ಬೆಂಗಳೂರು,ಮಾ.8- ಲೋಕಸಭೆ ಚುನಾವಣೆಯ ಕಣ ರಂಗೇರಲಾರಂಭಿಸಿದೆ. ಕಾಂಗ್ರೆಸ್ ಕಳೆದ ಮೂರು ದಿನಗಳಿಂದ ದೆಹಲಿಯಲ್ಲಿ ನಡೆಸಿದ ಕಸರತ್ತು ತಾರ್ಕಿಕ ಅಂತ್ಯಕ್ಕೆ ಬಂದಿದೆ. ಅದರ ಪ್ರಕಾರ ಮೊದಲ ಪಟ್ಟಿಯನ್ನು ಕಾಂಗ್ರೆಸ್ ಬಿಡುಗಡೆ ಮಾಡಿದ್ದು, 39 ಮಂದಿಯ ಹೆಸರನ್ನು ಪ್ರಕಟಿಸಿದೆ. ಬಿಜೆಪಿ 195 ಕ್ಷೇತ್ರಗಳ ಅಭ್ಯರ್ಥಿಗಳ ತನ್ನ ಮೊದಲ ಪಟ್ಟಿಯನ್ನು ಪ್ರಕಟಿಸಿ ಐದು ದಿನಗಳ ನಂತರ ಇಂದು ಕಾಂಗ್ರೆಸ್ ತನ್ನ ಮೊದಲ ಪಟ್ಟಿಯಲ್ಲಿ ಪ್ರಕಟಿಸಿದೆ. ಅದರ ಪ್ರಕಾರ ಪಕ್ಷದ ವರಿಷ್ಠ ನಾಯಕ ರಾಹುಲ್್ಗ ಗಾಂಧಿ ಕೇರಳದ ವೈನಾಡು ಲೋಕಸಭಾ ಕ್ಷೇತ್ರದಿಂದ ಮರು ಸ್ಪರ್ಧೆ ಮಾಡಲಿದ್ದಾರೆ.
ಇಂದು ದೆಹಲಿಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಅಜಯ್ ಮಖೇನ್ ಮತ್ತು ಪವನ್ ಖೇರಾ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ರಾಜ್ಯದ ಏಳು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದ್ದಾರೆ.
ಪ್ರಕಟಿತ ಪಟ್ಟಿಯಲ್ಲಿ ರಾಜ್ಯದ ಕ್ಷೇತ್ರಗಳಲ್ಲಿ ವಲಸಿಗರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ತುಮಕೂರು ಕ್ಷೇತ್ರದಿಂದ ಇತ್ತೀಚೆಗಷ್ಟೆ ಕಾಂಗ್ರೆಸ್ ಸೇರಿದ ಮಾಜಿ ಸಂಸದ ಎಸ್.ಪಿ.ಮುದ್ದ ಹನುಮೇಗೌಡರಿಗೆ, ಮಂಡ್ಯದಿಂದ ಉದ್ಯಮಿ ಸ್ಟಾರ್ ಚಂದ್ರ ಕರೆಯಲ್ಪಡುವ ವೆಂಕಟರಾಮೇಗೌಡರಿಗೆ ಮಣೆ ಹಾಕಲಾಗಿದೆ.

ಬಿಜಾಪುರ ಲೋಕಸಭಾ ಕ್ಷೇತ್ರದಿಂದ ಮಾಜಿ ಶಾಸಕ ರಾಜು ಅಲಗೂರು, ಹಾಸನ ಕ್ಷೇತ್ರದಿಂದ ಎಂ.ಶ್ರೇಯಷ್ ಪಟೇಲ್, ಬೆಂಗಳೂರು ಗ್ರಾಮಾಮತರ ಕ್ಷೇತ್ರಕ್ಕೆ ಹಾಲಿ ಸಂಸದ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಸಹೋದರ ಡಿ.ಕೆ.ಸುರೇಶ್, ಹಾವೇರಿ ಕ್ಷೇತ್ರದಿಂದ ಅನಂತಸ್ವಾಮಿ ಗಡ್ಡದೇವರ ಮಠ ಟಿಕೆಟ್ ಪಡೆದುಕೊಂಡಿದ್ದಾರೆ.

ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಅವರ ಪತ್ನಿ, ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ಪುತ್ರಿ, ಸಚಿವ ಮಧು ಬಂಗಾರಪ್ಪ ಅವರ ಸಹೋದರಿ ಗೀತಾ ಶಿವರಾಜ್ ಕುಮಾರ್ ಅವಕಾಶ ಪಡೆದಿದ್ದಾರೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಗೀತಾ ಶಿವರಾಜ್ ಕುಮಾರ್ ಜೆಡಿಎಸ್ ಅಭ್ಯರ್ಥಿಯಾಗಿ ಸ್ಫರ್ಧಿಸಿದ್ದರು.





ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಮಾಜಿ ಸಂಸದ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಬಿ.ಎನ್.ಚಂದ್ರಪ್ಪ ಅವರಿಗೆ ಟಿಕೆಟ್ ಘೋಷಣೆಯಾಗಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತರಾಗಿರುವ ಮಾಜಿ ಸಚಿವ ಹೆಚ್.ಆಂಜನೇಯ ಅವರ ಲಾಬಿಯಿಂದಾಗಿ ತಡೆಯಿಡಯಲ್ಪಟ್ಟಿದೆ. ಇನ್ನೂ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಇನ್ನೂ ಕಾಂಗ್ರೆಸ್ ಸೇರದೆ ಇರುವ ಬಿಜೆಪಿಯಲ್ಲಿ ಇರುವ ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಅವರಿಗೆ ಟಿಕೆಟ್ ನೀಡುವುದಾಗಿ ತಿಳಿಸಲಾಗಿದ್ದು, ಹೆಸರು ಪ್ರಕಟಗೊಳಿಸುವುದನ್ನು ತಡೆ ಹಿಡಿಯಲಾಗಿದೆ. ತೆಲಂಗಾಣ ಕ್ಷೇತ್ರದ ಮೆಹಬೂಬ್ನಗರದ ಚೆಲ್ಲಾ ವಂಶಿ ಚಂದರೆಡ್ಡಿ ಅವರ ಹೆಸರನ್ನು ತಡೆ ಹಿಡಿದಿದೆ. ಉಳಿದಂತೆ ಚತ್ತೀಸ್ಗಡ, ಕೇರಳ, ಮೇಘಾಲಯ ಮತ್ತು ತೆಲಂಗಾಣ ರಾಜ್ಯಗಳ ಒಟ್ಟು 39 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಕೆ.ಸಿ.ವೇಣುಗೋಪಾಲ್ ಮಾತನಾಡಿ, ನಾವು ಚುನಾವಣೆಯ ಗುಂಗಿನಲ್ಲಿದ್ದೇವೆ. ಮೊದಲ ಪಟ್ಟಿಯಲ್ಲಿ ಛತ್ತೀಸ್ಗಡದ ಮಾಜಿ ಮುಖ್ಯಮಂತ್ರಿ ಭೂಪೇಶ್ ಬಗೇಲ್ರಿಗೆ ಟಿಕೆಟ್ ನೀಡಲಾಗಿದೆ. 39 ಅಭ್ಯರ್ಥಿಗಳಲ್ಲಿ ಸಾಮಾನ್ಯ ವರ್ಗದ 15 ಮಂದಿ, ಎಸ್ಎಸಿ, ಎಸ್ಟಿ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ಸಮುದಾಯದ 24 ಮಂದಿಗೆ ಟಿಕೆಟ್ ನೀಡಲಾಗಿದೆ ಎಂದು ಹೇಳಿದರು