ತುಮಕೂರು,ಜ.27- ಪ್ರವಾಸೋದ್ಯಮ ಅಭಿವೃದ್ಧಿಗಾಗಿ ನಗರದ ಅಮಾನಿಕೆರೆಯಲ್ಲಿ 25 ಕೋಟಿ ರೂ. ವೆಚ್ಚದಲ್ಲಿ ಗ್ಲಾಸ್ ಬ್ರಿಡ್ಜ್ (ಗಾಜಿನ ಸೇತುವೆ) ನಿರ್ಮಾಣಕ್ಕೆ ನೀಲ ನಕ್ಷೆಯನ್ನು ಸಿದ್ಧಪಡಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಜಿಲ್ಲಾ ಕ್ರೀಡಾಂಗಣದಲ್ಲಿ ಗಣರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾತ ಗಾಂಧಿ ನಗರ ವಿಕಾಸ ಯೋಜನೆಯಡಿ ತುಮಕೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು 200 ಕೋಟಿ ರೂ.ಗಳ ಅನುದಾನಕ್ಕೆ ಸರ್ಕಾರ ಅನುಮೋದನೆ ನೀಡಿದ್ದು, ಈ ಅನುದಾನದಲ್ಲಿ 25 ಕೋಟಿ ರೂ.ಗಳನ್ನು ಬಳಸಿಕೊಂಡು ಗಾಜಿನ ಸೇತುವೆಯನ್ನು ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.
ಸಾರ್ಟ್ ಸಿಟಿ ಯೋಜನೆಯಡಿ ಮಹಾನಗರ ಪಾಲಿಕೆ ವ್ಯಾಪ್ತಿಯ 5 ವಾರ್ಡ್‌ಗಳನ್ನು ಈಗಾಗಲೇ ಅಭಿವೃದ್ಧಿಪಡಿಸಲಾಗಿದ್ದು, ಉಳಿದ 30 ವಾರ್ಡ್‌ಗಳ ಅಭಿವೃದ್ಧಿಗಾಗಿ 200 ಕೋಟಿ ರೂ.ಗಳನ್ನು ವ್ಯಯಿಸಲಾಗುವುದು.
ಈ ಅನುದಾನವನ್ನು ಬಳಸಿಕೊಂಡು ಬೆಂಗಳೂರಿನ ಲಾಲ್‌ಬಾಗ್ ಮಾದರಿಯಲ್ಲಿ ನಗರದ ಅಕ್ಕ-ತಂಗಿ ಕೆರೆ ಅಭಿವೃದ್ಧಿ, 137 ಕೋಟಿ ರೂ. ವೆಚ್ಚದಲ್ಲಿ 202 ರಸ್ತೆ ನಿರ್ಮಾಣ, ಅಮಾನಿಕೆರೆಯನ್ನು ಸ್ವಚ್ಛಗೊಳಿಸಿ ಮಕ್ಕಳಿಗಾಗಿ ಸಾಹಸ ಕ್ರೀಡೆಗೆ ಅವಕಾಶ ನೀಡುವುದರೊಂದಿಗೆ ಐಲ್ಯಾಂಡ್ ನಿರ್ಮಾಣ, 18 ಉದ್ಯಾನವನಗಳ ಅಭಿವೃದ್ಧಿ, ತಲಾ 6 ಕೋಟಿ ರೂ. ವೆಚ್ಚದಲ್ಲಿ ನಗರದ ಖಾಸಗಿ ಬಸ್ ನಿಲ್ದಾಣದ ಆಧುನೀಕರಣ ಹಾಗೂ ಗುಬ್ಬಿ ವೀರಣ್ಣ ಕಲಾ ಕ್ಷೇತ್ರದ ಕಟ್ಟಡವನ್ನು ಅಭಿವೃದ್ಧಿಪಡಿಸಲಾಗುವುದು ಎಂದು ತಿಳಿಸಿದರು.
ನಗರದಲ್ಲಿ ಶವಾಗಾರ ನಿರ್ಮಾಣಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ನಾಗರಿಕರ ಆರೋಗ್ಯದ ಹಿತದೃಷ್ಟಿಯಿಂದ ನೈರ್ಮಲ್ಯತೆ(ಹೈಜೆನಿಕ್)ಯಿಂದ ಕೂಡಿದ ಮಾಂಸ ಮಾರಾಟ ಮಾರುಕಟ್ಟೆಯನ್ನು ನಿರ್ಮಿಸಲು ಪಾಲಿಕೆ ಮುಂದಾಗಿದೆ ಎಂದು ಹೇಳಿದರು.
ರಾಜ್ಯದ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತುಮಕೂರಿನ ಆಸು-ಪಾಸಿನಲ್ಲಿ ನಿರ್ಮಿಸುವಂತೆ ಐಟಿಬಿಟಿ ಸಚಿವರಿಗೆ ಮನವಿ ಮಾಡಲಾಗಿದ್ದು, ವಿಮಾನ ನಿಲ್ದಾಣ ನಿರ್ಮಾಣಕ್ಕೆ ಈಗಾಗಲೇ ಜಿಲ್ಲೆಯ ವಸಂತ ನರಸಾಪುರ ಕೈಗಾರಿಕಾ ಪ್ರದೇಶಕ್ಕೆ ಹೊಂದಿಕೊಂಡತೆ ರಾಷ್ಟ್ರೀಯ ಹೆದ್ದಾರಿ 48ರ ಸಮೀಪ 3,000 ಎಕರೆ ಹಾಗೂ ಶಿರಾ ತಾಲ್ಲೂಕಿನ ಸೀಬಿ ದೇವಸ್ಥಾನದ ಸಮೀಪ 5,000 ಎಕರೆ ಭೂಮಿಯನ್ನು ಗುರುತಿಸಲಾಗಿದೆ.
ಜಿಲ್ಲೆಗೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಮಂಜೂರಾತಿ ನೀಡಬೇಕೆಂದು ಜಿಲ್ಲೆಯ ಎಲ್ಲಾ ಶಾಸಕರು, ಸಂಸದರು ಪಕ್ಷಾತೀತವಾಗಿ ಸರ್ಕಾರದ ಮೇಲೆ ಒತ್ತಾಯ ತರಲಾಗುವುದು ಎಂದು ಹೇಳಿದರು.
ಜಿಲ್ಲೆಯಲ್ಲಿ ಹೆಲಿಕಾಫ್ಟರ್ ತಯಾರಿಕಾ ಘಟಕ ಕಾರ್ಯ ನಿರ್ವಹಿಸುತ್ತಿರುವ ಗುರುತಿಗಾಗಿ ನಗರದ ಹೃದಯಭಾಗದ ಟೌನ್‌ಹಾಲ್ ಪಕ್ಕದಲ್ಲಿ ಹೆಲಿಕಾಫ್ಟರ್ ಮಾದರಿಯನ್ನು ಇರಿಸಲಾಗುವುದು. ಪಾಲಿಕೆ ಆವರಣದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಪುತ್ಥಳಿ ನಿರ್ಮಿಸುವ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದ್ದು, ಸರ್ಕಾರದಿಂದ ಅನುಮತಿ ದೊರೆತ ನಂತರ ಪುತ್ಥಳಿಯನ್ನು ಸ್ಥಾಪಿಸಲಾಗುವುದು. ಪುತ್ಥಳಿಯನ್ನು ಸ್ಥಾಪನೆಗೆ ಶ್ರೀ ಸಿದ್ಧಾರ್ಥ ಸಂಸ್ಥೆಯಿಂದ 36 ಲಕ್ಷ ರೂ.ಗಳನ್ನು ಕೊಡುಗೆಯಾಗಿ ನೀಡಲಾಗುವುದು ಎಂದು ತಿಳಿಸಿದರು.