ಬಳ್ಳಾರಿ,ಫೆ.10- ಲೋಕಸಭೆ ಚುನಾವಣೆ ಸಮೀಪಿಸುತ್ತಿರುವಂತೆ ದಾಳಿ ಪ್ರಕರಣಗಳು ಮುಂದುವರೆದಿದ್ದು, ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿದ ಆರೋಪದ ಹಿನ್ನಲೆಯಲ್ಲಿ ಕಾಂಗ್ರೆಸ್ ಶಾಸಕ ನಾರಾ ಭರತ್ ರೆಡ್ಡಿ ನಿವಾಸ ಮತ್ತು ಕಚೇರಿ ಮೇಲೆ ಜಾರಿ ನಿರ್ದೇಶನಾಲಯ(ಇಡಿ) ದಾಳಿ ನಡೆಸಿದೆ. ಬಳ್ಳಾರಿ, ಬೆಂಗಳೂರು, ಚೆನ್ನೈ ಸೇರಿದಂತೆ ಒಟ್ಟು 15 ಕಡೆ ಇಡಿ ಅಧಿಕಾರಿಗಳು ದಾಳಿ ನಡೆಸಿ ಬ್ಯಾಂಕ್ ವಹಿವಾಟಿನ ದಾಖಲೆಗಳು ಸೇರಿದಂತೆ ಕೆಲವು ಮಹತ್ವದ ದಾಖಲೆ ಪತ್ರಗಳನ್ನು ವಶಕ್ಕೆ ಪಡೆದಿದ್ದಾರೆ.
ಬಳ್ಳಾರಿ ನಗರದ ನೆಹರು ಕಾಲೋನಿಯಲ್ಲಿರುವ ಭರತ್ ರೆಡ್ಡಿ ನಿವಾಸ, ತಂದೆ ಸೂರ್ಯ ನಾರಾಯಣ ರೆಡ್ಡಿ, ಚಿಕ್ಕಪ್ಪ ನಾರಾ ಪ್ರತಾಪ್ ರೆಡ್ಡಿ, ಸೋದರ ಮಾವ ಅನಿಲ್ ಹಾಗೂ ಸಂಬಂಧಿ ರತ್ನ ಬಾಬು ಅವರ ಮೇಲೆ ದಾಳಿ ನಡೆಸಲಾಗಿದೆ. ಬೆಳಗ್ಗೆ 6.30ಕ್ಕೆ ಬೆಂಗಳೂರಿಗೆ ಆಗಮಿಸಿದ ಇಡಿ ತಂಡ ಸ್ಥಳೀಯ ಪೊಲೀಸರು ಮತ್ತು ಸಿಆರ್‍ಪಿಎಫ್ ಭದ್ರತೆಯಡಿ ಭರತ್ ರೆಡ್ಡಿ ಒಡೆತನಕ್ಕೆ ಸೇರಿದ ಮನೆ, ಕಚೇರಿ, ಸಂಬಂಧಿಗಳು, ಸೋದರ ಮಾವ ಹೀಗೆ 14 ಕಡೆ 20ಕ್ಕೂ ಹೆಚ್ಚು ಅಧಿಕಾರಿಗಳು ಪ್ರತ್ಯೇಕವಾಗಿ ನಾಲ್ಕು ತಂಡಗಳಾಗಿ ದಾಳಿ ನಡೆಸಿದ್ದಾರೆ.
ಇಪಿಎಫ್ ಗರಿಷ್ಠ ಬಡ್ಡಿದರ ಶೇ.8.25ಕ್ಕೆ ನಿಗದಿ
ಮೂಲತಃ ಗ್ರಾನೈಟ್ ವ್ಯಾಪಾರ ಮಾಡುತ್ತಿರುವ ಭರತ್ ರೆಡ್ಡಿ ಹಾಗೂ ಅವರ ಕುಟುಂಬದವರು ಆದಾಯಕ್ಕಿಂತ ಹೆಚ್ಚಿನ ಆಸ್ತಿ ಸಂಪಾದನೆ ಮಾಡಿದ್ದಾರೆಂಬ ಆರೋಪದ ಹಿನ್ನಲೆಯಲ್ಲಿ ದಾಳಿ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಸಿಆರ್‍ಪಿಎಫ್ ಭದ್ರತೆಯಲ್ಲಿ ಬೆಳಗ್ಗೆ ಏಕಕಾಲಕ್ಕೆ ನಗರದಲ್ಲಿ 14 ಕಡೆ ದಾಳಿ ನಡೆಸಿದ್ದಾರೆ. ಬಳ್ಳಾರಿ ಗಾಂಧಿನಗರದ ರಾಘವೇಂದ್ರ ಎಂಟರ್‍ಪ್ರೈಸಸ್‍ನ ಕಚೇರಿಯಲ್ಲಿ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ದಾಳಿ ಸಂದರ್ಭದಲ್ಲಿ ಅವರು ತಮ್ಮ ನಿವಾಸದಲ್ಲಿಯೇ ಇದ್ದರು. ಇನ್ನು ಬೆಂಗಳೂರಿನ ಇಂದಿರಾನಗರದಲ್ಲಿರುವ ಭರತ್ ರೆಡ್ಡಿಯ ಸೋದರ ಮಾವ ರತ್ನಬಾಬು ಒಡೆತನಕ್ಕೆ ಸೇರಿರುವ ಕಚೇರಿ ಮತ್ತು ನಿವಾಸದ ಮೇಲೂ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಚೆನ್ನೈನಲ್ಲಿರುವ ಭರತ್ ರೆಡ್ಡಿ ಒಡೆತನದ ಕಚೇರಿಗೂ ಇಡಿ ಬಿಸಿ ತಟ್ಟಿದೆ. ಹೀಗೆ ಇಡಿ ದಾಳಿ ನಡೆಸಿ ದಾಖಲೆಗಳನ್ನು ವಶಕ್ಕೆ ತೆಗೆದುಕೊಂಡಿದೆ. ಕಳೆದ ಹಲವಾರು ವರ್ಷಗಳಿಂದ ಗ್ರಾನೈಟ್ ಉದ್ಯಮಿಯಾಗಿರುವ ಭರತ್ ರೆಡ್ಡಿ ಅವರು ಇತ್ತೀಚೆಗೆ ಅಕ್ರಮ ಆಸ್ತಿ ಸಂಪಾದನೆ ಮಾಡಿದ್ದಾರೆಂಬ ಆರೋಪ ಕೇಳಿಬಂದಿತ್ತು. ಆದಾಯಕ್ಕಿಂತ ಹೆಚ್ಚಿನ ಆಸ್ತಿ ಸಂಪಾದನೆ ಮಾಡಿದ ಹಿನ್ನಲೆಯಲ್ಲಿ ಈ ದಾಳಿ ಮಾಡಿರುವ ಸಾಧ್ಯತೆ ಇದೆ ಎನ್ನಲಾಗಿದೆ. ದಾಳಿ ಕುರಿತು ಇಡಿ ಅಧಿಕಾರಿಗಳು ಈವರೆಗೂ ಯಾವುದೇ ಮಾಹಿತಿಯನ್ನು ಬಿಡುಗಡೆ ಮಾಡಿಲ್ಲ.