ಬೆಂಗಳೂರು,ಮಾ.9- ಕಾಂಗ್ರೆಸ್ ಅಳೆದು ತೂಗಿ ನಿನ್ನೆ 7 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಿದ್ದು, ಅದರಲ್ಲಿ ತುಮಕೂರು , ಮಂಡ್ಯ ಹೊರತುಪಡಿಸಿದರೆ ಉಳಿದೆಲ್ಲಾ ಕಡೆ ಬಹುತೇಕ ಸಹಮತ ಕಂಡುಬಂದಿದೆ. ಕಳೆದ ತಿಂಗಳಷ್ಟೇ ಬಿಜೆಪಿಯಿಂದ ಕಾಂಗ್ರೆಸ್‍ಗೆ ವಲಸೆ ಬಂದ ಮುದ್ದಹನುಮೇಗೌಡರಿಗೆ ಮೊದಲ ಪಟ್ಟಿಯಲ್ಲೇ ಟಿಕೆಟ್ ಘೋಷಣೆ ಮಾಡುವ ಮೂಲಕ ಜಿಲ್ಲೆಯ ರಾಜಕಾರಣದಲ್ಲಿ ಸಚಿವ ಕೆ.ಎನ್.ರಾಜಣ್ಣ ಅವರ ಕೈ ಮೇಲಾಗಿದೆ.
ತುಮಕೂರು ಲೋಕಸಭಾ ಕ್ಷೇತ್ರದಿಂದ ಟಿಕೆಟ್‍ಗಾಗಿ ಹಿರಿಯ ಶಾಸಕ ಟಿ.ಬಿ.ಜಯಚಂದ್ರ ಅವರ ಪುತ್ರ ಸಂತೋಷ್, ಗುಬ್ಬಿ ಕ್ಷೇತ್ರದ ಶಾಸಕ ಎಸ್.ಆರ್.ಶ್ರೀನಿವಾಸ್ ಅವರ ಪತ್ನಿ ಭಾರತಿ, ಕಾಂಗ್ರೆಸ್ ಮುಖಂಡರಾದ ಮುರಳೀಧರ್ ಹಾಲಪ್ಪ, ನಿಕೇತ್‍ರಾಜ್ ಮೌರ್ಯ ಸೇರಿದಂತೆ ಹಲವು ಮಂದಿ ಆಕಾಂಕ್ಷಿಗಳಿದ್ದರು. ಆದರೆ ಅವರೆಲ್ಲರನ್ನೂ ಕಡೆಗಣಿಸಿದ ಸಚಿವ ರಾಜಣ್ಣ ಪದೇಪದೇ ಪಕ್ಷ ಬದಲಾಯಿಸುವ ಎಸ್.ಪಿ.ಮುದ್ದಹನುಮೇಗೌಡರನ್ನು ಕಾಂಗ್ರೆಸ್‍ಗೆ ಮರಳಿ ತರಲು ಮುತುವರ್ಜಿ ವಹಿಸಿದ್ದರು. ಒಂದು ಹಂತದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ವಿರೋಧ ವ್ಯಕ್ತಪಡಿಸಿದರಾದರೂ ಅವರನ್ನು ಮನವೊಲಿಸಿ ಮುದ್ದಹನುಮೇಗೌಡರನ್ನು ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತರಾಗಿರುವ ರಾಜಣ್ಣ ಹೈಕಮಾಂಡ್ ಮೇಲೂ ಪ್ರಭಾವ ಬೀರಿ ಮೊದಲ ಪಟ್ಟಿಯಲ್ಲೇ ಟಿಕೆಟ್ ಕೊಡಿಸುವ ಮೂಲಕ ಎಲ್ಲಾ ವಿರೋಧಗಳನ್ನು ಬದಿಗೆ ಸರಿಸುವ ಯತ್ನ ನಡೆಸಿದ್ದಾರೆ. ಕೆಲವೊಮ್ಮೆ ವಿವಾದಿತ ಹೇಳಿಕೆ ನೀಡುವ ಮೂಲಕ ಚರ್ಚೆಗೆ ಗ್ರಾಸವಾಗುವ ರಾಜಣ್ಣ, ಮುದ್ದಹನುಮೇಗೌಡರಿಗೆ ಟಿಕೆಟ್ ಕೊಡಿಸುವ ಮೂಲಕ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯುವ ಪ್ರಯತ್ನ ಮಾಡಿದ್ದಾರೆ.
ತುಮಕೂರು ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದರೆ ಅದರ ಕೀರ್ತಿಗೆ ರಾಜಣ್ಣ ಭಾಜನರಾಗಲಿದ್ದಾರೆ. ಒಂದು ವೇಳೆ ಸೋತರೆ ಹೈಕಮಾಂಡ್ ನಿರ್ದೇಶನದ ಮೇರೆಗೆ ಜಿಲ್ಲಾ ಉಸ್ತುವಾರಿ ಸಚಿವರು ಜವಾಬ್ದಾರರಾಗಬೇಕಾಗುತ್ತದೆ. ಪರಮೇಶ್ವರ್ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದು, ಒಲ್ಲದ ಮನಸ್ಸಿನಿಂದ ಮುದ್ದಹನುಮೇಗೌಡರ ಗೆಲುವಿಗೆ ಶ್ರಮಿಸಬೇಕಿದೆ.
ರಾಜಣ್ಣ ಸಂಪುಟ ವಿಸ್ತರಣೆ ಬಳಿಕ ತುಮಕೂರು ಜಿಲ್ಲೆಯ ಉಸ್ತುವಾರಿಗಾಗಿ ಪಟ್ಟುಹಿಡಿದಿದ್ದರು. ಆದರೆ ಪರಮೇಶ್ವರ್ ಅವರ ಪ್ರಭಾವದ ಮುಂದೆ ಸಫಲರಾಗಲಿಲ್ಲ. ಕೊನೆಯ ಹಂತದಲ್ಲಿ ಹಾಸನ ಜಿಲ್ಲೆಗೆ ಉಸ್ತುವಾರಿ ಸಚಿವರಾದರು. ಅಲ್ಲಿಯೂ ಕೂಡ ಹಿರಿಯ ಕಾಂಗ್ರೆಸಿಗ ಹಾಗೂ ಮಾಜಿ ಶಾಸಕ ಗಂಡಸಿ ಶಿವರಾಂ ಅವರನ್ನು ಏಕವಚನದಲ್ಲಿ ಮಾತನಾಡಿಸುವ ಮೂಲಕ ವಿವಾದಕ್ಕೆ ಗುರಿಯಾದರು. ಗಂಡಸಿ ಶಿವರಾಂ ಹಾಸನ ಲೋಕಸಭಾ ಕ್ಷೇತ್ರಕ್ಕೆ ಆಕಾಂಕ್ಷಿಯಾಗಿದ್ದರೂ ಅದನ್ನು ತಪ್ಪಿಸಿ ಯುವ ನಾಯಕ ಎಂ.ಶ್ರೇಯಸ್ ಪಟೇಲ್ ಅವರಿಗೆ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ರಾಜಣ್ಣ ಎರಡು ಕ್ಷೇತ್ರಗಳಲ್ಲೂ ತಮ್ಮದೇ ಆದ ರಾಜಕೀಯ ತಂತ್ರಗಾರಿಕೆ ಚಲಾಯಿಸುತ್ತಿದ್ದು, ಹಲವು ಕಾಂಗ್ರೆಸ್ ನಾಯಕರಿಗೆ ನುಂಗಲಾರದ ಬಿಸಿ ತುಪ್ಪವಾಗಿದ್ದಾರೆ. ಇತ್ತ ಹಾವೇರಿ ಲೋಕಸಭಾ ಕ್ಷೇತ್ರಕ್ಕೆ ಡಿ.ಆರ್.ಪಾಟೀಲ್ ಪ್ರಬಲ ಆಕಾಂಕ್ಷಿಯಾಗಿದ್ದರು. ಅಲ್ಲಿ ಆನಂದ ಸ್ವಾಮಿ ಗಡ್ಡದೇವರ ಮಠ ಅವರಿಗೆ ಟಿಕೆಟ್ ನೀಡಲಾಗಿದೆ. ಸಣ್ಣಪುಟ್ಟ ಅಸಮಾಧಾನಗಳು ಹೊಗೆಯಾಡುತ್ತಿವೆಯಾದರೂ ಅದನ್ನು ನಿಭಾಯಿಸಬಹುದು ಎಂದು ಪಕ್ಷದ ನಾಯಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಶಿವಮೊಗ್ಗದಲ್ಲಿ ಗೀತಾ ಶಿವರಾಜ್‍ಕುಮಾರ್ ಅವರಿಗೆ ಟಿಕೆಟ್ ಸಿಗಲಿದೆ ಎಂದು ಮೊದಲಿನಿಂದಲೂ ಇದ್ದ ನಿರೀಕ್ಷೆ ಯಶಸ್ವಿಯಾಗಿದೆ. ಮಂಡ್ಯ ಜಿಲ್ಲೆಯಲ್ಲಿ ವೆಂಕಟರಾಮೇಗೌಡ ಅವರಿಗೆ ಟಿಕೆಟ್ ಘೋಷಣೆ ಮಾಡಿರುವುದು ಕೆಲವು ಆಕಾಂಕ್ಷಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ಈ ಬಾರಿ ಜಿಲ್ಲಾ ಉಸ್ತುವಾರಿ ಸಚಿವರೇ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವ ಹೊಣೆ ಹೊರಬೇಕೆಂದು ಸ್ಪಷ್ಟ ಸೂಚನೆಗಳಿವೆ. ಈ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆ ಉಸ್ತುವಾರಿ ಸಚಿವ ಚೆಲುವರಾಯಸ್ವಾಮಿ ಹಾಗೂ ಶಾಸಕರ ಸಹಮತದ ಮೇರೆಗೆ ಸ್ಟಾರ್ ಚಂದ್ರು ಎಂದೇ ಗುರುತಿಸಿಕೊಂಡಿರುವ ವೆಂಕಟರಮಣಗೌಡ ಅವರಿಗೆ ಟಿಕೆಟ್ ಘೋಷಣೆಯಾಗಿದೆ.
ಬಿಜಾಪುರದ ರಾಜು ಅಲಗೂರು ಅವರಿಗೆ ಹೆಚ್ಚಿನ ವಿರೋಧಗಳು ಕಂಡುಬರುತ್ತಿವೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಡಿ.ಕೆ.ಸುರೇಶ್ ಹೆಸರು ಮೊದಲ ಪಟ್ಟಿಯಲ್ಲೇ ಪ್ರಕಟವಾಗಿದ್ದು, ಪ್ರಚಾರಕ್ಕೆ ಈಗಾಗಲೇ ಚಾಲನೆ ನೀಡಲಾಗಿದೆ. ಮೊದಲ ಪಟ್ಟಿಯಲ್ಲೇ ಚಿಕ್ಕಮಗಳೂರು, ಉಡುಪಿ ಕ್ಷೇತ್ರ ಹಾಗೂ ಚಿತ್ರದುರ್ಗ ಕ್ಷೇತ್ರಗಳಿಗೆ ಟಿಕೆಟ್ ಘೋಷಣೆಯಾಗಬೇಕಿತ್ತು. ಆದರೆ ಚಿಕ್ಕಮಗಳೂರು, ಉಡುಪಿ ಕ್ಷೇತ್ರದಲ್ಲಿ ಅಭ್ಯರ್ಥಿಯಾಗಬಹುದು ಎಂದು ಹೇಳಲಾಗುತ್ತಿರುವ ಜಯಪ್ರಕಾಶ್ ಹೆಗಡೆ ಇನ್ನೂ ಬಿಜೆಪಿಯಲ್ಲೇ ಇದ್ದಾರೆ. ಅವರ ಪಕ್ಷ ಸೇರ್ಪಡೆ ಬಳಿಕ ಪರಿಗಣಿಸಬಹುದು ಎಂದು ಷರತ್ತು ವಿಸಲಾಗಿದೆ.
ಚಿತ್ರದುರ್ಗದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಬಿ.ಎಲ್.ಚಂದ್ರಪ್ಪ ಆಕಾಂಕ್ಷಿಯಾಗುತ್ತಾರೆ ಎಂಬ ನಿರೀಕ್ಷೆಯಿತ್ತು. ಆದರೆ ಸಿದ್ದರಾಮಯ್ಯನವರ ಆಪ್ತ ಎಚ್.ಆಂಜನೇಯ ಆಕಾಂಕ್ಷಿಯಾಗಿದ್ದು, ಅವರ ಲಾಬಿಯಿಂದಾಗಿ ಮೊದಲ ಪಟ್ಟಿಯಲ್ಲಿ ಚಂದ್ರಪ್ಪ ಅವರ ಹೆಸರು ತಪ್ಪಿಹೋಗಿದೆ ಎಂದು ಹೇಳಲಾಗುತ್ತಿದೆ. ಒಂದೇ ಹೆಸರಿರುವ 15 ಕ್ಷೇತ್ರಗಳ ಪೈಕಿ ಬಹುತೇಕ ಇತ್ಯರ್ಥಗೊಂಡಿದೆ. ಮಾರ್ಚ್ 11 ರಂದು ಕೇಂದ್ರ ಚುನಾವಣಾ ಸಮಿತಿಯ ಮತ್ತೊಂದು ಸುತ್ತಿನ ಸಭೆ ನಡೆಯಲಿದ್ದು, ಅಂದು ಮತ್ತಷ್ಟು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆಯಾಗಲಿದೆ ಎಂದು ಹೇಳಲಾಗಿದೆ.