Friday, May 23, 2025
Homeರಾಷ್ಟ್ರೀಯ | Nationalಪರಮೇಶ್ವರ್ ಬಗ್ಗೆ ಇ.ಡಿ. ಗೆ ಮಾಹಿತಿ ನೀಡಿದ್ದೇ ಕಾಂಗ್ರೆಸ್ಸಿಗರು : ಪ್ರಹ್ಲಾದ್ ಜೋಷಿ

ಪರಮೇಶ್ವರ್ ಬಗ್ಗೆ ಇ.ಡಿ. ಗೆ ಮಾಹಿತಿ ನೀಡಿದ್ದೇ ಕಾಂಗ್ರೆಸ್ಸಿಗರು : ಪ್ರಹ್ಲಾದ್ ಜೋಷಿ

Congressmen informed ED about Parameshwar: Prahlad Joshi

ಬೆಂಗಳೂರು,ಮೇ 23 – ಗೃಹಸಚಿವ ಡಾ.ಜಿ.ಪರಮೇಶ್ವರ್ ಅವರ ಬಗ್ಗೆ ಜಾರಿ ನಿರ್ದೇಶನಾಲಯಕ್ಕೆ ಮಾಹಿತಿ ನೀಡಿದ್ದೇ ಕಾಂಗ್ರೆಸಿಗರು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಹೇಳಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಗೃಹಸಚಿವ ಪರಮೇಶ್ವರ್ ಅವರ ಶಿಕ್ಷಣ ಸಂಸ್ಥೆಗಳ ಮೇಲೆ ಎರಡು ದಿನಗಳ ಕಾಲ ನಡೆದ ಇ.ಡಿ. ದಾಳಿ ರಾಜಕೀಯವಾಗಿ ನಾನಾ ರೀತಿಯ ವ್ಯಾಖ್ಯಾನಗಳಿಗೆ ಕಾರಣವಾಗಿತ್ತು.

ಪರಮೇಶ್ವರ್ ಒಬ್ಬ ಸಭ್ಯ ರಾಜಕಾರಣಿ, ದಲಿತ ಮುಖಂಡ, ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ, ಆ ಕಾರಣಕ್ಕೆ ಅವರನ್ನು ಉದ್ದೇಶಪೂರ್ವಕವಾಗಿ ಇಕ್ಕಟ್ಟಿಗೆ ಸಿಲುಕಿಸಲು ಈ ರೀತಿಯ ದಾಳಿ ನಡೆಸಲಾಗಿದೆ ಎಂಬರ್ಥದಲ್ಲಿ ಕಾಂಗ್ರೆಸ್ ಮಾತನಾಡುತ್ತಿದೆ.
ಆರಂಭದಲ್ಲಿ ರನ್ಯಾರಾವ್ ಅವರ ಚಿನ್ನ ಕಳ್ಳಸಾಗಾಣಿಕೆ ಪ್ರಕರಣಕ್ಕೂ ಪರಮೇಶ್ವ‌ರ್ ಗೂ ಸಂಬಂಧವಿದೆ ಎಂಬರ್ಥದಲ್ಲಿ ಹೇಳಿಕೆ ನೀಡಿದ ಬಿಜೆಪಿ ನಾಯಕರು ದಲಿತ ನಾಯಕರ ಮೇಲೆ ಕೇಂದ್ರಸರ್ಕಾರ ತನಿಖಾ ಸಂಸ್ಥೆಗಳನ್ನು ಭೂ ಬಿಡುತ್ತಿದೆ ಎಂದು ಕಾಂಗ್ರೆಸ್ ಬೊಬ್ಬೆ ಹೊಡೆದ ಮೇಲೆ ತಣ್ಣಗಾಗಿದ್ದಾರೆ.

ಈ ನಡುವೆ ಜಾರಿ ನಿರ್ದೇಶನಾಲಯದ ಮೂಲಗಳು ಎಂದು ಉಲ್ಲೇಖಿಸಿ 40 ಲಕ್ಷ ರೂ.ಗಳನ್ನು ರನ್ಯಾರಾವ್ ಅವರ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಗೆ ಪರಮೇಶ್ವರ್ ಅವರ ಶಿಕ್ಷಣ ಸಂಸ್ಥೆ ಪಾವತಿಸಿದೆ ಎಂದು ವರದಿಯಾಗಿತ್ತು. ಚಿನ್ನ ಕಳ್ಳಸಾಗಾಣಿಕೆಯ ಆರೋಪದಲ್ಲಿ ಸಿಲುಕಿಬಿದ್ದ ವ್ಯಕ್ತಿಯ ಜೊತೆ ಪರಮೇಶ್ವರ್ ಅವರ ಒಡನಾಟ ಬೇರೆ ರೀತಿಯ ಚರ್ಚೆಗಳಿಗೆ ಆಸ್ಪದ ನೀಡಿತ್ತು. ಹಣ ವರ್ಗಾವಣೆಯಾಗಿರುವುದು ನಿಜ ಎಂದು ಪರಮೇಶ್ವರ್ ಹೇಳಿರುವುದಾಗಿ ಡಿ.ಕೆ.ಶಿವಕುಮಾರ್ ಬಹಿರಂಗ ಹೇಳಿಕೆ ನೀಡಿದ್ದರು.

ದಾನ-ಧರ್ಮ, ದತ್ತಿ ಹೆಸರಿನಲ್ಲಿ ಶಿಕ್ಷಣ, ಆರೋಗ್ಯ, ಮದುವೆ-ಮುಂಜಿಯಂತಹ ಕಾರ್ಯಕ್ರಮಗಳಿಗೆ ಸಹಾಯ ಮಾಡುತ್ತಿರುತ್ತೇವೆ. ಆ ರೀತಿ ಹಣ ಹೋಗಿರಬಹುದು. ಅದೇನೂ ತಪ್ಪಲ್ಲ ಎಂದು ಡಿ.ಕೆ.ಶಿವಕುಮಾರ್ ಅಡಿಯಾಗಿ ಬಹಳಷ್ಟು ಮಂದಿ ಸಚಿವರು ಸಮರ್ಥಿಸಿಕೊಂಡರು. ಅಲ್ಲಿಗೆ ಇ.ಡಿ. ದಾಳಿ ರಾಜಕೀಯ ಪ್ರೇರಿತ ಎನ್ನುವುದಕ್ಕಿಂತಲೂ ವಸ್ತುನಿಷ್ಠ ಸಾಕ್ಷ್ಯ ಆಧಾರದ ಮೇಲೆ ನಡೆದಿದೆ ಎಂಬುದು ಸ್ಪಷ್ಟವಾಗಿದೆ.

ಈಗ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಹೇಳಿಕೆ ರಾಜಕೀಯವಾಗಿ ಮತ್ತಷ್ಟು ರಾಡಿ ಎಬ್ಬಿಸಿದೆ. ಪರಮೇಶ್ವ‌ರ್ ವಿರುದ್ಧ ಮಾಹಿತಿ ನೀಡಿದ್ದೇ ಕಾಂಗ್ರೆ ಸ್ಸಿಗರು, ಅದು ಯಾರೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಗೊತ್ತಿದೆ. ಚಿನ್ನ ಕಳ್ಳಸಾಗಾಣಿಕೆ ಹಾಗೂ ಅದರ ವಹಿವಾಟನ್ನು ನಿರ್ವಹಿಸುತ್ತಿರುವುದು ಕಾಂಗ್ರೆಸ್‌ ಒಂದು ಗುಂಪು ಎಂದಿದ್ದಾರೆ.
ಈ ಮೂಲಕ ಚಿನ್ನ ಕಳ್ಳಸಾಗಾಣಿಕೆ ಪ್ರಕರಣ ಮತ್ತಷ್ಟು ಕಾಂಗ್ರೆಸ್ಸಿಗರಿಗೆ ಹಗ್ಗದ ಕುಣಿಕೆಯಾಗುವ ಮುನ್ಸೂಚನೆ ನೀಡಿದ್ದಾರೆ.

ಪರಮೇಶ್ವರ್ ಸಭ್ಯ ರಾಜಕಾರಣಿ. ಅವರ ಮೇಲೆ ನಮಗೂ ಗೌರವವಿದೆ ಎಂದು ಹೇಳಿರುವ ಪ್ರಹ್ಲಾದ್ ಜೋಷಿ, ಈ ಹಿಂದೆ ಕೊರಟಗೆರೆಯಲ್ಲಿ ಪರಮೇಶ್ವರ್ ಅವರನ್ನು ಸೋಲಿಸಿದವರು ಮುಖ್ಯಮಂತ್ರಿ ಸ್ಥಾನ ತಪ್ಪಿಸಿದವರು ನಿರಂತರವಾಗಿ ಅವರ ವಿರುದ್ಧ ಸಂಚು ಮಾಡುತ್ತಲೇ ಇದ್ದಾರೆ ಎಂದು ಹೇಳಿದ್ದಾರೆ.

ಕಾಂಗ್ರೆಸ್‌ನಲ್ಲಿರುವ ಪರಮೇಶ್ವರ್ ಅವರನ್ನು ಬಿಜೆಪಿಗೆ ಕರೆದುಕೊಳ್ಳಲು ಸಾಕಷ್ಟು ಪ್ರಯತ್ನಗಳಾಗಿವೆ. ಪರಮೇಶ್ವರ್ ಅವರು ಬಿಜೆಪಿಯ ಬಹಳಷ್ಟು ನಾಯಕರ ಜೊತೆಗೆ ಆತ್ಮೀಯ ಸಂಬಂಧ ಹೊಂದಿದ್ದು, ಕಾಂಗ್ರೆಸ್‌ನ್ ಸಿದ್ಧಾಂತದ ಜೊತೆಗೆ ಬಿಜೆಪಿಯ ಕೆಲವು ಸೈದ್ಧಾಂತಿಕ ನಿಲುವುಗಳಿಗೂ ಆಗಾಗ್ಗೆ ಪರಮೇಶ್ವರ್ ದನಿಗೂಡಿಸುವುದಿದೆ.

ಕಾಂಗ್ರೆಸ್ ಪಕ್ಷದಲ್ಲಿ ಖರ್ಗೆ ಅವರಿಗೆ ಮುಖ್ಯಮಂತ್ರಿ ಸ್ಥಾನ ತಪ್ಪಿಸಲು ಒಂದು ಕಾಲದಲ್ಲಿ ಇದೇ ಪರಮೇಶ್ವರ್ ಅವರನ್ನು ದಾಳವಾಗಿ ಬಳಸಿಕೊಳ್ಳಲಾಗಿತ್ತು. ಪರಮೇಶ್ವರ್ ಎಂಟು ವರ್ಷ ಕೆಪಿಸಿಸಿ ಅಧ್ಯಕ್ಷರಾಗಿ ದಾಖಲೆ ಬರೆದು, ಒಂದು ಬಾರಿ ಪಕ್ಷವನ್ನು ಅಧಿಕಾರಕ್ಕೆ ತಂದರೂ ಕನಿಷ್ಠ ಉಪಮುಖ್ಯಮಂತ್ರಿ ಸ್ಥಾನಕ್ಕಾಗಿ ಅಂಗಲಾಚುವ ಪರಿಸ್ಥಿತಿ ಇದೆ ಎಂಬ ಅಸಮಾಧಾನಗಳು ಪಕ್ಷದ ಹೊರಗೆ ಕೇಳಿಬರುತ್ತಿವೆ.

ಇ.ಡಿ. ದಾಳಿಯಲ್ಲಿ ರನ್ಯಾ ರಾವ್ ಖಾತೆಗೆ ಹಣ ವರ್ಗಾವಣೆಯಾಗಿರುವುದನ್ನು ಹೊರತುಪಡಿಸಿದರೆ ಹೆಚ್ಚಿನ ಮಾಹಿತಿ ಸಿಕ್ಕಿಲ್ಲ ಎಂದು ಹೇಳಲಾಗುತ್ತಿದೆ.
ಆದರೆ ಪರಮೇಶ್ವರ್ ಅವರನ್ನು ಪಕ್ಷಾಂತರಿಸಲು ಪ್ರಯತ್ನಗಳು ಮುಂದುವರೆದಿವೆ ಎಂಬ ಚರ್ಚೆಗಳಿವೆ.

RELATED ARTICLES

Latest News