Sunday, July 21, 2024
Homeರಾಜ್ಯಸಿಎಸ್‌‍ಆರ್‌ ನೆರವಿನಲ್ಲಿ 2 ಸಾವಿರ ಶಾಲೆಗಳ ನಿರ್ಮಾಣ : ಸಿಎಂ

ಸಿಎಸ್‌‍ಆರ್‌ ನೆರವಿನಲ್ಲಿ 2 ಸಾವಿರ ಶಾಲೆಗಳ ನಿರ್ಮಾಣ : ಸಿಎಂ

ಬೆಂಗಳೂರು,ಜು.9– ಬಜೆಟ್‌ನಲ್ಲಿ ಘೋಷಿಸಿರುವಂತೆ ಪಂಚಾಯತ್‌ ವ್ಯಾಪ್ತಿಯಲ್ಲಿ 2 ಸಾವಿರ ಮಾದರಿ ಶಾಲೆಗಳನ್ನು ಸಿಎಸ್‌‍ಆರ್‌ ಅಡಿಯಲ್ಲಿ ನಿರ್ಮಿ ಸುವ ಮಹತ್ವಾಕಾಂಕ್ಷೆಯ ಯೋಜನೆ ಆರಂಭಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ವಿಧಾನಸೌಧದಲ್ಲಿಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ಎರಡನೇ ದಿನದ ಸಭೆಯಲ್ಲಿ ಮಾತನಾಡಿದ ಅವರು, ಇದಕ್ಕಾಗಿ ಹಿರಿಯ ಸಚಿವರು ಹಾಗೂ ಅಧಿಕಾರಿಗಳ ಸಮಿತಿಯನ್ನು ರಚಿಸಲಾಗಿದೆ.

ರಾಜ್ಯದಲ್ಲಿ ಖಾಸಗಿ ಕಂಪೆನಿಗಳು ಕಾಯ್ದೆ ಪ್ರಕಾರ ಕಳೆದ ಸಾಲಿನಲ್ಲಿ 8,163 ಕೋಟಿ ಕಡ್ಡಾಯವಾಗಿ ಸಿಎಸ್‌‍ಆರ್‌ ಅಡಿ ವೆಚ್ಚ ಮಾಡಬೇಕಾಗಿತ್ತು. ಖಾಸಗಿ ಕಂಪೆನಿಗಳು ಈ ಅವಧಿಯಲ್ಲಿ 4 ಲಕ್ಷ ಕೋಟಿ ರೂ. ಲಾಭ ಗಳಿಸಿವೆ. 1,190 ಕೋಟಿ ಕಳೆದ ವರ್ಷ ಸಿಎಸ್‌‍ಆರ್‌ ಅಡಿ ವೆಚ್ಚ ಮಾಡಿದ್ದು, ಶೇ.30ರಷ್ಟು ಮಾತ್ರ ಸಿಎಸ್ಆರ್‌ ಅಡಿ ಬಳಸುತ್ತಿವೆ ಎಂದರು.

ರಾಮನಗರ ಜಿಲ್ಲೆಯಲ್ಲಿ ಪೈಲೆಟ್‌ ಯೋಜನೆಯಾಗಿ ಆರಂಭಿಸಲಾಗಿದ್ದು, ಮೂರು ಪಂಚಾಯತ್‌ಗಳಿಗೆ ಒಂದು ಶಾಲೆಯಂತೆ ಈಗಾಗಲೇ 20 ಶಾಲೆ ನಿರ್ಮಾಣ ಕಾರ್ಯ ಪ್ರಾರಂಭವಾಗಿದೆ. ಜಿಲ್ಲೆಯಲ್ಲಿ ಟೊಯೋಟಾ ಕಂಪೆನಿ ಒಂದೇ 20 ಕೋಟಿ ಸಿಎಸ್‌‍ಆರ್‌ ಅಡಿ ಒದಗಿಸಿದ್ದಾರೆ. ನಾವು 3 ಎಕರೆ ಜಮೀನು ಒದಗಿಸಬೇಕು. ಶಾಲೆಯ ಮಾದರಿಯನ್ನು ಮಾತ್ರ ನಾವು ಒದಗಿಸುತ್ತೇವೆ. ನಿರ್ಮಾಣ ಕಾರ್ಯವನ್ನು ಅವರೇ ಮಾಡುತ್ತಾರೆ ಎಂದು ಹೇಳಿದರು.

ರಾಜ್ಯದಲ್ಲಿ ಈಗಾಗಲೇ 500 ಸ್ಥಳಗಳನ್ನು ಗುರುತಿಸಲಾಗಿದೆ. ಮುಂದಿನ ಮೂರು ವರ್ಷಗಳಲ್ಲಿ 2 ಸಾವಿರ ಶಾಲೆಗಳನ್ನು ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಪ್ರಮುಖ ಖಾಸಗಿ ಶಾಲೆಗಳು ಸರ್ಕಾರಿ ಶಾಲೆಯನ್ನು ದತ್ತು ಪಡೆದುಕೊಳ್ಳಲು ಸೂಚನೆ ನೀಡಿದ್ದೇವೆ ಎಂದರು.

ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮತ್ತೆ ಶಾಲೆಗೆ ಸೇರಿಸಿ:
ಕಲಿಕೆಯಿಂದ ದೂರ ಉಳಿದ ಮಕ್ಕಳನ್ನು ಪತ್ತೆ ಹಚ್ಚಿ ಶಾಲೆಗೆ ಸೇರಿಸಿ ಎಂದ ಅವರು, ರಾಜಪ್ಪ ಎನ್ನುವ ಮೇಸ್ಟ್ರು ಶಾಲೆಯಿಂದ ಹೊರಗೆ ಉಳಿದಿದ್ದ ನನ್ನನ್ನು ಶಾಲೆಗೆ ಸೇರಿಸದಿದ್ದರೆ ನಾನು ಮುಖ್ಯಮಂತ್ರಿಯೇ ಆಗುತ್ತಿರಲಿಲ್ಲ ಎಂದು ಹೇಳಿದರು.

ಶಾಲೆಯಿಂದ ಯಾವ ಮಕ್ಕಳೂ ಹೊರಗುಳಿಯಬಾರದು. ಪ್ರತಿ ವರ್ಷ 6 ರಿಂದ 16 ವರ್ಷದೊಳಗಿನ ಮಕ್ಕಳ ಸಮೀಕ್ಷೆಯನ್ನು ನಡೆಸಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲೆಗೆ ಮತ್ತೆ ಸೇರಿಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

RELATED ARTICLES

Latest News