ಬೆಂಗಳೂರು,ನ.15- ಬಿಜೆಪಿ ರಾಜ್ಯಾಧ್ಯಕ್ಷರಾಗಿ ಅತ್ತ ಬಿ.ವೈ.ವಿಜಯೆಂದ್ರ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸುವ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಲೇವಡಿ ಮಾಡಿರುವ ಕಾಂಗ್ರೆಸ್, ವಿಜಯೇಂದ್ರ ಕೇವಲ ಬಿಎಸ್‍ವೈ ಬಣಕ್ಕೆ ಮಾತ್ರ ಅಧ್ಯಕ್ಷರೇ ಎಂದು ಪ್ರಶ್ನಿಸಿದೆ.
ಬಿಜೆಪಿಯ ಅಧಿಕೃತ ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಈವರೆಗೂ ನಳೀನ್ ಕುಮಾರ್ ಕಟೀಲ್ ಅವರ ಫೋಟೋವೇ ಉಳಿದಿರುವುದನ್ನು ಕಾಂಗ್ರೆಸ್ ಪ್ರಶ್ನಿಸಿದೆ. ಪೋಸ್ಟರ್‍ನಲ್ಲಿ ಪ್ರಧಾನಿ ನರೇಂದ್ರ ಮೋದಿ, ನಂತರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ನಿರ್ಗಮಿತ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರ ಭಾವಚಿತ್ರಗಳು ಕಂಡು ಬಂದಿವೆ.
ಇದನ್ನು ಪೋಸ್ಟ್ ಮಾಡಿರುವ ಕಾಂಗ್ರೆಸ್, ಯಡಿಯೂರಪ್ಪನವರ ಮಗ ಅಧ್ಯಕ್ಷನಾಗಿರುವುದು ಸಂತೋಷ ಕೂಟಕ್ಕೆ ತೀವ್ರ ಅಸಹನೆ ಇರುವುದು ಜಗತ್ತಿಗೆ ತಿಳಿದಿರುವ ಸತ್ಯ.ಅದೇ ಸಂತೋಷ ಕೂಟದ ಭಾಗವಾಗಿರುವ ಬಿಜೆಪಿ ಸಾಮಾಜಿಕ ಜಾಲತಾಣಕ್ಕೂ ವಿಜಯೆಂದ್ರರನ್ನು ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದಿದೆ.
ವಿಜಯೆಂದ್ರ ಅಧ್ಯಕ್ಷರಾಗಿ ನೇಮಕವಾಗಿ ಮೂರ್ನಾಲ್ಕು ದಿನ ಕಳೆದಾಗಿದೆ, ಪದಗ್ರಹಣವೂ ಆಗಿದೆ, ಆದರೆ ಇನ್ನೂ ಸಹ ಬಿಜೆಪಿ ಪಕ್ಷದ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ನಳಿನ್ ಕುಮಾರ್ ಕಟೀಲ್ ಕಂಗೊಳಿಸುತ್ತಿದ್ದಾರೆ. ಬಿಜೆಪಿ ಪಕ್ಷ ವಿಜಯೆಂದ್ರರನ್ನು ಒಪ್ಪಿಕೊಂಡಿಲ್ಲ ಎಂಬುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕೆ ? ವಿಜಯೆಂದ್ರ ಬಿಎಸ್‍ವೈ ಬಣಕ್ಕೆ ಮಾತ್ರ ಅಧ್ಯಕ್ಷರೆ ಎಂದು ಲೇವಡಿ ಮಾಡಲಾಗಿದೆ.