Friday, May 24, 2024
Homeರಾಜ್ಯಸ್ವಪಕ್ಷೀಯರ ವಿರುದ್ಧವೇ ಶೋಭಾ ಕರದ್ಲಾಂಜೆ ಆರೋಪ

ಸ್ವಪಕ್ಷೀಯರ ವಿರುದ್ಧವೇ ಶೋಭಾ ಕರದ್ಲಾಂಜೆ ಆರೋಪ

ಬೆಳಗಾವಿ,ಮಾ.9- ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಉಡುಪಿ- ಚಿಕ್ಕಮಗಳೂರು ಕ್ಷೇತ್ರದಿಂದ ನನಗೆ ಟಿಕೆಟ್ ಕೈ ತಪ್ಪಿಸಲು ನಮ್ಮ ಪಕ್ಷದಲ್ಲೇ ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿದೆ ಎಂದು ಸಚಿವೆ ಶೋಭಾ ಕರದ್ಲಾಂಜೆ ಅವರು, ಸ್ವಪಕ್ಷೀಯರ ವಿರುದ್ಧವೇ ಸ್ಪೋಟಕ ಆರೋಪ ಮಾಡಿದ್ದಾರೆ. ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಲೋಕಸಭಾ ಚುನಾವಣೆಯ ಟಿಕೆಟ್ ತಪ್ಪಿಸಲು ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಪಿತೂರಿ ನಡೆಯುತ್ತಿದೆ. ಇದರ ಹಿಂದೆ ಯಾರಿದ್ದಾರೆ ಎಂಬುದು ನಮಗೂ ಗೊತ್ತಿದೆ ಎಂದು ತಿರುಗೇಟು ನೀಡಿದರು.

ಪಕ್ಷದ ಕೆಲಸ ಕೊಡಲಿ, ಸರ್ಕಾರದ ಕೆಲಸ ಕೊಡಲಿ ಪ್ರಮಾಣಿಕ ಸೇವೆ ಸಲ್ಲಿಸಿದ ಸಂತೃಪ್ತಿ ನನಗಿದೆ. ಇದು ಎಲ್ಲರಿಗೂ ಅನ್ವಯ ಆಗುತ್ತದೆ. ಕೆಲಸ ಮಾಡಿದವರಿಗೆ ಅವಕಾಶ ಸಿಕ್ಕಿಯೇ ಸಿಗುತ್ತದೆ. ಜಾತಿ ಸಮೀಕರಣ ಕಾರಣಕ್ಕೆ ಕೆಲ ಸಂದರ್ಭದಲ್ಲಿ ಇದು ವ್ಯತ್ಯಾಸ ಆಗಬಹುದಷ್ಟೇ. ನಮ್ಮ ಶ್ರಮ, ನಮ್ಮ ಕೆಲಸವನ್ನು ಹೈಕಮಾಂಡ್ ಗುರುತಿಸುತ್ತೆ ಎಂಬುದಕ್ಕೆ ನಾನೇ ಉದಾಹರಣೆ. ನನ್ನ ವಿರುದ್ಧ ನಡೆಯುತ್ತಿರುವ ಪಿತೂರಿಯಿಂದ ನನಗೆ ಅನುಕೂಲ ಆಗಲಿದೆ.

ಪಿತೂರಿ ಮಾಡಿದಾಗಲೇ ಹೈಕಮಾಂಡ್ ನಮ್ಮ ಬಗ್ಗೆ ಗಮನ ಕೊಡುತ್ತದೆ. ವಿರೋಧ ಏಕೆ ಮಾಡುತ್ತಿದ್ದಾರೆ ಎಂಬುದರ ವರದಿ ತರಿಸಿಕೊಳ್ಳುತ್ತಾರೆ, ಆಗ ಸತ್ಯ ಗೊತ್ತಾಗುತ್ತದೆ. ನನ್ನ ಕ್ಷೇತ್ರದಲ್ಲಿ ನಾನು ಸಾಕಷ್ಟು ಕೆಲಸ ಮಾಡಿದ್ದೇನೆ, ಅಭಿವೃದ್ಧಿ ಆಧಾರದ ಮೇಲೆ ಮತ ಕೇಳುತ್ತೇನೆ ಎಂದು ಅವರು ಹೇಳಿದ್ದಾರೆ. ಯಾವಾಗ ವಿರೋಧ ವ್ಯಕ್ತವಾಗುತ್ತದೆಯೋ ಆಗಲೇ ನಮ್ಮ ನಾಯಕರು ನಮ್ಮ ಬಗ್ಗೆ ಮಾಹಿತಿ ಕಲೆ ಹಾಕುತ್ತಾರೆ. ನಮ್ಮವರು ವಿರೋಧ ಮಾಡಿದ ಕಾರಣಕ್ಕೆ ನನಗೆ ಅನುಕೂಲ ಆಗಿದೆ. ಇಲ್ಲವಾದರೆ ಶೋಭಾ ಒಳ್ಳೆಯ ಕೆಲಸ ಮಾಡಿದ್ದಾರೆ ಎಂದಷ್ಟೇ ಹೇಳುತ್ತಿದ್ದರು ಎಂದು ಮಾರ್ಮಿಕವಾಗಿ ನುಡಿದರು.

ನನ್ನನ್ನು ಏಕೆ ವಿರೋಧ ಮಾಡುತ್ತಿದ್ದಾರೆ ಎಂದು ಪಕ್ಷದ ನಾಯಕರೂ ಮಾಹಿತಿ ಕಲೆ ಹಾಕಿದಾಗಲೇ ಇದರ ಹಿಂದಿನ ಸತ್ಯ ಗೊತ್ತಾಗುತ್ತದೆ. ನಮ್ಮ ವ್ಯಕ್ತಿತ್ವವೇನು? ನಮ್ಮ ಅಭಿವೃದ್ಧಿ ಕೆಲಸಗಳು ಏನೆಂಬುದು ತಿಳಿಯಲಿದೆ. ಚುನಾವಣೆ ಸಮಯ ಬಹಳಷ್ಟು ಸೂಕ್ಷ್ಮತೆಯಿಂದ ಕೂಡಿರುತ್ತದೆ. ಮಾಹಿತಿ ಸಂಗ್ರಹದಿಂದ ನನಗೆ ಅನುಕೂಲ ಆಗಲಿದೆಯೇ ಹೊರತು ಕೆಟ್ಟದಾಗಲ್ಲ. ಅದಕ್ಕಾಗಿ ನಮ್ಮ ಹೈಕಮಾಂಡ್ ಬಗ್ಗೆ ನನಗೆ ನಂಬಿಕೆಯಿದೆ, ಕೆಲಸದ ಆಧಾರದ ಮೇಲೆ ಟಿಕೆಟ್ ಸಿಗುತ್ತದೆ ಎಂದು ಭರವಸೆ ವ್ಯಕ್ತಪಡಿಸಿದರು.

ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳನ್ನು ಮುಂದಿಟ್ಟುಕೊಂಡು ಮತ ಕೇಳಲು ಹೊರಟಿದೆ. ಬಿಜೆಪಿ ಯಾವ ಮಾನದಂಡ ಇಟ್ಟುಕೊಂಡು ಲೋಕಸಭೆಯಲ್ಲಿ ಮತ ಕೇಳಲಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಶೋಭಾ, ಬಿಜೆಪಿಗೆ ಅಭಿವೃದ್ಧಿಯೇ ಮಾನದಂಡ. 10 ವರ್ಷಗಳ ಅಭಿವೃದ್ಧಿಯ ಆಧಾರದ ಮೇಲೆ ಮತ ಕೇಳುತ್ತೇವೆ. ದೇಶದಲ್ಲಿ ಆದಂಥ ಮೂಲಸೌಕರ್ಯ ಅಭಿವೃದ್ಧಿ, ಗ್ರಾಮೀಣ ಭಾಗಕ್ಕೆ ಸಿಕ್ಕ ನೆರವು ಇದು ನಮ್ಮ ಶಕ್ತಿ. ನರೇಂದ್ರ ಮೋದಿ ಅವರ ಕಾರ್ಯಕ್ರಮಗಳು, ದೇಶದ ಬಗ್ಗೆ ಅವರಿಗಿರುವ ಕಳಕಳಿ, ದೇಶದ ರಕ್ಷಣೆ ಮತ್ತು ಅಭಿವೃದ್ಧಿ ಬಗ್ಗೆ ಮೋದಿಗಿರುವ ದೂರದೃಷ್ಟಿ, ವಿದೇಶದಲ್ಲಿರುವ ಭಾರತೀಯರಿಗೆ ಗೌರವದ ದೂರದೃಷ್ಟಿ ಮೇಲೆ ಮತ ಕೇಳುತ್ತೇವೆ ಎಂದು ಹೇಳಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಬಹಳಷ್ಟು ಹಾಲಿ ಸಂಸದರಿಗೆ ಟಿಕೆಟ್ ಕೈ ತಪ್ಪಲಿದೆಯೇ ಎಂಬ ಚರ್ಚೆಯ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ನಮಗ್ಯಾರಿಗೂ ಗೊತ್ತಿಲ್ಲ. ಗೆಲ್ಲುವ ಪಕ್ಷದಿಂದ ಬಹಳಷ್ಟು ಜನರು ಟಿಕೆಟ್ ಕೇಳುವುದು ಸಹಜ, ಅದು ತಪ್ಪಲ್ಲ. ಹಲವು ವರ್ಷಗಳಿಂದ ಪಕ್ಷಕ್ಕಾಗಿ ದುಡಿದ ನಮ್ಮ ಕಾರ್ಯಕರ್ತರಿಗೆ ಟಿಕೆಟ್ ಕೇಳುವ ಹಕ್ಕಿದೆ ಎಂದು ಸಮರ್ಥಿಸಿಕೊಂಡರು. ಹಾಲಿ ಸಂಸದರಿಗೆ ಟಿಕೆಟ್ ಮಿಸ್ ಆಗುತ್ತೆಂಬುದನ್ನು ಪ್ರಧಾನಿಯೂ ಹೇಳಿಲ್ಲ, ನಡ್ಡಾ ಅವರೂ ಹೇಳಿಲ್ಲ, ಶಾ ಕೂಡ ಹೇಳಿಲ್ಲ. ಇವೆಲ್ಲ ಊಹಾಪೋಹ ಎನಿಸುತ್ತದೆ, ಮೂರ್ನಾಲ್ಕು ದಿನಗಳಲ್ಲಿ ಪಟ್ಟಿ ಬಿಡುಗಡೆ ಆಗಲಿದೆ, ಆಗ ಸತ್ಯ ಹೊರಬರುತ್ತದೆ ಎಂದು ಶೋಭಾ ಹೇಳಿದ್ದಾರೆ.

ಚುನಾವಣೆ ಸಂದರ್ಭದಲ್ಲಿ ಸಿಲಿಂಡರ್, ಪೆಟ್ರೊಲ್ ಬೆಲೆ ಇಳಿಕೆ ಮಾಡಿದ ಕುರಿತು, ಬೆಲೆ ಇಳಿಕೆಗೂ ಚುನಾವಣೆಗೂ ಸಂಬಂಧವಿಲ್ಲ. ಗ್ಯಾಸ, ಪೆಟ್ರೋಲ್‍ನಲ್ಲಿ ನಾವಿನ್ನೂ ಸ್ವಾವಲಂಬಿ ಆಗಿಲ್ಲ. ಈ ವಿಚಾರದಲ್ಲೂ ಸ್ವಾವಲಂಬನೆ ಸಾಧಿಸಲು ಮೋದಿ ಅವರು ಯೋಜನೆ ರೂಪಿಸುತ್ತಿದ್ದಾರೆ. ಪೆಟ್ರೋಲಿಯಂ ಉತ್ಪನ್ನಗಳು, ರಸಗೊಬ್ಬರ, ಖಾದ್ಯ ತೈಲದಲ್ಲಿ ನಾವು ಸ್ವಾವಲಂಬಿ ಆಗಿಲ್ಲ. ಈ ಎಲ್ಲವನ್ನೂ ನಾವು ವಿದೇಶದಿಂದ ಸರಬರಾಜು ಮಾಡಿಕೊಳ್ಳಬೇಕಾಗುತ್ತದೆ. ವಿದೇಶಿ ಮಾರುಕಟ್ಟೆ ಆಧಾರದ ಮೇಲೆ ಬೆಲೆ ನಿಗದಿ ಆಗುತ್ತದೆ. ಇದರಲ್ಲೂ ನಾವು ಸ್ವಾವಲಂಬನೆ ಸಾಧಿಸಲು ಪ್ರಧಾನಿ ಮೋದಿ ಸಂಕಲ್ಪ ಮಾಡಿದ್ದಾರೆ ಎಂದರು.

RELATED ARTICLES

Latest News