ಬೆಂಗಳೂರು, ಮಾ. 1- ವಿಧಾನಮಂಡಲದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಬಿಜೆಪಿ, ಜೆಡಿಎಸ್ ಪಕ್ಷಗಳು ಸಾಕಷ್ಟು ಪೂರ್ವ ತಯಾರಿ ನಡೆಸಿರುವ ನಡುವೆಯೇ ಪ್ರತಿತಂತ್ರದ ಭಾಗವಾಗಿ ಕಾಂಗ್ರೆಸ್ ಶಾಸಕಾಂಗ ಸಭೆ ಕರೆಯಲಾಗಿದೆ.
ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡಿದ ಬಳಿಕ ಮಾರನೆಯ ದಿನ ಮಾ.4 ರಂದು ಸಂಜೆ ಕಾಂಗ್ರೆಸ್ ಶಾಸಕಾಂಗ ಸಭೆ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಡೆಯಲಿದೆ. ವಿಧಾನಸಭೆ, ವಿಧಾನಪರಿಷತ್ ಸದಸ್ಯರುಗಳು ಶಾಸಕಾಂಗ ಸಭೆಯಲ್ಲಿ ಭಾಗವಹಿಸಲಿದ್ದಾರೆ.ಶಾಸಕಾಂಗ ಸಭೆಯ ಕಾರ್ಯದರ್ಶಿ ಅಲ್ಲಮಪ್ರಭು ಪಾಟೀಲ್ ಶಾಸಕರಿಗೆ, ಸಂಸದರಿಗೆ, ರಾಜ್ಯ ಸಭಾ ಸದಸ್ಯರಿಗೆ ಕಾಂಗ್ರೆಸ್ ಬೆಂಬಲಿತ ಶಾಸಕರಿಗೂ ಆಹ್ವಾನ ನೀಡಿದ್ದಾರೆ.
ಇತ್ತೀಚೆಗೆ ಕಾಂಗ್ರೆಸ್ ಒಳವಲಯದಲ್ಲಿ ಅಸಮಾಧಾನಗಳು ಮಡುಗಟ್ಟಿವೆ. ಸಚಿವರಾದ ಕೆ.ಎನ್.ರಾಜಣ್ಣ, ಸತೀಶ್ ಜಾರಕಿಹೊಳಿ, ಡಾ.ಜಿ.ಪರಮೇಶ್ವರ್ ಮತ್ತಿತರರು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಬಹಿರಂಗವಾಗಿಯೇ ಹೇಳಿಕೆಗಳನ್ನು ನೀಡಿ ಗೊಂದಲ ಮೂಡಿಸಿದ್ದರು. ನಾಯಕತ್ವ ವಿಚಾರವಾಗಿ ಸಾಕಷ್ಟು ಚರ್ಚೆಗಳಾಗಿ ಕೆಲವರು ಹೈಕಮಾಂಡ್ ಮೆಟ್ಟಿಲನ್ನು ಹತ್ತಿದ್ದರು. ದೆಹಲಿ ನಾಯಕರು ಇಂತಹ ಚಟುವಟಿಕೆಗಳಿಗೆ ಬೆಂಬಲ ನೀಡುವುದಿಲ್ಲ ಎಂದು ಕಟ್ಟಪ್ಪಣೆ ಮಾಡಿದ ಬಳಿಕ ಒಂದಿಷ್ಟು ತಣ್ಣಗಾಗಿದ್ದಾರೆ. ಆದರೆ ಒಳವಲಯದಲ್ಲಿ ಸಾಕಷ್ಟು ಗೊಂದಲಗಳಂತೂ ಉಳಿದಿವೆ.
ಇತ್ತೀಚೆಗೆ ಎಸ್‌ಸಿ/ಎಸ್‌ಟಿ ಸಮುದಾಯದ ಹಣವನ್ನೂ ಅನ್ಯ ಉದ್ದೇಶಗಳಿಗೆ ಬಳಕೆ ಮಾಡಲಾಗಿದೆ ಎಂಬ ಟೀಕೆಗಳು ವ್ಯಾಪಕವಾಗಿದ್ದವು. ಇದನ್ನೇ ನೆಪ ಮಾಡಿಕೊಂಡು ಆಡಳಿತಾರೂಢ ಪಕ್ಷದ ಬಂಗಾರಪೇಟೆ ಶಾಸಕ ನಾರಾಯಣಸ್ವಾಮಿಯವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಪ್ತ ಸಚಿವ ಭೈರತಿ ಸುರೇಶ್ ವಿರುದ್ಧ ವಾಗ್ದಾಳಿ ನಡೆಸಿದರು. ಬಹಳಷ್ಟು ಶಾಸಕರಿಗೆ ಅನುದಾನ ಹಾಗೂ ವರ್ಗಾವಣೆ ವಿಚಾರವಾಗಿ ಸಚಿವರ ವಿರುದ್ಧ ಅಸಮಾಧಾನಗಳಿವೆ.
ಇದರ ಬಗ್ಗೆ ವಿಧಾನಮಂಡಲದಲ್ಲಿ ಪ್ರಸ್ತಾಪಿಸಿ ಸರ್ಕಾರಕ್ಕೆ ಮುಜುಗರ ಉಂಟುಮಾಡಲು ಕಾಂಗ್ರೆಸ್ ಶಾಸಕರೇ ಮುಂದಾಗಿದ್ದಾರೆ. ಇದಕ್ಕೆ ಕಡಿವಾಣ ಹಾಕಿ ಪರಿಸ್ಥಿತಿ ತಿಳಿಗೊಳಿಸುವ ಸಲುವಾಗಿ ಚರ್ಚೆ ಸಂವಾದಕ್ಕಾಗಿ ಶಾಸಕಾಂಗ ಸಭೆ ಕರೆಯಲಾಗಿದೆ. ಬಿಜೆಪಿ ಮುಡಾ ಹಗರಣ, ಗುತ್ತಿಗೆದಾರರ ಆತ್ಮಹತ್ಯೆ, ಕೋಮುದ್ವೇಷದ ಪ್ರಕರಣಗಳು, ಬಾಕಿ ಬಿಲ್‌ಗಳ ಗೊಂದಲ ಸೇರಿದಂತೆ ಹಲವಾರು ವಿಚಾರಗಳನ್ನು ಮುಂದಿಟ್ಟುಕೊಂಡು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಮುಂದಾಗಿದೆ.
ಇಂತಹ ವೇಳೆ ಒಟ್ಟಾಗಿ ಪ್ರತ್ಯುತ್ತರ ನೀಡಬೇಕಾದ ಆಡಳಿತಾರೂಢ ಪಕ್ಷದ ಶಾಸಕರು ಸಚಿವರ ವಿರುದ್ಧ ಹೇಳಿಕೆ ನೀಡಲು ಮುಂದಾದರೆ ಗೊಂದಲಗಳಾಗಲಿವೆ ಎಂಬ ಕಾರಣಕ್ಕೆ ಹಾಗೂ ಬಜೆಟ್ ಅಧಿವೇಶನದಲ್ಲಿ ಸರ್ಕಾರಕ್ಕೆ ಶಕ್ತಿ ತುಂಬಬೇಕು ಎಂಬ ಹಿನ್ನೆಲೆಯಲ್ಲಿ ಎಲ್ಲಾ ಶಾಸಕರ ಜೊತೆ ಸಮಾಲೋಚನೆ ನಡೆಸಲು ಸಿದ್ದರಾಮಯ್ಯ ಮುಂದಾಗಿದ್ದಾರೆ.