Monday, May 6, 2024
Homeರಾಜಕೀಯಪ್ರಧಾನಿ ಮೋದಿ ಮಂಗಳಸೂತ್ರದ ಟೀಕೆಗೆ ಕಾಂಗ್ರೆಸ್ ಪ್ರತ್ಯುತ್ತರ

ಪ್ರಧಾನಿ ಮೋದಿ ಮಂಗಳಸೂತ್ರದ ಟೀಕೆಗೆ ಕಾಂಗ್ರೆಸ್ ಪ್ರತ್ಯುತ್ತರ

ಬೆಂಗಳೂರು,ಏ.24- ಹತ್ತು ವರ್ಷದ ಸುದೀರ್ಘ ಆಡಳಿತ ಮಾಡಿಯೂ ಒಂದೇ ಒಂದು ತನ್ನ ಸಾಧನೆ ಹೇಳಿ ಮತ ಕೇಳಲು ಮುಖವಿಲ್ಲದ ಮೋದಿಯವರು, ಅತ್ಯಂತ ನಿರ್ಲಜ್ಜ ಹಾಗೂ ಸಂವೇದನಾಶೂನ್ಯರಾಗಿ ಮಾತಾಡುತ್ತಿದ್ದಾರೆ, ಮಂಗಳಸೂತ್ರ ಎಂಬುದು ಮಹಿಳೆಯರ ಭಾವನಾತ್ಮಕ ವಿಚಾರ. ಯಾವ ವಿಚಾರವನ್ನು ಸಹಿಸಿದರೂ ಮಾಂಗಲ್ಯ ವಿಚಾರವನ್ನು ಮಹಿಳೆಯರು ಸಹಿಸಲಾರರು ಎಂದು ಕಾಂಗ್ರೆಸ್ ತಿರುಗೇಟು ನೀಡಿದೆ.

ತನ್ನ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್, ಪ್ರಧಾನಿ ನರೇಂದ್ರ ಮೋದಿಯವರ ಟೀಕೆಗೆ ಪ್ರತ್ಯುತ್ತರಿಸಿದೆ. ತಾಳಿ ನಮ್ಮ ದೇಶದ ಜನರ ಸಂಸ್ಕøತಿ, ಸಂಪ್ರದಾಯ, ಭಾವನೆಗಳಲ್ಲಿ ಅಡಕವಾಗಿರುವ ಪವಿತ್ರ ವಸ್ತು. ಇಂತಹ ತಾಳಿಯ ವಿಚಾರದಲ್ಲಿ ರಾಜಕೀಯ ಮಾಡುತ್ತಿರುವ ಹತಾಶ ಮೋದಿಯವರು ದೇಶದ ಮಹಿಳೆಯರ ಮಾಂಗಲ್ಯವನ್ನು ಕಿತ್ತು ವಿಧವೆಯರನ್ನಾಗಿ ನೋಡಲು ಬಯಸುತ್ತಿದ್ದಾರೆಯೇ? ಹೀಗೆ ಬಯಸಿದರೂ ಆಶ್ಚರ್ಯವಿಲ್ಲ, ಏಕೆಂದರೆ ಮಾಂಗಲ್ಯ ಕಿತ್ತುಕೊಂಡ ಕರಾಳ ಇತಿಹಾಸವೇ ಇವರಿಗಿದೆ ಎಂದು ಕಿಡಿಕಾರಿದೆ.

ಗೋದ್ರಾ ಗಲಭೆಯಲ್ಲಿ ಸುಮಾರು 2000 ಜನರ ಮಾಂಗಲ್ಯ ಕಿತ್ತುಕೊಂಡವರಲ್ಲವೇ? ರೈತ ಪ್ರತಿಭಟನೆಯಲ್ಲಿ 700 ರೈತ ಮಹಿಳೆಯರ ಮಾಂಗಲ್ಯ ಕಿತ್ತುಕೊಂಡವರಲ್ಲವೇ? ಕೋವಿಡ್ ಸಮಯದಲ್ಲಿ ಆಕ್ಸಿಜನ್, ಚಿಕಿತ್ಸೆ ನೀಡದೆ ಸಾವಿರಾರು ಜನರ ಮಾಂಗಲ್ಯ ಕಿತ್ತುಕೊಂಡವರು ನೀವಲ್ಲವೇ? ಇಂತಹ ಮಾಂಗಲ್ಯ ಕಸಿಯುವ ಬಿಜೆಪಿಯಿಂದ ದೇಶದ ಮಹಿಳೆಯರ ಜೀವನಕ್ಕೆ ಭದ್ರತೆ ದೊರೆಯುವುದು ಅಸಾಧ್ಯ ಎಂದು ವಾಗ್ದಾಳಿ ನಡೆಸಿದೆ.

ಸ್ವತಂತ್ರಾನಂತರ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ವಹಿಸಿಕೊಂಡಾಗ ದೇಶದ ಸ್ಥಿತಿ ಅಕ್ಷರಶಃ ಸೊನ್ನೆ ಎನ್ನುವಂತಿತ್ತು, ಕಾಂಗ್ರೆಸ್ ಮುಂದೆ ಏಕಕಾಲಕ್ಕೆ ಹಲವು ಸವಾಲುಗಳಿದ್ದವು, ದೇಶದ ರಕ್ಷಣಾ ವ್ಯವಸ್ಥೆ ಬಲಪಡಿಸುವುದರಿಂದ ಹಿಡಿದು, ಮೂಲಸೌಕರ್ಯದ ಅಭಿವೃದ್ಧಿ, ಅರ್ಥ ವ್ಯವಸ್ಥೆಯ ಬಲವರ್ಧನೆ, ಉದ್ಯಮಗಳ ಸ್ಥಾಪನೆ, ನೀರಾವರಿ ವ್ಯವಸ್ಥೆ ಸೇರಿದಂತೆ ದೇಶದ ಸರ್ವತೋಮುಖ ಅಭಿವೃದ್ಧಿ ಮಾಡುವ ಸವಾಲಿತ್ತು.

ಜೊತೆಗೆ ಶೇ. 88 ರಷ್ಟಿದ್ದ ಅನಕ್ಷರತೆಯ ಪ್ರಮಾಣವನ್ನು ಕಡಿಮೆ ಮಾಡಿ ದೇಶದ ಜನರಿಗೆ ಶಿಕ್ಷಣ ನೀಡಬೇಕಾದ ಸವಾಲು, ಸಾಂಕ್ರಾಮಿಕ ರೋಗಗಳನ್ನು ಎದುರಿಸುತ್ತಾ ಆರೋಗ್ಯ ಕ್ಷೇತ್ರವನ್ನು ಬಲಪಡಿಸುವ ಸವಾಲು, ವೈಜ್ಞಾನಿಕ ಕೃಷಿಯ ಮೂಲಕ ಆಹಾರ ಭದ್ರತೆಯನ್ನು ಸ್ಥಾಪಿಸುವ ಸವಾಲುಗಳನ್ನು ಏಕಕಾಲಕ್ಕೆ ಎದುರಿಸಿದ ಕಾಂಗ್ರೆಸ್ ದೇಶವನ್ನು ಸಮರ್ಥವಾಗಿ ಕಟ್ಟಿದೆ ಎಂದು ಸಮರ್ಥಿಸಿಕೊಳ್ಳಲಾಗಿದೆ.

ಉಚಿತ ಶಿಕ್ಷಣ, ಉಚಿತ ಆರೋಗ್ಯ ಸೇವೆ, ಉಚಿತ ಸರ್ಕಾರಿ ಸೇವೆಗಳನ್ನು ನೀಡಿ ಜನರನ್ನು ಸದೃಢರನ್ನಾಗಿಸುವ ನಮ್ಮ ಪ್ರಯತ್ನದ ಫಲವಾಗಿ ಇಂದು ಭಾರತದ ಅಭಿವೃದ್ಧಿಶೀಲ ರಾಷ್ಟ್ರವಾಗಿ ಮುನ್ನುವಂತಾಗಿದೆ. ಕಾಂಗ್ರೆಸ್ ನಾಯಕರ ತ್ಯಾಗ, ಬಲಿದಾನ ಹಾಗೂ ಜನಪರ ಕೆಲಸಗಳ ಬಗ್ಗೆ ದೇಶದ ಜನ ಮೆಚ್ಚುಗೆಯ ಭಾವನೆ ಹೊಂದಿದ್ದಾರೆ ಎಂದು ಹೇಳಿಕೊಂಡಿದೆ.

RELATED ARTICLES

Latest News