ಬೆಂಗಳೂರು,ಜ.11- ಅಯೋಧ್ಯೆಯಲ್ಲಿ ಇದೇ 22 ರಂದು ನಡೆಯುವ ರಾಮನ ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ಗೈರು ಹಾಜರಾಗಲು ತೀರ್ಮಾನಿಸಿರುವ ಕಾಂಗ್ರೆಸ್ ನಿರ್ಧಾರವನ್ನೇ ಹಿಂದೂ ವಿರೋಧಿ ಎಂಬುದನ್ನು ಬಿಂಬಿಸಲು ಬಿಜೆಪಿ ಮುಂದಾಗಿದೆ.
ಕೇವಲ ಅಲ್ಪಸಂಖ್ಯಾತರ ಓಲೈಕೆಗಾಗಿ ಹಿಂದೂಗಳ ಆರಾಧ್ಯ ದೈವ ಶ್ರೀರಾಮನ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ಗೈರು ಹಾಜರಾಗಿ ನಮ್ಮ ಭಾವನೆಗಳಿಗೆ ಧಕ್ಕೆ ತಂದಿರುವ ಕಾಂಗ್ರೆಸ್‍ಗೆ ಪಾಠ ಕಲಿಸುವಂತೆ ಮತದಾರರಿಗೆ ಮನವರಿಕೆ ಮಾಡಿಕೊಡುವ ಕಾರ್ಯತಂತ್ರವನ್ನು ರೂಪಿಸಲಾಗಿದೆ.
ಇದಕ್ಕೆ ಪುಷ್ಠಿ ನೀಡುವಂತೆ ಬಿಜೆಪಿ ನಾಯಕರಾದ ಬಿ.ಎಸ್.ಯಡಿಯೂರಪ್ಪ, ಪ್ರಹ್ಲಾದ್ ಜೋಷಿ, ಕೋಟಾ ಶ್ರೀನಿವಾಸ್ ಪೂಜಾರಿ ಸೇರಿದಂತೆ ಅನೇಕ ನಾಯಕರು ಪ್ರತಿಕ್ರಿಯಿಸಿದ್ದು, ಕಾಂಗ್ರೆಸ್ ನಿರ್ಧಾರವನ್ನು ತೀವ್ರವಾಗಿ ಖಂಡಿಸಿದ್ದಾರೆ. ರಾಮಲಲ್ಲಾ ಟ್ರಸ್ಟ್ ಆಹ್ವಾನ ನೀಡಿದರೂ ಗೌರವಯುತವಾಗಿ ತಿರಸ್ಕರಿಸಿರುವ ಕಾಂಗ್ರೆಸ್‍ಗೆ ಬರಲಿರುವ ಚುನಾವಣೆಯಲ್ಲಿ ರಾಜ್ಯದ ಮತದಾರರು ತಕ್ಕ ಪಾಠ ಕಲಿಸಬೇಕೆಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಕೂಡ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು, ರಾಮನೇ ಕಾಲ್ಪನಿಕ ಎಂದವರು, ರಾಮನ ಅಸ್ತಿತ್ವವನ್ನು ಪ್ರಶ್ನಿಸಿದವರು, ರಾಮನ ಜನ್ಮಭೂಮಿ ಅಯೋಧ್ಯೆಯೇ ಎಂಬುದಕ್ಕೆ ಸಾಕ್ಷಿ ಕೇಳಿದವರು, ನ್ಯಾಯಾಲಯದ ಮೆಟ್ಟಿಲು ಹತ್ತಿದವರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ ಎಂದು ಹರಿಹಾಯ್ದಿದ್ದಾರೆ. ಕಾಂಗ್ರೆಸ್ ಅಲ್ಪಸಂಖ್ಯಾತರ ಓಲೈಕೆಗಾಗಿ ಬಹುಸಂಖ್ಯಾತ ಹಿಂದೂಗಳ ಶ್ರದ್ಧಾ ಕೇಂದ್ರದ ವಿರುದ್ಧ ನಿಲ್ಲುತ್ತಾರೆಂದರೆ ಕಾಂಗ್ರೆಸಿಗರ ತುಷ್ಠೀಕರಣದ ನೀತಿ ಗಮನಿಸಿ ರಾಮನನ್ನು ನಿಂದಿಸಿದವರಿಗೆ ಕಾಲವೇ ಉತ್ತರ ನೀಡುತ್ತದೆ ಎಂದು ಆಕ್ರೋಶ ಹೊರಹಾಕಿದರು.
ಪ್ರಿಯಕರ ಜೊತೆ ಸೇರಿ ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಪತಿಯನ್ನು ಕೊಂದ ಪಾಪಿ ಪತ್ನಿ
ಬಹುತೇಕ ಬಿಜೆಪಿ ನಾಯಕರು ಕಾಂಗ್ರೆಸ್‍ನ ನಿರ್ಧಾರದ ವಿರುದ್ಧ ಕೆಂಡ ಕಾರಿದ್ದು, ಬರಲಿರುವ ಚುನಾವಣೆಯಲ್ಲಿ ಇದು ಚುನಾವಣಾ ಅಸ್ತ್ರವಾಗುವ ಸಾಧ್ಯತೆ ಕಂಡುಬಂದಿದೆ. ಲೋಕಸಭೆ ಚುನಾವಣೆಗೆ ತಯಾರಿ ನಡೆಸುತ್ತಿರುವ ಬಿಜೆಪಿ, ರಾಮನ ಅಸ್ತ್ರವನ್ನು ಕಾಂಗ್ರೆಸ್‍ನ ವಿರುದ್ಧ ವ್ಯವಸ್ಥಿತ ಕಾರ್ಯತಂತ್ರವನ್ನು ರೂಪಿಸುವತ್ತ ಮಗ್ನವಾಗಿದೆ. ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮಲಲ್ಲಾ ಟ್ರಸ್ಟ್ ವತಿಯಿಂದ ನಡೆಯುವ ಶ್ರೀ ರಾಮನ ಪ್ರಾಣಪ್ರತಿಷ್ಠಾನ ಕಾರ್ಯಕ್ರಮಕ್ಕೆ ನೀಡಿರುವ ಆಹ್ವಾನವನ್ನು ಗೌರವಯುತವಾಗಿ ತಿರಸ್ಕರಿಸಲಾಗಿದೆ ಎಂದು ಕಾಂಗ್ರೆಸ್ ಹೇಳಿತ್ತು.
ಲೋಕಸಭೆ ಚುನಾವಣೆಯಲ್ಲಿ ಶ್ರೀ ರಾಮನ ಜಪದ ಮೂಲಕವೇ ಹೆಚ್ಚಿನ ಸ್ಥಾನ ಗಳಿಸಲು ಭಾವನಾತ್ಮಕ ಅಸ್ತ್ರ ಬಳಸಲಿದ್ದಾರೆ ಎಂದು ಗೊತ್ತಾಗಿದೆ. ಮೇಲ್ನೋಟಕ್ಕೆ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮವನ್ನು ಹಿಂದೂಪರ ಸಂಘಟನೆಗಳು ನಡೆಸುತ್ತಿದ್ದರೂ ಇದರ ಸಂಪೂರ್ಣ ಲಾಭವನ್ನು ಬಿಜೆಪಿ ಬಳಸಿಕೊಳ್ಳಲು ಮುಂದಾಗಿದೆ.ಈಗಾಗಲೇ ಮನೆಮನೆಗೆ ಅಕ್ಷತೆಯನ್ನು ನೀಡುವ ಮೂಲಕ ಹಿಂದೂ ಮತಗಳ ಕ್ರೂಢೀಕರಣಕ್ಕೆ ಸಜ್ಜಾಗಿರುವ ಬಿಜೆಪಿ, ತನ್ನ ಚುನಾವಣಾ ಪ್ರಚಾರದಲ್ಲೂ ಕಾಂಗ್ರೆಸ್ ನಿರ್ಧಾರವನ್ನು ಪ್ರಸ್ತಾಪಿಸಲಿದೆ.
ವೈದ್ಯ ಹೇಳಿದ್ದೂ ಹಾಲು ಅನ್ನ, ರೋಗಿ ಬಯಸಿದ್ದೂ ಅದನ್ನೇ ಎನ್ನುವಂತೆ ಈ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಬಂದರೆ ಅದರ ಶ್ರೇಯಸ್ಸು ಆ ಪಕ್ಷಕ್ಕೇ ಸಲ್ಲುತ್ತದೆ ಎಂಬ ಆತಂಕ ಇತ್ತು. ಹೀಗಾಗಿ ಕಾಂಗ್ರೆಸ್ ಕಾರ್ಯಕ್ರಮಕ್ಕೆ ಬರಲೇಬಾರದೆಂಬ ಆಲೋಚನೆಯಲ್ಲಿತ್ತು. ಯಾವಾಗ ಕಾಂಗ್ರೆಸ್‍ನಿಂದ ಅಧಿಕೃತ ಆದೇಶ ಹೊರಬಿತ್ತೋ, ಆಗ ಬಿಜೆಪಿ ಒಳಗೊಳಗೇ ಖುಷಿ ಪಡುತ್ತಿದೆ.
ಲೋಕಸಭೆ ಚುನಾವಣೆ ಕಸರತ್ತು, ದೆಹಲಿಗೆ ದೌಡಾಯಿಸಿದ ಸಚಿವರು
ಚುನಾವಣಾ ಸಂದರ್ಭದಲ್ಲಿ ರಾಮಮಂದಿರ ಪ್ರಾಣ ಪ್ರತಿಷ್ಠಾಪನೆಗೆ ಕಾರ್ಯಕ್ರಮಕ್ಕೆ ಹಾಜರಾಗಿದ್ದರೆ ಒಂದು ಸಮುದಾಯದ ಮತಗಳು ದೂರ ಸರಿಯಬಹುದು ಎಂಬ ಕಾರಣಕ್ಕಾಗಿ ಈ ತೀರ್ಮಾನಕ್ಕೆ ಬಂದಿದೆ. ಇದು ಹಿಂದೂಗಳಿಗೆ ಮಾಡಿದ ಅಪಮಾನ ಎಂದು ಬಿಂಬಿಸಲು ಬಿಜೆಪಿ ಸಜ್ಜಾಗಿದೆ. ಪ್ರಚಾರದ ಸಂದರ್ಭದಲ್ಲಿ ಈ ಅಸ್ತ್ರವನ್ನೇ ಬಳಸಬೇಕೆಂದು ಹೈಕಮಾಂಡ್ ಕೂಡ ಸೂಚಿಸಿದ್ದು, ಲೋಕಸಭಾ ಚುನಾವಣೆಯಲ್ಲಿ ರಾಮನ ಜಪ ಮುನ್ನಲೆಗೆ ಬರಲಿದೆ ಎಂದು ಮೂಲಗಳು ತಿಳಿಸಿವೆ.
ರಾಜ್ಯ ಬಿಜೆಪಿ ಘಟಕದ ನಾಯಕರು ಇದನ್ನೇ ಚುನಾವಣಾ ಸಂದರ್ಭದಲ್ಲಿ ಪ್ರಚಾರ ನಡೆಸಬೇಕು. ಗ್ರಾಮ ಮಟ್ಟದಿಂದ ಹಿಡಿದು ಹೋಬಳಿ ಹಂತದವರೆಗೂ ಬಿಜೆಪಿ ಹಿಂದೂಪರ ಎಂಬುದನ್ನು ಕಾರ್ಯಕರ್ತರಿಗೆ ಮನವರಿಕೆ ಮಾಡಬೇಕು ಎಂದು ವರಿಷ್ಠರು ಸೂಚನೆ ಕೊಟ್ಟಿದ್ದಾರೆ.