ಬೆಂಗಳೂರು,ಏ.26- ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕಾಂಗ್ರೆಸ್‌ನಿಂದ ಗಿಫ್ಟ್ ಕಾರ್ಡ್ ಹಂಚಲಾಗಿದೆ ಎಂದು ಆರೋಪಿಸಿದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಮುಕ್ತ ಪಾರದರ್ಶಕ ಚುನಾವಣೆ ನಡೆಸುವಲ್ಲಿ ಚುನಾವಣಾ ಆಯೋಗ ಸಂಪೂರ್ಣ ವಿಫಲವಾಗಿದೆ ಎಂದು ಆಪಾದಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣಾ ಆಯೋಗ ಈ ರೀತಿ ಚುನಾವಣೆ ನಡೆಸುವ ಬದಲು ಹಣ ಹಂಚಿಕೊಂಡು ಚುನಾವಣೆ ನಡೆಸಲು ಅವಕಾಶ ಮಾಡಿಕೊಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಪರವಾಗಿ ಕ್ಯೂ ಆರ್‌ಕೋಡ್ ಇರುವ ಕೂಪನ್‌ಗಳನ್ನು ಹಂಚಿಕೆ ಮಾಡಲಾಗಿದೆ. ಅದನ್ನು ತಡೆಯಲು ಹೋದ ಜೆಡಿಎಸ್-ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆಯಾಗಿದೆ ಎಂದು ಆರೋಪಿಸಿದರು.
ಶಾಸಕರಾದ ಡಾ.ರಂಗನಾಥ್, ಎಚ್.ಸಿ.ಬಾಲಕೃಷ್ಣ, ಇಕ್ಬಾಲ್ ಹುಸೇನ್, ಡಿಸಿಎಂ ಡಿ.ಕೆ.ಶಿವಕುಮಾರ್, ವಿಧಾನಪರಿಷತ್ ಸದಸ್ಯ ಪುಟ್ಟಣ್ಣ ಹಾಗೂ ಕುಸುಮ ಹನುಮಂತಯ್ಯ ಅವರ ಹೆಸರಿನಲ್ಲಿ ಕೂಪನ್ ಹಂಚಲಾಗಿದೆ ಎಂದು ಆರೋಪಿಸಿಸಿ ಮೊಬೈಲ್ ಕೂಪನ್ ನೀಡಲಾಗಿದೆ ಎನ್ನಲಾದ ಚಿತ್ರಗಳನ್ನು ತೋರಿಸಿದರು. ಕಳೆದ ವಿಧಾನಸಭಾ ಚುನಾವಣೆಯಲ್ಲೂ ಇದೇ ರೀತಿ ಕಾಂಗ್ರೆಸ್ ಕೂಪನ್ ಕಾರ್ಡ್‌ಗಳನ್ನು ಹಂಚಿಕೆ ಮಾಡಿತ್ತು ಎಂದು ಆಪಾದಿಸಿದರು.