲ್ಲಾ ಅಂಶಗಳನ್ನು ಕಾಲೇಜ್ ಕಲಾವಿದ ಅಚ್ಚುಕಟ್ಟಾಗಿ ಫುಲ್ ಫಿಲ್ ಮಾಡಿದ್ದಾನೆ.

ಈ ವಾರ ತೆರೆಗೆ ಬಂದಿರುವ ಕಾಲೇಜು ಕಲಾವಿದ ಪಕ್ಕಾ ಎಂಟರ್ಟೈನ್ಮೆಂಟ್ ನೀಡುವಂತ ಸಿನಿಮಾವಾಗಿದೆ. ಕಾಲೇಜಿನ ಸುಂದರ ಕ್ಷಣಗಳನ್ನ ತೋರಿಸ್ತಾರೆ, ಸ್ಟುಡೆಂಟ್ಸ್ ಗಳ ಗ್ಯಾಂಗ್ ಇದೆ, ತಾಯಿ ಸೆಂಟಿಮೆಂಟ್ ಇದೆ, ತಂದೆಯ ಕಾಳಜಿ ಇದೆ ಜೊತೆಗೆ ಕಾಲೇಜಿನೊಳಗಡೆ ಕಾಣದಂತೆ ಬರುವ ಡ್ರಗ್ಸ್ ಇದೆ. ಕಥೆಯನ್ನ ಸಂಜಯ್ ಮಳವಳ್ಳಿ ಅದ್ಭುತವಾಗಿಯೇ ಹೆಣೆದಿದ್ದಾರೆ. ಆದರೆ ಕೆಲವೊಂದು ಕಡೆ ಅದನ್ನ ಹೇಳುವುದರಲ್ಲಿ ಎಡವಿದ್ದಾರೆ ಅನ್ನಿಸುತ್ತದೆ. ನಾಯಕ ಜೈಲಿಗೆ ಹೋದಾಗ ಅಲ್ಲಿನ ನರಳಾಟದ ದೃಶ್ಯ ಬೇಕಿತ್ತು. ಆದರೆ ನೇರವಾಗಿ ನಾಯಕಿ ಊರಿಗೆ ಬಂದವ ಎರಡು ವರ್ಷದ ಜೈಲು ಸಹವಾಸವನ್ನ ಸೆಕೆಂಡ್ಸ್ ಲೆಕ್ಕದಲ್ಲಿ ತೋರಿಸಿದಂತೆ ಇತ್ತು.

ನಾಯಕ ಆರವ್ ಸೂರ್ಯ ನಟನೆಗೆ ಹೊಸಬರೇನು ಅಲ್ಲ. ಕಿರುತೆರೆಯಿಂದ ಬಂದವರು. ತೆರೆ ಮೇಲೆ ಪಕ್ಕ ಕಾಲೇಜ್ ಕಲಾವಿದನಂತೆಯೇ ಕಾಣಿಸುತ್ತಾರೆ. ಹೀರೋಗೆ ಬೇಕಾದ ಎಲ್ಲಾ ಲಕ್ಷಣಗಳು ತೆರೆಮೇಲೆ ರಾರಾಜಿಸಿದ್ದಾವೆ. ನಡೆಯುವ ರೀತಿ, ಮುಖದ ಹಾವಭಾವ, ಫೈಟ್, ಡ್ಯಾನ್ಸ್ ಎಲ್ಲವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಆದರೆ ಆಗಾಗ ಭಾಷೆಯಲ್ಲಿ ಉತ್ತರ ಕನ್ನಡದ ಸೊಗಡು ಕೂಡ ಸಿನಿಮಾದಲ್ಲಿ ಕೇಳಿಸುತ್ತಿತ್ತು. ಉಳಿದಂತೆ ಹುಲಿ ಕಾರ್ತಿಕ್ ಇದ್ದಿದ್ದರಿಂದ ಒಳ್ಳೆ ಮನರಂಜನೆ ಸಿಕ್ಕಂತೆ ಆಗಿದೆ. ಹೊಸ ಪರಿಚಯ ಚೈತ್ರಾ ಲೋಕನಾಥ್ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಹರಿಣಿ ಶ್ರೀಕಾಂತ್, ರಮೇಶ್ ಭಟ್ ಅವರಿಂದ ಸಿನಿಮಾಗೊಂದು ತೂಕ ಬಂದಿದೆ.

RELATED ARTICLES

Latest News