ಬೆಂಗಳೂರು,ಏ.20- ರಾಜ್ಯಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಭೇಟಿಯ ಸಂದರ್ಭದಲ್ಲಿ ಕಾಂಗ್ರೆಸ್ ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರ ಗಳಲ್ಲಿ ಚಂಬು ಪ್ರತಿಭಟನೆ ನಡೆಸಿದ್ದು, ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.ಇಂದಿನಿಂದ ಆರಂಭವಾಗಿರುವ ಪ್ರತಿಭಟನೆ ಹಂತಹಂತವಾಗಿ ರಾಜ್ಯಾ ದ್ಯಂತ ಪ್ರತಿ ವಿಧಾನಸಭಾ ಕ್ಷೇತ್ರಗಳ ಬ್ಲಾಕ್ ಮಟ್ಟದಲ್ಲಿ ನಡೆಯಲಿದೆ.
ಆಯಾ ಕ್ಷೇತ್ರಗಳ ಶಾಸಕರು, ಸಚಿವರು, ಕಾಂಗ್ರೆಸ್ನ ಅಭ್ಯರ್ಥಿಗಳು, ಪ್ರಮುಖ ನಾಯಕರು, ಕಾರ್ಯ ಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ.ಬೆಂಗಳೂರಿನ ಮೇಕ್ರಿ ಸರ್ಕಲ್ನಲ್ಲಿ ನಡೆದ ಪ್ರತಿಭಟನೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ, ಶಾಸಕರಾದ ರಿಜ್ವಾನ್ ಹರ್ಷದ್, ಎಐಸಿಸಿ ಕಾರ್ಯದರ್ಶಿ ಅಭಿಷೇಕ್ ದತ್ತ, ಮುಖಂಡರಾದ ವಿಜಯ್ ಮುಗುಂದ್, ಬಿ.ಆರ್.ನಾಯ್ಡು, ಸುೀಂದ್ರ,ಎಚ್.ಎಸ್.ಮಂಜುನಾಥ್ ಮತ್ತಿತರರು ಭಾಗವಹಿಸಿದ್ದರು.
ಈ ವೇಳೆ ಮಾತನಾಡಿದ ರಣದೀಪ್ ಸಿಂಗ್ ಸುರ್ಜೇವಾಲ, ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಬಿಜೆಪಿಯವರು ಕರುನಾಡಿಗೆ ಚಂಬು ನೀಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕರ್ನಾಟಕದಿಂದ ವಸೂಲಿಯಾಗುವ ತೆರಿಗೆಯಲ್ಲಿ ಶೇ.13 ರಷ್ಟು ಮಾತ್ರ ಪಾಲು ನೀಡಲಾಗುತ್ತಿದೆ. ಅನುದಾನ ಹಂಚಿಕೆಯಲ್ಲಿ ಕನ್ನಡಿಗರಿಗೆ ಮೋದಿ ಸರ್ಕಾರ ಚಂಬು ನೀಡಿದೆ ಎಂದು ಕಿಡಿಕಾರಿದರು.
ರಾಜ್ಯದಲ್ಲಿ ಕಳೆದ 6 ತಿಂಗಳಿನಿಂದ ಭೀಕರವಾದ ಬರಪರಿಸ್ಥಿತಿ ಇದೆ. 18,400 ಕೋಟಿ ರೂ. ನೆರವು ಕೇಳಿದರೆ ಕೇಂದ್ರ ಸರ್ಕಾರ ಕನ್ನಡಿಗರಿಗೆ ನೀಡಿದ್ದು ಚಂಬು ಮಾತ್ರ. ಭದ್ರಾ ಮೇಲ್ದಂಡೆ ಯೋಜನೆಗೆ ಬಜೆಟ್ನಲ್ಲಿ ಘೊಷಿತ ಹಣವನ್ನೂ ನೀಡಲಿಲ್ಲ. 14 ನೇ ಹಣಕಾಸು ಆಯೋಗದಿಂದ ನೀಡಬೇಕಿದ್ದ 62 ಸಾವಿರ ಕೋಟಿ ರೂ.ಗಳಿಗೂ ಚಂಬು ನೀಡಿದ್ದಾರೆ.
ರೈತರ ಆದಾಯವನ್ನು ದ್ವಿಗುಣ ಗೊಳಿಸುತ್ತೇವೆ ಎಂದು ಹೇಳಿದ್ದರು. ಬದಲಿಗೆ ಸಿಕ್ಕಿರುವುದು ಚಂಬು ಮಾತ್ರ. ವಿದೇಶದಲ್ಲಿರುವ ಕಪ್ಪು ಹಣವನ್ನು ತಂದು ದೇಶದಲ್ಲಿರುವ ಪ್ರತಿಯೊಬ್ಬರ ಖಾತೆಗೂ 15 ಲಕ್ಷ ರೂ. ಹಾಕುವುದಾಗಿ ಹೇಳಿದ್ದರು. ಅದಕ್ಕೂ ಚಂಬೇ ಗತಿಯಾಗಿದೆ.
ರಾಜ್ಯದಿಂದ ಬಿಜೆಪಿ ಮತ್ತು ಜೆಡಿಎಸ್ನಿಂದ ಆಯ್ಕೆಯಾದ 27 ಲೋಕಸಭಾ ಸದಸ್ಯರು ರಾಜ್ಯಕ್ಕೆ ನೀಡಿರುವ ಕೊಡುಗೆ ಚಂಬು ಮಾತ್ರ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮತ್ತೊಂದೆಡೆ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದಲ್ಲಿ ಸಚಿವ ಕೃಷ್ಣಭೈರೇಗೌಡ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯಿತು. ಖುದ್ದು ಸಚಿವ ಕೃಷ್ಣ ಭೈರೇಗೌಡ ಅವರೇ ಮೋದಿ ಸರ್ಕಾರದ ವಿರುದ್ಧ ಕ್ಕಾರದ ಘೋಷಣೆಗಳನ್ನು ಮೊಳಗಿಸಿ ದರು. ಪ್ರತಿಭಟನೆಯುದ್ದಕ್ಕೂ ಕೇಂದ್ರ ದಿಂದ ರಾಜ್ಯಕ್ಕಾದ ಅನ್ಯಾಯಗಳ ಆಕ್ರೋಶದ ವಾಕ್ಯಗಳೊಂದಿಗೆ ಚಂಬಿನ ಚಿತ್ರವನ್ನು ಮುದ್ರಿಸಿದ್ದ ಭಿತ್ತಿಪತ್ರಗಳನ್ನು ಪ್ರತಿಭಟನಾಕಾರರು ಪ್ರದರ್ಶಿಸಿದರು. ಜೊತೆಗೆ ಸ್ಟೀಲ್ ಚಂಬುಗಳನ್ನು ಪ್ರದರ್ಶಿಸಲಾಗಿದೆ.
ಕರ್ನಾಟಕದ ದುಡಿಮೆಯ ತೆರಿಗೆಗೆ ಕೇಂದ್ರ ಸರ್ಕಾರ ಸರಿಯಾದ ಪಾಲು ನೀಡಿಲ್ಲ. ನಿರಂತರವಾಗಿ ಅನ್ಯಾಯ ಮಾಡುತ್ತಲೇ ಬಂದಿದೆ. ಮೋದಿ ಸರ್ಕಾರದ ಅವಧಿಯಲ್ಲಿ ರೈತರ ಆದಾಯ ದ್ವಿಗುಣಗೊಳ್ಳುವ ಬದಲು ಖರ್ಚು ಹೆಚ್ಚಾಗಿದೆ ಎಂದು ಕೃಷ್ಣ ಭೈರೇಗೌಡ ಆಕ್ರೋಶ ವ್ಯಕ್ತಪಡಿಸಿದರು.ರಾಜ್ಯದಲ್ಲಿ ಪ್ರಚಾರಕ್ಕೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಮತದಾರರು ತಿರುಗಿ ಚಂಬನ್ನೇ ನೀಡಬೇಕು ಎಂದು ಕೃಷ್ಣಭೈರೇಗೌಡರು ಸಲಹೆ ನೀಡಿದರು.