ಬೆಂಗಳೂರು,ಮಾ.1- ಪಾಕಿಸ್ತಾನ್ ಜಿಂದಾಬಾದ್ ಎಂಬ ದೇಶದ್ರೋಹಿ ಘೋಷಣೆಯ ಗೊಂದಲಗಳು ಬಗೆಹರಿಯುವ ಮುನ್ನವೇ, ವಿಧಾನಸೌಧಕ್ಕೆ ಕೇಸರಿ ಶಾಲು ತೆಗೆದುಕೊಂಡು ಹೋಗುವುದನ್ನು ತಡೆಯಲಾಗಿತ್ತು ಎಂಬ ಮತ್ತೊಂದು ಮುಜುಗರದ ವಿಚಾರ ಬಯಲಾಗಿದೆ. ಪ್ರತಿಹಂತದಲ್ಲೂ ರಾಜ್ಯಸರ್ಕಾರವನ್ನು ಹಿಂದುತ್ವದ ವಿರೋಧಿ ಎಂದು ಬಿಂಬಿಸಲು ಬಿಜೆಪಿಗೆ ಮೇಲಿಂದ ಮೇಲೆ ಪೂರಕವಾದ ಅಸ್ತ್ರಗಳು ದೊರೆಯುತ್ತಿವೆ.
ನಿನ್ನೆ ಬಿಜೆಪಿ ಸದಸ್ಯರು ವಿಧಾನಮಂಡಲಕ್ಕೆ ಕೇಸರಿ ಶಾಲು ಧರಿಸಿ ಭಾಗವಹಿಸಲು ಮುಂದಾಗಿದ್ದರು. ಇದಕ್ಕಾಗಿ ವಿಧಾನಪರಿಷತ್ ಸದಸ್ಯ ಸಿ.ಕೇಶವ ಪ್ರಸಾದ್ ಕೇಸರಿ ಶಾಲುಗಳ ಪ್ಲಾಸ್ಟಿಕ್ ಚೀಲದೊಂದಿಗೆ ವಿಧಾನಸೌಧ ಪ್ರವೇಶಿಸುತ್ತಿದ್ದರು. ಆ ಸಂದರ್ಭದಲ್ಲಿ ಪೊಲೀಸರು ಅವರನ್ನು ತಡೆದು ಪರಿಶೀಲನೆ ನಡೆಸಿದ್ದಾರೆ. ಇದರಿಂದ ಸಿಟ್ಟಾದ ಕೇಶವಪ್ರಸಾದ್‍ರವರು ಕೇಸರಿ ಶಾಲು ತಡೆಯಲು ನೀವ್ಯಾರು? ನಿಮಗೆ ಯಾವ ಅಧಿಕಾರ ಇದೆ? ಈ ರೀತಿ ಕೆಲಸ ಮಾಡಲು ಯಾರು ಹೇಳಿದ್ದು ಎಂದು ಏರಿದ ಧ್ವನಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ತಪಾಸಣಾ ಕಾರ್ಯದಲ್ಲಿ ತೊಡಗಿದ್ದ ಮಹಿಳಾ ಸಬ್‍ಇನ್ಸ್‍ಪೆಕ್ಟರ್ ಒಬ್ಬರು ನಮಗೆ ಹಿರಿಯ ಅಧಿಕಾರಿಗಳಿಂದ ಮೌಖಿಕ ಆದೇಶವಿದೆ. ಕೇಸರಿ ಶಾಲು, ಕೇಸರಿ ಬಟ್ಟೆಗಳನ್ನು ತೆಗೆದುಕೊಂಡು ಹೋಗದಂತೆ ತಡೆಯಿರಿ ಎಂದು ಹೇಳಿದ್ದಾರೆ. ನಾವು ಯಾರನ್ನೂ ಅಗೌರವಿಸಿಲ್ಲ ಅಥವಾ ಅವಮಾನ ಮಾಡಿಲ್ಲ. ಪರಿಶೀಲನೆ ಮಾಡುತ್ತಿದ್ದೇವೆ ಎಂದು ಸಮಜಾಯಿಷಿ ನೀಡಿದರು.
ಅದೇ ವೇಳೆಗೆ ಅಲ್ಲಿಗೆ ಬಂದ ವಿಧಾನಪರಿಷತ್‍ನ ಹಿರಿಯ ಸದಸ್ಯ ರಘುನಾಥ್ ಮಲ್ಕಾಪುರೆ ಹಾಗೂ ರುದ್ರೇಗೌಡ ಅವರು ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದಾರೆ. ಕಾನೂನು ಮಾಡುವುದು ನಾವು, ಅದರ ಪಾಲನೆ ನಮಗೆ ಗೊತ್ತಿದೆ. ಕೇಸರಿ ಶಾಲು ನಮ್ಮ ಅಸ್ಮಿತೆ. ಅದನ್ನು ತಡೆಯುವಂತೆ ನಿಮಗೆ ಯಾವ ಆದೇಶವಿದೆ ತೋರಿಸಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಒಂದು ಹಂತದಲ್ಲಿ ಯಾರು ಏನು ಮಾಡುತ್ತಾರೋ ನೋಡೋಣ, ನೀವು ಕೇಸರಿ ಶಾಲನ್ನು ಒಳಗೆ ತನ್ನಿ ಎಂದು ರಘುನಾಥ್ ಮಲ್ಕಾಪುರೆ ತಮ್ಮ ಸಹದ್ಯೋಗಿ ಕೇಶವ ಪ್ರಸಾದ್‍ರಿಗೆ ಬೆಂಬಲ ನೀಡಿದ್ದಾರೆ. ಇದರಿಂದ ನಿಸ್ಸಾಹಯಕರಾದ ಪೊಲೀಸರು ಬೇರೆ ದಾರಿ ಕಾಣದೆ ತಟಸ್ಥರಾಗಿ ನಿಲ್ಲುವಂತಾಗಿದೆ.