Thursday, May 2, 2024
Homeರಾಜ್ಯದಲಿತ ಮುಖ್ಯಮಂತ್ರಿ ಚರ್ಚೆ ಈಗ ಅಪ್ರಸ್ತುತ : ಪರಮೇಶ್ವರ್

ದಲಿತ ಮುಖ್ಯಮಂತ್ರಿ ಚರ್ಚೆ ಈಗ ಅಪ್ರಸ್ತುತ : ಪರಮೇಶ್ವರ್

ಬೆಂಗಳೂರು,ಮಾ.9- ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾರೆ. ಸ್ಥಿರ ಸರ್ಕಾರ ಉತ್ತಮ ಆಡಳಿತ ನೀಡುತ್ತಿದೆ. ಲೋಕಸಭಾ ಚುನಾವಣೆ ಎದುರಾಗಿರುವ ಸಂದರ್ಭದಲ್ಲಿ ದಲಿತ ಮುಖ್ಯಮಂತ್ರಿ ಕುರಿತ ಚರ್ಚೆ ಅಪ್ರಸ್ತುತ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಕೆ.ಎನ್.ರಾಜಣ್ಣ ಹೇಳಿಕೆ ನೀಡಿ, ಪರಮೇಶ್ವರ್ ಮುಖ್ಯಮಂತ್ರಿಯಾಗಲಿ ಎಂದಿರುವುದಕ್ಕೆ ಈಗಾಗಲೇ ಪ್ರತಿಕ್ರಿಯಿಸಿದ್ದೇನೆ. ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲುವುದು ನಮ್ಮ ಮುಂದಿರುವ ಗುರಿ. ಇದು ಸಾಧ್ಯವಾದರೆ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಬಲ ಬರುತ್ತದೆ ಎಂದರು.

ದಲಿತ ಮುಖ್ಯಮಂತ್ರಿಯ ವಿಚಾರವಾಗಿ ಬೇರೆಬೇರೆ ವಿಚಾರಗಳು ಚರ್ಚೆಯಲ್ಲಿವೆ. ಕೆಲವರು ಇದು ಸೂಕ್ತ ಸಮಯ ಅಲ್ಲ ಎಂದರೆ, ಇನ್ನೂ ಕೆಲವರು ಅವಕಾಶ ಮಾಡಿಕೊಟ್ಟು ದಲಿತ ಸಮುದಾಯದ ಮತ ಮತ್ತಷ್ಟು ಕಾಂಗ್ರೆಸ್‍ಗೆ ಬರಲಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಆದರೆ ಇದೆಲ್ಲವನ್ನೂ ಈಗ ಚರ್ಚೆ ಮಾಡುವುದು ಬೇಡ ಎಂದು ಹೇಳಿದರು.

ಪರಿಶಿಷ್ಟರ ಜನಸಂಖ್ಯೆ ಹೆಚ್ಚಿದೆ ಎಂಬ ಕಾರಣಕ್ಕೆ ಸಾಮಾನ್ಯ ಕ್ಷೇತ್ರಗಳಲ್ಲಿ ಪರಿಶಿಷ್ಟ ಸಮುದಾಯದ ನಾಯಕರಿಗೆ ಲೋಕಸಭೆ ಚುನಾವಣೆಯಲ್ಲಿ ಸ್ರ್ಪಧಿಸಲು ಅವಕಾಶ ನೀಡಬೇಕು ಎಂಬ ಬೇಡಿಕೆ ಇರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಆ ರೀತಿ ಎಲ್ಲಿಯೂ ನಡೆದಿರುವ ಪ್ರಸ್ತಾವನೆಗಳಿಲ್ಲ. ಐದು ಮೀಸಲು ಕ್ಷೇತ್ರಗಳಿವೆ. ಅಲ್ಲಿ ಟಿಕೆಟ್ ಕೊಡುತ್ತಾರೆ ಎಂದರು. ಇಲ್ಲಿನ ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣದಲ್ಲಿ ಪ್ರತಿದಿನವೂ ಹೊಸ ಹೊಸ ಸುಳಿವು, ಮಾಹಿತಿಗಳು ದೊರೆಯುತ್ತಿವೆ. ತನಿಖೆ ತೀವ್ರಗತಿಯಲ್ಲಿ ನಡೆಯುತ್ತಿದೆ. ಅದನ್ನು ಮುಂದಿಟ್ಟುಕೊಂಡೇ ಕಾರ್ಯಾಚರಣೆ ನಡೆಯುತ್ತಿದೆ. ಎನ್‍ಐಎ ಸಿಸಿಬಿ ಪೊಲೀಸರು ಜಂಟಿಯಾಗಿ ಆರೋಪಿಯ ಬೆನ್ನತ್ತಿದ್ದಾರೆ ಎಂದರು.

ವಿಧ್ವಂಸಕ ಕೃತ್ಯಗಳಿಗೆ ಜೈಲಿನಿಂದಲೇ ಸಂಚು ನಡೆಸಿರುವ ಚರ್ಚೆಗಳಾಗುತ್ತಿವೆ. ಎನ್‍ಐಎ ಕೂಡ ಇದನ್ನು ಗಮನಿಸಿದೆ. ಜೈಲಿನಲ್ಲಿನ ಚಟುವಟಿಕೆಗಳನ್ನು ನಿಯಂತ್ರಿಸಲು ಕೆಲವು ಸಲಹೆಗಳನ್ನು ಮಾಡಲಾಗಿದೆ ಎಂದು ಹೇಳಿದರು. ವಿಧಾನಸೌಧದಲ್ಲಿ ಪಾಕಿಸ್ತಾನದ ಪರ ಜಿಂದಾಬಾದ್ ಘೋಷಣೆ ಕೂಗಿದ ಪ್ರಕರಣದಲ್ಲಿ ಕಾನೂನು ರೀತಿಯ ಕ್ರಮ ಕೈಗೊಂಡಿದ್ದೇವೆ. ಕಾಂಗ್ರೆಸ್‍ನ ರಾಜ್ಯಸಭಾ ಸದಸ್ಯ ನಾಸಿರ್ ಹುಸೇನ್‍ಗೆ ಪ್ರಮಾಣ ವಚನ ಬೋಧಿಸಬಾರದು ಎಂದು ನಿವೃತ್ತ ಅಧಿಕಾರಿಗಳು ಪತ್ರ ಬರೆಯುವುದನ್ನು ತಡೆಯಲಿಕ್ಕೆ ಸಾಧ್ಯವಿಲ್ಲ. ಬಿಜೆಪಿಯವರು ಹೇಳಿದಾಕ್ಷಣ ನಾಸಿರ್ ಹುಸೇನ್ ಮೇಲೆ ಪ್ರಕರಣ ದಾಖಲಿಸಲು ಸಾಧ್ಯವಿಲ್ಲ ಎಂದರು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನಖರ್ಗೆ ಚುನಾವಣೆಯಲ್ಲಿ ಸ್ರ್ಪಧಿಸುವ ಬಗ್ಗೆ ನಾವ್ಯಾರೂ ಅಭಿಪ್ರಾಯ ಹೇಳುವುದು ಸರಿಯಲ್ಲ. ಹಿರಿಯರಾದ ಅವರೇ ಖುದ್ದು ನಿರ್ಧಾರ ತೆಗೆದುಕೊಳ್ಳಬೇಕು ಎಂದು ಹೇಳಿದರು. ತುಮಕೂರು ಲೋಕಸಭಾ ಕ್ಷೇತ್ರ ಗೆಲ್ಲುವ ಕ್ಷೇತ್ರ. ಅದನ್ನು ಉಳಿಸಿಕೊಳ್ಳಲು ಎಲ್ಲರೂ ಒಟ್ಟಾಗಿ ಕೆಲಸ ಮಾಡಲು ಪ್ರಯತ್ನಿಸುತ್ತೇವೆ. ಬಹಳಷ್ಟು ಮಂದಿ ಟಿಕೆಟ್ ಆಕಾಂಕ್ಷಿಗಳಾಗಿದ್ದರು. ಅವರಿಗೆ ಅಸಮಾಧಾನ ಸಹಜ. ಪಕ್ಷದ ಹಿತದೃಷ್ಟಿಯಿಂದ ಅವರ ಜೊತೆ ಮಾತುಕತೆ ನಡೆಸಿ ಮುಂದಿನ ದಿನಗಳಲ್ಲಿ ಅವಕಾಶ ದೊರೆಯಲಿದೆ ಎಂದು ಭರವಸೆ ನೀಡಿ ಮನವೊಲಿಸುತ್ತೇವೆ ಎಂದರು.

ಕಾಂಗ್ರೆಸ್ ಪಕ್ಷ 2 ಬಾರಿ ಸ್ಕ್ರೀನಿಂಗ್ ಕಮಿಟಿ ಸಭೆ ನಡೆಸಿ ಕೆಪಿಸಿಸಿ ಅಧ್ಯಕ್ಷರು ಯಾರ ಹೆಸರಿಗೆ ಶಿಫಾರಸ್ಸು ಮಾಡಿದ್ದರೋ ಅವರಿಗೆ ಹೈಕಮಾಂಡ್ ಟಿಕೆಟ್ ಕೊಟ್ಟಿದೆ. ಭವಿಷ್ಯದ ಹಿತದೃಷ್ಟಿಯಿಂದ ಇದನ್ನು ನಾವು ಒಪ್ಪಿಕೊಂಡು ಕೆಲಸ ಮಾಡಬೇಕು ಎಂದು ಹೇಳಿದರು.

RELATED ARTICLES

Latest News