Friday, July 4, 2025
Homeರಾಜ್ಯಬಾಕಿ ಬಿಲ್‌ ಬಿಡುಗಡೆ ಮಾಡುವಂತೆ ಸರ್ಕಾರದ ಮುಂದೆ ಗುತ್ತಿಗೆದಾರರ ಕಣ್ಣೀರು

ಬಾಕಿ ಬಿಲ್‌ ಬಿಡುಗಡೆ ಮಾಡುವಂತೆ ಸರ್ಕಾರದ ಮುಂದೆ ಗುತ್ತಿಗೆದಾರರ ಕಣ್ಣೀರು

Contractors' tears before the government demanding release of pending bills

ಬೆಂಗಳೂರು,ಜು.4- ಕಳೆದ ಎರಡೂವರೆ ವರ್ಷಗ ಳಿಂದಲೂ ರಾಜ್ಯದಲ್ಲಿ ಗುತ್ತಿಗೆದಾರರ ಸಮಸ್ಯೆಗಳಿಗೆ ಸರಿಯಾದ ಸ್ಪಂದನೆ ಸಿಗುತ್ತಿಲ್ಲ. ಬಾಕಿ ಬಿಲ್‌ಗಳು ಬಿಡುಗಡೆಯಾಗುತ್ತಿಲ್ಲ ಎಂದು ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು ಅಸಮಾಧಾನ ತೋಡಿಕೊಂಡಿದ್ದಾರೆ.

ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯುವ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ ಸಂಘದ ಪದಾಧಿಕಾರಿಗಳು ಪೂರ್ವ ಭಾವಿ ಸಭೆ ನಡೆಸಿ ಚರ್ಚೆ ನಡೆಸಿದರು.ಪ್ರಮುಖವಾಗಿ ವಿವಿಧ ಇಲಾಖೆಗಳಿಂದ 34 ಸಾವಿರ ಕೋಟಿ ರೂ.ಗಳ ಬಿಲ್‌ಗಳು ಬಾಕಿ ಇದ್ದು, ಅದನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಲಾಗಿದೆ.

ರಾಜ್ಯದಲ್ಲಿ ಕಾಂಗ್ರೆಸ್‌‍ ಸರ್ಕಾರ ಅಧಿಕಾರಕ್ಕೆ ಬರಲು ಗುತ್ತಿಗೆದಾರರ ಸಂಘದ ಪಾತ್ರ ಬಹಳ ಮುಖ್ಯವಾಗಿದೆ. ಶೇ.40ರಷ್ಟು ಕಮಿಷನ್‌ ಹಗರಣದ ಕುರಿತು ಗುತ್ತಿಗೆದಾರರ ಸಂಘ ಬರೆದ ಪತ್ರವನ್ನು ಆಧಾರವಾಗಿಟ್ಟುಕೊಂಡು ಕಾಂಗ್ರೆಸ್‌‍ ಪಕ್ಷ ಆಗಿನ ಬಿಜೆಪಿ ಸರ್ಕಾರದ ವಿರುದ್ಧ ನಿರಂತರ ಹೋರಾಟ ರೂಪಿಸಿತ್ತು. ಜನ ಕೂಡ ಕಾಂಗ್ರೆಸ್‌‍ ಪಕ್ಷವನ್ನು ಬೆಂಬಲಿಸಿದರು.

ಚುನಾವಣೆಗೂ ಮೊದಲು ಗುತ್ತಿಗೆದಾರರ ಸಂಘದ ಪದಾಧಿಕಾರಿಗಳೊಂದಿಗೆ ಚರ್ಚೆ ನಡೆಸುತ್ತಿದ್ದ ಕಾಂಗ್ರೆಸ್‌‍ನ ನಾಯಕರು ಎಲ್ಲಾ ಬೇಡಿಕೆಗಳಿಗೂ ಸಹಮತ ವ್ಯಕ್ತಪಡಿಸುವುದಾಗಿ ಹೇಳುತ್ತಿದ್ದರು. ತಮ ಸರ್ಕಾರ ಅಧಿಕಾರಕ್ಕೆ ಬಂದರೆ ಪರಿಹಾರ ದೊರಕಿಸುವ ಭರವಸೆಯನ್ನೂ ನೀಡುತ್ತಿದ್ದರು. ಆದರೆ ಅಧಿಕಾರಕ್ಕೆ ಬಂದ ಮೇಲೆ ಯಾವುದೂ ಬದಲಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಲಾಗಿದೆ.

ಗುತ್ತಿಗೆದಾರರ ಸಂಘದ ಬೇಡಿಕೆಗಳ ಬಗ್ಗೆ ಸರ್ಕಾರ ಅನಾಧಾರಣೆಗೊಳಿಸುತ್ತಿದೆ. ಬಾಕಿ ಬಿಲ್‌ಗಳಿಗೆ ನೆಪಗಳ ಮೇಲೆ ನೆಪಗಳನ್ನು ಹೇಳುತ್ತಿದೆ. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಮರ್ಪಕವಾದ ಅನುದಾನ ಮೀಸಲಿಡದೇ ಕಾಮಗಾರಿಗಳನ್ನು ಮಂಜೂರು ಮಾಡಲಾಗಿತ್ತು. ಅದಕ್ಕಾಗಿ ಕಾಂಗ್ರೆಸ್‌‍ ಸರ್ಕಾರ ಅಧಿಕಾರಕ್ಕೆ ಬಂದಾಗ ಬಾಕಿ ಬಿಲ್‌ಗಳ ಹೊರೆ ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ.

ಪ್ರತೀ ಸರ್ಕಾರದಲ್ಲೂ ಇದು ಸಾಮಾನ್ಯ. ಸರ್ಕಾರದ ಬದಲಾದಾಗ ಹಿಂದಿನ ಆಡಳಿತದ ಬಿಲ್‌ಗಳನ್ನು ಇತ್ಯರ್ಥಪಡಿಸುವುದು ನಡೆದುಕೊಂಡು ಬಂದಿದೆ.ಕಾಂಗ್ರೆಸ್‌‍ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಹೆಚ್ಚು ಒತ್ತು ನೀಡಿದ್ದು, ಅಭಿವೃದ್ಧಿ ಕಾಮಗಾರಿಗಳು ನೆನೆಗುದಿಗೆ ಬಿದ್ದಿವೆ. ಹೀಗಾಗಿ ಬಾಕಿ ಬಿಲ್‌ಗಳು ಇತ್ಯರ್ಥಗೊಳ್ಳುತ್ತಿಲ್ಲ. ಕಾಮಗಾರಿಗಳು ನಡೆಯುತ್ತಿಲ್ಲ ಎಂದು ಪದಾಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

34 ಸಾವಿರ ಕೋಟಿ ರೂ.ಗಳ ಬಿಲ್‌ಗಳನ್ನು ಇತ್ಯರ್ಥಪಡಿಸದೇ ಇದ್ದರೆ, ಜಿಲ್ಲಾಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲಾಗುತ್ತದೆ. ಭ್ರಷ್ಟಾಚಾರ ಕೂಡ ಎಂದಿನಂತೆ ಮುಂದುವರೆದಿದೆ ಎಂದು ಪದಾಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದು, ಇವಿಷ್ಟೂ ವಿಚಾರಗಳನ್ನು ಮುಖ್ಯಮಂತ್ರಿಯವರ ಗಮನಕ್ಕೆ ತರಬೇಕು ಎಂದು ಪದಾಧಿಕಾರಿಗಳು ಚರ್ಚಿಸಿದರು.

ಈಗಾಗಲೇ ಹಲವಾರು ಸುತ್ತಿನ ಸಭೆಗಳಾಗಿವೆ. ಯಾವುದೇ ಪ್ರಯೋಜನವಾಗಿಲ್ಲ. ಸಭೆಗಳ ಮೇಲೆ ಸಭೆಗಳನ್ನು ನಡೆಸುವುದರಿಂದ ಯಾವುದೇ ಲಾಭ ಇಲ್ಲ. ಫಲಪ್ರದವಾದ ಫಲಿತಾಂಶಗಳಿದ್ದರೆ ಮಾತ್ರ ಸಭೆಯಲ್ಲಿ ಭಾಗವಹಿಸುವುದಾಗಿ ಈ ಬಾರಿ ಸರ್ಕಾರಕ್ಕೆ ಎಚ್ಚರಿಕೆ ನೀಡಬೇಕು ಎಂದು ಪದಾಧಿಕಾರಿಗಳು ಚರ್ಚಿಸಿದ್ದಾರೆ.

RELATED ARTICLES

Latest News